Breaking News

ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲು ಆಗ್ರಹಿಸಿ ಮನವಿ

Spread the love

ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲು ಆಗ್ರಹಿಸಿ ಮನವಿ

 

ಯುವ ಭಾರತ ಸುದ್ದಿ ಬೆಳಗಾವಿ : ನರೇಗಾ ಯೋಜನೆ ಅಡಿಯಲ್ಲಿ ಜಿಲ್ಲೆಯ ಜನರಿಗೆ ಕೆಲಸ ನೀಡಬೇಕು ಎಂದು ಕೆಲಸ ನೀಡಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಬೆಳಗಾವಿ ಜಿಲ್ಲಾ ಘಟಕ ಒತ್ತಾಯಿಸಿದೆ.

ಬಗರ್ ಹುಕುಂ ಸಾಗುವಳಿದಾರರ ಹೋರಾಟದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಸರಕಾರ ತಂದಿರುವ ನರೇಗಾ ಯೋಜನೆಯಲ್ಲಿ ಕೆಲಸ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೂ ಕೆಲಸ ನೀಡಿಲ್ಲ, ಅನಿವಾರ್ಯವಾಗಿ ಗ್ರಾಮದ ಜನರು ಜೀವನೋಪಾಯಕ್ಕಾಗಿ ಪಟ್ಟಣದ ದಾರಿ ಹಿಡಿಯುವಂತಾಗಿದೆ. ಆದ ಕಾರಣ ಈ ಕೂಡಲೇ ಗ್ರಾಮದ ಜನರಿಗೆ ಕೆಲಸ ನೀಡಬೇಕು ಎಂದು ಎಐಕೆಕೆಎಂಎಸ್ ಆಗ್ರಹಿಸಿದೆ.

ಬೇಡಿಕೆಗಳು : ಈ ಕೂಡಲೇ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಿಸಬೇಕು. ಸಂಪೂರ್ಣ 150 ಮಾನವ ದಿನಗಳ ಕೆಲಸ ನೀಡಬೇಕು. ನರೇಗಾ ಕೂಲಿಯನ್ನು ರೂ.600 /- ವರೆಗೆ ಹೆಚ್ಚಿಸಬೇಕು. ಬೇಸಿಗೆ ಸಂದರ್ಭದಲ್ಲಿ ಕೆಲಸದ ಅವಧಿಯನ್ನು ಬದಲಾಯಿಸಬೇಕು. ನರೇಗಾ ಕಾರ್ಮಿಕರ ಸೌಲತ್ತುಗಳನ್ನು ಸರಿಯಾಗಿ ನೀಡಬೇಕು.

 

ಅತಿಯಾದ ಮಳೆಯಿಂದಾಗಿ ರೈತರ ಬೆಳೆ ನಷ್ಟವಾಗಿ ಗ್ರಾಮಗಳ ಜನರು ಚಿಂತೆಗೀಡಾಗಿದ್ದಾರೆ. ಯಾವುದೇ ಆದಾಯದ ಮೂಲವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ತಾವುಗಳು ಈ ಕೂಡಲೇ ಗಮನವಹಿಸಿ ನರೇಗಾ ಯೋಜನೆಯ ಅಡಿಯಲ್ಲಿ ಕೆಲಸ ಪ್ರಾರಂಭಿಸಬೇಕು ಮತ್ತು ಸಂಪೂರ್ಣ 150 ಮಾನವ ದಿನಗಳನ್ನು ನೀಡಬೇಕು ಹಾಗೂ ಇಂತಹ ಬೆಲೆ ಏರಿಕೆ ಸಂದರ್ಭದಲ್ಲಿ ಕೂಲಿಯನ್ನು ರೂ.600 /- ವರೆಗೆ ಹೆಚ್ಚಿಸಬೇಕೆಂದು ಎಐಕೆಕೆಎಂಎಸ್ ಒತ್ತಾಯಿಸಿದೆ.

ಬಗರ್ ಹುಕುಂ ಸಾಗುವಳಿ ಭೂ ಕಬಳಿಕೆಯಲ್ಲ, ಬಂಡವಾಳಶಾಹಿಗಳು ಹಾಗೂ ಕಂಪೆನಿಗಳು ಭೂಮಿಯನ್ನು ಆಕ್ರಮಿಸಿಕೊಳ್ಳುವುದು ಭೂಕಬಳಿಕೆ. ಬಡ ರೈತರು ಭೂಮಿ ಕೇಳುವುದು ನೈತಿಕ ಹಕ್ಕು. ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಬಡ ರೈತರ ಪರವಾಗಿ ನಿಲ್ಲಬೇಕಾದುದು ಸರ್ಕಾರದ ಕರ್ತವ್ಯ ಎಂದು ಖ್ಯಾತ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.

ಇಂದು ಸಣ್ಣ ರೈತರು ಕಾರ್ಮಿಕರಾಗುತ್ತಿದ್ದಾರೆ. ಅವರು ಹರಿವ ನೀರಿನಂತೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ. ಅಂತಹ ರೈತರ ಪರವಾಗಿ ನಿಲ್ಲಬೇಕಾದುದು ಸರ್ಕಾರದ ಕರ್ತವ್ಯ. ಆದ್ದರಿಂದ ರೈತರಿಗೆ ಭೂಮಿಯನ್ನು ಗುತ್ತಿಗೆ ಕೊಡುವ ಬದಲು ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಕೆ.ಉಮಾ ಮಾತನಾಡಿ, ರೈತರಿಂದ ಯಾವುದೇ ಲಾಭದಾಸೆಗಳಿಲ್ಲದೆ, ಹೊಟ್ಟೆಪಾಡಿಗಾಗಿ ಭೂಮಿ ಹಾಗೂ ಪ್ರಕೃತಿಯನ್ನು ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅವರು ಆಧುನಿಕ ಉಪಕರಣಗಳಿಲ್ಲದೆ, ಸರ್ಕಾರದ ಬೆಂಬಲವಿಲ್ಲದೆ ಕೃಷಿ ಮಾಡುತ್ತಿರುವುದರಿಂದ ಮತ್ತು ಅತಿವೃಷ್ಟಿ, ಅನಾವೃಷ್ಟಿಗಳಿಂದ ನಿರ್ಗತಿಕರಾಗುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಬೆಂಬಲ ನೀಡುತ್ತಿಲ್ಲ. ಜಾಗತೀಕರಣದ ನೀತಿಗಳನ್ನು ಅನುಸರಿಸಿ ಸಬ್ಸಿಡಿಯನ್ನು ತೆಗೆಯುತ್ತಿದ್ದಾರೆ. ಕೃಷಿಗೆ ಸಬ್ಸಿಡಿ ಕೊಟ್ಟರೆ ನಷ್ಟವೆನ್ನುವ ವಾದವಿದೆ. ಆದರೆ ಮಂತ್ರಿ ಮಹೋದಯರ ಸಂಬಳವನ್ನು ದುಪ್ಪಟ್ಟು ಹೆಚ್ಚಳ ಮಾಡಿದ್ದಾರೆ. ಇದು ನಷ್ಟವಲ್ಲವೇ? ರೈತರ ಸಾಲ ಮನ್ನಾ ಮಾಡದ ಸರ್ಕಾರ ಕಾರ್ಪೊರೆಟ್ ಕಂಪೆನಿಗಳ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಇದು ನಷ್ಟವಲ್ಲವೇ? ರೈತರು ದುಡಿಯು ನಾಡಿಗೆ ಅನ್ನ ನೀಡುವವರು. ಅವರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಅವರ ಭೂಮಿಗೆ ಹಕ್ಕಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಎಐಕೆಕೆಎಂಎಸ್ ಸಂಘಟನೆಯ ರಾಜ್ಯ ಅಧ್ಯಕ್ಷ ಕಾಮ್ರೇಡ್ ಹೆಚ್.ವಿ.ದಿವಾಕರ್ ಮಾತನಾಡಿ, ಸುಮಾರು 70-80 ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಹಸನುಗೊಳಿಸಿ ಸಾಗುವಳಿ ಮಾಡುತ್ತಿರುವ ಲಕ್ಷಾಂತರ ರೈತರಿಗೆ ಸರ್ಕಾರ ಹಕ್ಕುಪತ್ರವನ್ನು ಕೂಡಲೇ ವಿತರಿಸಬೇಕು. ದೇಶಕ್ಕೆ ಅನ್ನ ನೀಡುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಮೇಲೆ ವಿವಿಧ ಕಡೆಗಳಿಂದ ದಾಳಿಯಾಗುತ್ತಿದೆ. ಅರಣ್ಯ ಇಲಾಖೆಯವರು ಏಕಾಏಕಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ಜಮೀನನ್ನು ವಶಪಡಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ದೈಹಿಕವಾಗಿಯೂ ಹಲ್ಲೆಗಳು ನಡೆಯುತ್ತಿವೆ. ಸರ್ಕಾರವೂ ಇದರಲ್ಲಿ ಹಿಂದೆ ಬೀಳದೆ, ವಿದ್ಯುತ್ ಕಾಯ್ದೆಯನ್ನು ಜಾರಿಗೊಳಿಸುತ್ತಾ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಹಾಕುವ ಹುನ್ನಾರ ನಡೆಸುತ್ತಿದೆ. ಈಗಾಗಲೇ ಕೃಷಿ ಒಳಸುರಿಗಳ ಬೆಲೆ ವಿಪರೀತವಾಗಿ ಹೆಚ್ಚಿದೆ. ಆದರೆ ಅವರಿಗೆ ಯಾವುದೇ ಭದ್ರತೆಯಿಲ್ಲದೆ, ಲಕ್ಷಾಂತರ ರೈತರು ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಇವುಗಳ ಅಂತಿಮ ಪರಿಹಾರ ಹೋರಾಟದಲ್ಲಿದೆ. ಹಾಗಾಗಿ ಚುನಾವಣಾ ರಾಜಕೀಯ ಬಿಟ್ಟು ಹೋರಾಟದ ರಾಜಕೀಯವನ್ನು ಕೈಗೆತ್ತಿಕೊಳ್ಳಿಯೆಂದು ಕರೆ ನೀಡಿದರು.

ಎಐಕೆಕೆಎಂಎಸ್ ಸಂಘಟನೆಯ ಅಖಿಲ ಭಾರತ ಸಮಿತಿಯ ಉಪಾಧ್ಯಕ್ಷ ಡಾ. ಟಿ.ಎಸ್.ಸುನೀತ್ ಕುಮಾರ್ ಮಾತನಾಡಿ, ಸುಮಾರು ಹನ್ನೆರಡು ಲಕ್ಷ ರೈತರ ಅರ್ಜಿ ಸರ್ಕಾರದಲ್ಲಿದೆ. ರೈತರ ಜೀವನವೇ ಅದರ ಮೇಲೆ ಆಧಾರವಾಗಿದೆ. ಆದ್ದರಿಂದ ಸರ್ಕಾರ ಅವರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಎಂ.ಶಶಿಧರ್ ಬೇಡಿಕೆಗಳ ಬಗ್ಗೆ ಮಾತನಾಡಿ, ಸರ್ಕಾರ ಹಕ್ಕುಪತ್ರವನ್ನು ಕೊಟ್ಟು, ದುರಸ್ತಿ ಮತ್ತು ಪೋಡಿ ಮಾಡಿ ರೈತರಿಗೆ ಖಾತೆ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ನಿರ್ಧಾರವನ್ನು ಜಾರಿಗೊಳಿಸಬಾರದು ಎಂದು ಒತ್ತಾಯಸಿದರು. ಎಐಕೆಕೆಎಂಎಸ್ ಕಛೇರಿ ಕಾರ್ಯದರ್ಶಿ ಕಾಮ್ರೇಡ್ ಎಸ್.ಎನ್.ಸ್ವಾಮಿ ಮನವಿ ಪತ್ರವನ್ನು ಓದಿದರು.
ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

12 − three =