ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಊಟೋಪಚಾರ ಮಾಡಿದ್ದ ಸಿದ್ಧವ್ವ ಮೇತ್ರಿ ನಿಧನಕ್ಕೆ ಸಂತಾಪ-ಸಚಿವ ರಮೇಶ್ ಜಾರಕಿಹೊಳಿ..||
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಾಗ ಅವರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ ಸಿದ್ಧವ್ವ ಮೇತ್ರಿ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ಧವ್ವ ಮೇತ್ರಿ ಅವರು 95 ವರ್ಷಗಳ ಸುದೀರ್ಘ ಜೀವನ ನಡೆಸಿದ್ದರು.1939ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಇವರು ಅವಕಾಶ ನೀಡಿದ್ದರು ಎಂದು ಸಚಿವರು ಸ್ಮರಿಸಿಕೊಂಡಿದ್ದಾರೆ.
ಅಂಬೇಡ್ಕರ್ ಅವರಿಗೆ ಇವರೇ ಅಡಿಗೆ ಮಾಡಿ ಊಟ ಬಡಿಸುತ್ತಿದ್ದರು. ಇದರಿಂದ ತೀವ್ರ ಸಂತೋಷಗೊಂಡಿದ್ದ *ಡಾ. ಅಂಬೇಡ್ಕರ್* ಅವರು, ನಿಮ್ಮಂಥಹಾ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿ, ಸಮಾಜದಲ್ಲಿ ಬೆಳೆಯಬೇಕೆಂಬ ಸಲಹೆ ಮನ್ನಿಸಿ ತೀವ್ರ ಪ್ರಭಾವಿತಳಾಗಿದ್ದ ಸಿದ್ಧವ್ವ, ಜೀವಿತ ಅವಧಿಯಲ್ಲಿ ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ಸ್ಮರಿಸಿಕೊಂಡಿದ್ದಾರೆ.
ಇವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಇವರ ಕುಟುಂಬದ ಸದಸ್ಯರಿಗೆ ಮತ್ತು ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿದ್ದ ಇವರ ತಂಡದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.