ಕಿಣೆ ಅಣೆಕಟ್ಟು ನಿರ್ಮಾಣ ಸ್ಥಳದಲ್ಲಿ ಕಾಮಗಾರಿ ಪರಿಶೀಲನೆ- ಸಚಿವ ರಮೇಶ್ ಜಾರಕಿಹೊಳಿ !
ಭದ್ರಾ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಿಸಲು ಒತ್ತಾಯ – ಫೆ. 21ಕ್ಕೆ ನವದೆಹಲಿಗೆ ತೆರಳಲಿರುವ ಸಚಿವ ರಮೇಶ್ ಜಾರಕಿಹೊಳಿ!
ಯುವ ಭಾರತ ಸುದ್ದಿ, ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳನ್ನಾಗಿ ಘೋಷಿಸುವಂತೆ ಒತ್ತಾಯಿಸಿ ರಾಜ್ಯದ ಜಲಸಂಪನ್ಮೂಲ ಸಚಿವರಾದ *ರಮೇಶ್ ಜಾರಕಿಹೊಳಿ* ಅವರು, ಫೆ. 21ರಂದು ಕೇಂದ್ರ ಜಲಶಕ್ತಿ ಸಚಿವ *ಗಜೇಂದ್ರ ಸಿಂಗ್ ಶೇಖಾವತ್* ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.
ಉತ್ತರ ಕರ್ನಾಟಕದ ಜೀವನಾಡಿ ಕಳಸಾ ಬಂಡೂರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಮತ್ತು ರಾಜ್ಯದ ಹಲವು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಪಡೆಯುವುದೂ ಸೇರಿದಂತೆ ಹಲವು ಯೋಜನೆಗಳ ಕುರಿತಂತೆ ಸಚಿವ ರಮೇಶ್ ಜಾರಕಿಹೊಳಿ ಅವರ ನೇತೃತ್ವದ ಉನ್ನತ ಅಧಿಕಾರಿಗಳ ನಿಯೋಗ, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಪೆ. 22ರಂದು ಅಂತರ್ ರಾಜ್ಯ ಜಲವಿವಾದಗಳಿಗೆ ಸಂಬಂಧಿಸಿ, ರಾಜ್ಯದ ಅಡ್ವೋಕೇಟ್ ಜನರಲ್ ಮತ್ತು ಹಿರಿಯ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಯಲಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನೂ ಸಹಾ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದರಿಂದ ರಾಜ್ಯಕ್ಕೆ ಹಲವು ರೀತಿಯ ಲಾಭವಾಗಲಿದೆ.
ಕಿಣೆ ಅಣೆಕಟ್ಟು ನಿರ್ಮಾಣ ಸ್ಥಳದಲ್ಲಿ ಕಾಮಗಾರಿ ಪರಿಶೀಲನೆ- ಸಚಿವ ರಮೇಶ್ ಜಾರಕಿಹೊಳಿ !
ಬೆಳಗಾವಿ: ಜಾಂಬೋಟಿ ರಸ್ತೆ ಬಳಿಯ ಅಣೆಕಟ್ಟು ಡ್ಯಾಂ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮತ್ತೊಮ್ಮೆ ತಾಂತ್ರಿಕವಾಗಿ ಪರಿಶೀಲಿಸಿದ ಬಳಿಕ ಜೂನ್ ತಿಂಗಳಲ್ಲಿ ಅಣೆಕಟ್ಟು ಉದ್ಘಾಟಿಸಲಾಗುವುದು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಜಾಂಬೋಟಿ ರಸ್ತೆಯ ಬಳಿಯಲ್ಲಿರುವ ಕಿಣೆ ಅಣೆಕಟ್ಟು ನಿರ್ಮಾಣ ಸ್ಥಳದಲ್ಲಿ ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಹಲವು ವರ್ಷಗಳಿಂದ ನಡೆಯುತ್ತಿರುವ ಕಿಣೆ ಡ್ಯಾಂ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಜಲಾಶಯದಲ್ಲಿ ನೀರು ಸಂಗ್ರಹಿಸುವುದರಿಂದ ಅನೇಕ ರೈತರಿಗೆ ಹಾಗೂ ಸ್ಥಳೀಯ ಗ್ರಾಮಗಳಿಗೆ ನೀರಿನ ಸೌಲಭ್ಯ ಲಭಿಸಲಿದೆ. ಇದರಿಂದ ಕೃಷಿ ಚಟವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಡ್ಯಾಂ ಬಳಿ ಬೃಂದಾವನ ಮಾದರಿ ಉದ್ಯಾನ ನಿರ್ಮಾಣ ಮಾಡಲು ಯೋಜನೆ ಹಾಕಿಕೊಳ್ಳಲಾಗಿದ್ದು, ಹೊರಗುತ್ತಿಗೆದಾರರ ನೇಮಕ ಮಾಡಿ ಸದ್ಯದಲ್ಲೇ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.