ಯುವ ಭಾರತ ಸುದ್ದಿ, ಮೂಡಲಗಿ: ಯಾರು ಎಷ್ಟೇ ಹೇಳಿಕೊಳ್ಳಲಿ.ಮಾತನಾಡಲಿ. ಬೆಳಗಾವಿ ಎಂದೆಂದಿಗೂ ನಮ್ಮದೇ. ಈ ವಿಚಾರದಲ್ಲಿ ನಾವು ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸೋಣ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರದಂದು ಇಲ್ಲಿಯ ಶಿವಬೋಧರಂಗ ಸ್ವಾಮಿಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಮೂಡಲಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿವಿಚಾರದಲ್ಲಿ ಮಹಾಜನ ವರದಿಯೇ ಅಂತಿಮವಾಗಿದ್ದು, ಎಲ್ಲರೂ ಈ ವರದಿಯನ್ನು ಗೌರವಿಸಬೇಕಾಗಿದೆ. ಅಖಂಡ ಬೆಳಗಾವಿ ಎಂದಿಗೂ ನಮಗೆ ಸೇರಿದ್ದು ಎಂದು ಹೇಳಿದರು. ಗಡಿವಿಷಯ ಬಂದಾಗ ಎಲ್ಲರೂ ತಮ್ಮ ತಮ್ಮ ಪ್ರತಿಷ್ಠೆಗಳನ್ನು ಮರೆತು ಪಕ್ಷಾತೀತವಾಗಿ ಕನ್ನಡ ನಾಡು,ನುಡಿ ನೆಲ .ಜಲಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ಪ್ರಪಂಚದ ಅತ್ಯಂತ ಶ್ರೀಮಂತ ಭಾಷೆಯಾಗಿ ಹೊರಹೊಮ್ಮಿದೆ. ನಮ್ಮ ಭಾಷೆಯು ಶಾಸ್ತ್ರೀಯ ಸ್ಥಾನಮಾನವನ್ನು ಪಡೆದುಕೊಂಡಿರುವದು ಕನ್ನಡ ಭಾಷೆಯ ಗೌರವವನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ಇದುವರೆಗೂ ಎಂಟು ಜ್ಞಾನ ಪೀಠ ಪ್ರಶಸ್ತಿಗಳು ಲಭಿಸಿದ್ದು, ಹಿಂದಿ ಭಾಷೆಯನ್ನು ಹೊರತು ಪಡಿಸಿದರೆ ಅತೀ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದೊರೆತಿರುವುದು ಕನ್ನಡಿಗರಾದ ನಾವೆಲ್ಲ ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದರು.
ಕನ್ನಡ ನೆಲ,ಭಾಷೆ ಮತ್ತು ನಾಡುನುಡಿಯ ವಿಷಯದಲ್ಲಿ ರಾಜಕೀಯ ಮತ್ತು ಪಕ್ಷಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿರಬೇಕು. ಕನ್ನಡ ವಿಷಯದಲ್ಲಿ ಯಾರು ರಾಜಕಾರಣ ಬೆರಸಬಾರದು ಹಾಗೇನಾದರೂ ಮಾಡಿದರೇ ಕನ್ನಡ ನೆಲಕ್ಕೆ ಅವಮಾನ ಮಾಡಿದಂತಾಗುತ್ತದೆ. ಕನ್ನಡ ನೆಲದಲ್ಲಿ ಕನ್ನಡವು ಸತ್ಯವು ಆಗಬೇಕು. ಮತ್ತು ಅದು ನಿತ್ಯವು ಆಗಬೇಕು. ಕನ್ನಡ ಭಾಷೆಯ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಳ್ಳಬೇಕು. ಜೊತೆಗೆಅನ್ಯ ಭಾಷೆಯನ್ನು ಗೌರವಿಸಬೇಕು ಎಂದು ಹೇಳಿದರು.
ಮೂಡಲಗಿ ಹೊಸ ತಾಲೂಕು ರಚನೆಯಾದ ನಂತರ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಲಗಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯಾಗಿದೆ. ಕಳೆದ ವರ್ಷ ಮಾರ್ಚ 14 ರಂದು ಆಯೋಜನೆಗೊಂಡಿದ್ದ ಸಾಹಿತ್ಯ ಸಮ್ಮೇಳನವು ಕೋವಿಡ್ ಕಾರಣದಿಂದ ಮುಂದೂಡಿತ್ತು. ದೇವರ ದಯೆಯಿಂದ ಮತ್ತೇ ಎಲ್ಲ ಕನ್ನಡ ಮನಸ್ಸುಗಳು ಸೇರುವ ಸಂಭ್ರಮ ಕೂಡಿ ಬಂದಿದೆ. ಮೇಲಿಂದ ಮೇಲೆ ಸಾಹಿತ್ಯ ಸಮ್ಮೇಳನಗಳು ನಡೆಯುವ ಮೂಲಕ ಯುವ ಸಾಹಿತಿಗಳ ಬೆಳವಣ ಗೆಗೆ ಪ್ರೇರಣೆಯಾಗುತ್ತದೆ.ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಯುತ್ತದೆ. ಪುಸ್ತಕ ಓದುವ ಸಂಸ್ಕøತಿಯು ಸಹ ಬೆಳೆಯುತ್ತದೆ. ಕಲೆ,ಸಾಹಿತ್ಯ, ಶಿಕ್ಷಣದ ಎಲ್ಲ ಕಾರ್ಯಚಟುವಟಿಕೆಗಳಿಗೆ ನನ್ನ ಪ್ರೋತ್ಸಾಹ ಇದ್ದೇ ಇರುತ್ತದೆ. ಗೋಕಾಕದಲ್ಲಿ ಫೆಬ್ರುವರಿ ಕೊನೆಯ ವಾರದಲ್ಲಿ ನಡೆಯುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಪ್ರಕಟಿಸಿದ ಅವರು ಕಲೆ,ಸಾಹಿತ್ಯ, ಸಂಸ್ಕøತಿಯ ಕಂಪು ನಿರಂತರವಾಗಿರಬೇಕು ಎಂದು ಅವರು ಹೇಳಿದರು.
ಮೂಡಲಗಿ ತಾಲೂಕನ್ನು ಸುಂದರ ತಾಲೂಕನ್ನಾಗಿ ಪರಿವರ್ತಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಇಷ್ಟರಲ್ಲಿಯೇ ಉಪನೊಂದಣಾಧಿಕಾರಿಗಳ ಕಚೇರಿಯು ಸಹ ಪ್ರಾರಂಭವಾಗಲಿದೆ. ಇದರಿಂದ ಬಹುತೇಕ ತಾಲೂಕಾ ಮಟ್ಟದ ಕಛೇರಿಗಳು ಪ್ರಾರಂಭವಾಗಿದ್ದು ಆಡಳಿತಾತ್ಮಕ ಹಿತದೃಷ್ಠಿಯಿಂದ ತಾಲೂಕಿನ ಜನತೆಗೆ ಇದರಿಂದಾ ಅನುಕೂಲವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಜಿ ವಹಿಸಿದ್ದರು.
ವೇದಿಕೆ ಮೇಲೆ ಸಮ್ಮೇಳನದ ಸರ್ವಾಧ್ಯಕ್ಷ ಸಂಗಮೇಶ ಗುಜಗೊಂಡ ದಂಪತಿಗಳು, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಹಿರಿಯ ಸಹಕಾರಿ ಬಿ.ಆರ್.ಪಾಟೀಲ(ನಾಗನೂರ), ಜಿ.ಪಂ ಸದಸ್ಯರಾದ ಬಸವ್ವ ಕುಳ್ಳುರು, ಕಸ್ತೂರಿ ಕಮತೆ,ಶಕುಂತಲಾ ಪರುಶೆಟ್ಟಿ, ಮೂಡಲಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಜಿ.ಪಂ ಮಾಜಿ ಸದಸ್ಯ ಡಾ: ರಾಜೇಂದ್ರ ಸಣ್ಣಕ್ಕಿ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಪುರಸಭೆ ಸದಸ್ಯರು, ಕಸಾಪ ಪದಾಧಿಕಾರಿಗಳು, ಮುಖಂಡರು,ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಸಾಪ ತಾಲೂಕಾಧ್ಯಕ್ಷ ಶಿದ್ರಾಮ ದಾಗ್ಯಾನಟ್ಟಿ ಸ್ವಾಗತಿಸಿದರು. ಸಾಹಿತಿ ಮತ್ತು ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಚಂಡಕಿ ನಿರೂಪಿಸಿದರು.
ಕನ್ನಡ ಪ್ರಜ್ಞೆಯನ್ನು ಸದಾ ಜೀವಂತವಾಗಿರಿಸಿ- ಸರ್ವಾಧ್ಯಕ್ಷ ಸಂಗಮೇಶ ಗುಜಗೊಂಡ ಕನ್ನಡ ಗಟ್ಟಿ ನೆಲೆಗಳಾದ ಹಳ್ಳಿಗಳಲ್ಲಿಯೇ ಕನ್ನಡತನವನ್ನು ಉದ್ದೀಪಿಸುವ ಕೈಂಕರ್ಯವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾದದ್ದು ವಿಷಾದನೀಯ ಸಂಗತಿಯಾಗಿದೆ ಮೂಡಲಗಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಮತ್ತು ಮಕ್ಕಳ ಸಾಹಿತಿ ಪ್ರೊ ಸಂಗಮೇಶ ಗುಜಗೊಂಡ ಅಭಿಪ್ರಾಯ ಪಟ್ಟರು
ಶನಿವಾರದಂದು ಶ್ರೀಪಾದಬೋಧ ಸ್ವಾಮಿಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಜರುಗಿದ ಮೂಡಲಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಮೂಡಲಗಿ ತಾಲೂಕಾ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷಿಯ ಭಾಷಣದಲ್ಲಿ ಮಾತನಾಡಿದ ಅವರು ಜಾಗತೀಕರಣ ಕಬಂದಬಾಹುವಿನಲ್ಲಿ ಭಾಷೆ ಸಂಸ್ಕøತಿ ನಲುಗಲು ಅವಕಾಶ ನೀಡದಿರೋಣ, ಕನ್ನಡ ಪ್ರಜ್ಞೆಯನ್ನು ಸದಾ ಜೀವಂತವಾಗಿ ಇಟ್ಟುಕೊಳ್ಳೋಣ ಎಂದರು.
ಕನ್ನಡ ಮಾಧ್ಯಮ ಶಿಕ್ಷಣವನ್ನು ಬೆಳೆಸಲು ಕನ್ನಡ ಶಾಲೆಗಳ ಸಬಲೀಕರಣ ಒಂದು ಪ್ರಮುಖ ಅಸ್ತ್ರವೆನ್ನುವುದು ಗಮನಿಸಬೇಕಾದ ಅಂಶವನ್ನು ಒತ್ತಿ ಹೇಳಿದರು.
ರಾಜಸ್ತಾನದಲ್ಲಿ ಪ್ರತಿ ವರ್ಷ ನಡೆಯು ರಾಜಸ್ತಾನದಂತೆ ಕರ್ನಾಟಕ ಉತ್ಸವ ನಡೆಸಬೇಕು ಇದರಿಂದ ನಾಡಿನ ಎಲ್ಲ ಪ್ರಕಾರದ ಕಲಾವಿದರಿಗೆ ಪ್ರೋತ್ಸಹ ಪ್ರೇರಣೆ ದೊರೆಯುತ್ತದೆ ಎಂದರು. ಕನ್ನಡಿಗರಾದ ನಾವು ಕನ್ನಡವನ್ನು ಪಕ್ಕಾ ವ್ಯವಹಾರ ಭಾಷೆಯಾಗಿ ರೂಢಿಸಿಕೊಳ್ಳಬೇಕು, ರುಜು, ಅಂಕಿ ಬಳಕೆ, ರಶೀದಿಗಳು ಕನ್ನಡದಲ್ಲೇ ಇರಬೇಕು, ಹಣಕಾಸು ಸಂಸ್ಥೆಗಳಲ್ಲಿ ಕನ್ನಡದಲ್ಲಿ ವ್ಯವಹಾರ ನಡೆಯಬೇಕು ಈ ದಿಶೆಯಲ್ಲಿ ನಾವು ಕೂಡ ಇಚ್ಚಾಶಕ್ತಿ ತೋರಬೇಕು ಎಂದು ಕನ್ನಡಿಗರಿಗೆ ಕಿವಿ ಮಾತು ಹೇಳಿದ ಅವರು ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದರು.
ಬೇರೆ ಬಾಷೆಗಳನ್ನು ದ್ವೇಷಿಸದೇ ಕನ್ನಡ ಉನ್ನತಿ ಸಾಧಿಸುವ ಮನೋಸ್ಥಿತಿಯನ್ನು ಕನ್ನಡಿಗರಾದ ನಾವು ಬೆಳೆಸಿಕೊಂಡರೆ ಕನ್ನಡ ಭಾಷೆ ಸಾಹಿತ್ಯ, ಕಲೆಗಳ ಸಂವರ್ಧನೆಯಾಗುತ್ತದೆ ಎಂದ ಅವರು ಕೇಂದ್ರ ಸರ್ಕಾರ ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ದೇಶಿ ಸಂಸ್ಕøತಿ ಕಲಿಕೆ ಕಡ್ಡಾಯಗೋಳಿಸಿದ್ದು ಪ್ರಶಂಸನೀಯ ಇದರಿಂದ ಮಕ್ಕಳಲ್ಲಿ ಸೃಜನಶೀಲತೆ ವಿಕಾಸಗೊಂಡು ಬಾಷೆ ಸಂಸ್ಕøತಿ ಅರಿವು ಹೆಚ್ಚಾಗುತ್ತದೆ ಈ ಮೂಲಕ ಮಕ್ಕಳಲ್ಲಿ ಕನ್ನಡತನ ತಾನೇತಾನಾಗಿ ಬೆಳೆಯುತ್ತದೆ ಎಂದರು.
ಸ್ವಂತ ಆಲೋಚನೆ ಕ್ರೀಯಾಶೀಲತೆ, ಸೃಜನಶೀಲತೆ ಇವುಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಅಂಶಗಳನ್ನು ಇದನ್ನು ಬಲಿ ಕೊಟ್ಟು ಶಿಕ್ಷಣ ನೀಡುವುದು ಸಮಂಜಸ ಎನಿಸುವುದಿಲ್ಲ. ತಾಲೂಕಿನ ದೊಡ್ಡ ಊರುಗಳಾದ ಮೂಡಲಗಿ ಕಲ್ಲೋಳಿ, ಕುಲಗೋಡ, ಯಾದವಾಡಗಳಲ್ಲಿ ಸಾಹಿತ್ಯ ಭವನ ನಿರ್ಮಾವಾಗಬೇಕು, ಕುಲಗೋಡದಲ್ಲಿ ಕುಗೋಡ ತಮ್ಮಣ್ಣಾ ಸ್ಮಾರಕ ಹಾಗೂ ಪಾರಿಜಾತ ತರಬೇತಿ ಕೇಂದ್ರ ಹಾಗೂ ಸುಸಜ್ಜಿತ ರಂಗ ಮಂದಿರ ಹಾಗೂ ತಾಲೂಕಿನ ಎಲ್ಲ ಐತಿಹಾಸಿಕ ಸ್ಥಾನಗಳಿಗೆ ಕಾಯಕಲ್ಪ ಆಗಬೇಕು ಎಂದರು.
ಕಬ್ಬಿನೊಂದಿಗೆ ಪ್ರಮುಖ ಬೆಳೆಗಳಾದ ಅರಿಸಿನ ಮೆಕ್ಕೆ ಜೋಳ, ಗೋದಿ, ಸದುಕಗಳಿಗೆ ಪೂರಕವಾದ ಉದ್ದಿಮೆಗಳು ಸ್ಥಾಪನೆಯಾಗಬೇಕೆಂದು ವೇದಿಕೆಯ ಮೂಲಕ ಒತ್ತಾಯಿಸಿದರು.