Breaking News

ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ವರ್ಚಸ್ಸು ತೋರಿದ ಸಾಹುಕಾರ್ !

Spread the love

ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ವರ್ಚಸ್ಸು ತೋರಿದ ಸಾಹುಕಾರ್ !

ಯುವ ಭಾರತ ಸುದ್ದಿ ಬೆಳಗಾವಿ :
ಜನರು ಪ್ರೀತಿಯಿಂದ ಕರೆಯುವ ‘ಸಾಹುಕಾರ್’ ಎಂಬ ಬಿರುದಾಂಕಿತ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಮತ್ತೊಮ್ಮೆ ತಮಗಿರುವ ವರ್ಚಸ್ವಿ ನಾಯಕತ್ವವನ್ನು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತೋರಿಸಿಕೊಟ್ಟಿದ್ದಾರೆ. ಮಂಗಳವಾರ ರಾತ್ರಿ ಬಿಡುಗಡೆಯಾಗಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ರಮೇಶ ಜಾರಕಿಹೊಳಿ ಅವರ ಎಲ್ಲಾ ಬೆಂಬಲಿಗರಿಗೆ ಟಿಕೆಟ್ ದೊರಕಿದೆ. ಈ ಮೂಲಕ ತಮ್ಮ ಹಿಂಬಾಲಕರಿಗೆ ಕಷ್ಟಕಾಲದಲ್ಲೂ ತಾನು ಸಹಾಯಕ್ಕೆ ಇರುವೆ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ಅದರಲ್ಲೂ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಮಾಡು ಇಲ್ಲವೇ ಮಾಡಿ ಎಂಬಂತೆ ಬಿಜೆಪಿಯಲ್ಲೇ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ ರಮೇಶ ಜಾರಕಿಹೊಳಿಯವರು ತಮ್ಮ ಅತ್ಯಾಪ್ತ ಹಾಲಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಬಿಜೆಪಿಯ ಮೊದಲ ಪಟ್ಟಿಯಲ್ಲೇ ಮತ್ತೆ ಟಿಕೆಟ್ ಘೋಷಣೆಯಾಗುವಂತೆ ನೋಡಿಕೊಳ್ಳುವ ಮೂಲಕ ಸ್ನೇಹಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ.

ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲ, ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ ಮನ್ನೋಳ್ಕರ, ಬೈಲಹೊಂಗಲದಲ್ಲಿ ಜಗದೀಶ ಮೆಟಗುಡ್, ಖಾನಾಪುರದಲ್ಲಿ ವಿಠ್ಠಲ ಹಲಗೇಕರ, ರಾಮದುರ್ಗದಲ್ಲಿ ಹೊಸಮುಖವಾಗಿರುವ ಚಿಕ್ಕ ರೇವಣ್ಣ ಮುಂತಾದ ತಮ್ಮ ಆಪ್ತರಿಗೆ ಟಿಕೆಟ್ ದೊರಕಿಸಿ ಕೊಡುವ ಮೂಲಕ ನೆರವಿಗೆ ನಿಂತಿದ್ದಾರೆ.

ಅದರಲ್ಲೂ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗುವುದೇ ಕಠಿಣ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಅತ್ಯಂತ ಪ್ರಬಲ ದಾಳ ಉರುಳಿಸಿದ್ದ ರಮೇಶ ಜಾರಕಿಹೊಳಿಯವರು ಯಾವುದೇ ಕಾರಣಕ್ಕೂ ಈ ಬಾರಿ ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಬೇಕು ಎಂದು ಖಡಕ್ ಸಂದೇಶ ರವಾನಿಸಿದ್ದರು. ಈ ಮೂಲಕ ತಮ್ಮ ಸ್ಪರ್ಧೆಗಿಂತ ತಮ್ಮನ್ನು ಹಿಂಬಾಲಿಸಿಕೊಂಡು ಬಂದಿದ್ದ ಸ್ನೇಹಿತನ ಸ್ಪರ್ಧೆ ಮುಖ್ಯ ಎನ್ನುವುದನ್ನು ವರಿಷ್ಠರಿಗೆ ಮನವರಿಕೆ ಮಾಡಿದ್ದರು. ಇದೀಗ ರಮೇಶ ಜಾರಕಿಹೊಳಿ ಅವರು ತಮ್ಮ ಬಹುತೇಕ ಬೆಂಬಲಿಗರಿಗೆ ಟಿಕೆಟ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮುಂದಿನ ನಡೆಯಾಗಿ ಇವರೆಲ್ಲರನ್ನು ಗೆಲ್ಲಿಸಿಕೊಂಡು ಬರುವುದು ರಮೇಶ ಜಾರಕಿಹೊಳಿ ಅವರ ಪಾಲಿಗೆ ಬಹುದೊಡ್ಡ ಸವಾಲು ಆಗಿದೆ.

ಬೆಳಗಾವಿ ಗ್ರಾಮೀಣ ಮತಕ್ಷೇತ್ರ ರಮೇಶ ಜಾರಕಿಹೊಳಿ ಅವರ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ. ತಮ್ಮ ಆಪ್ತರಾಗಿರುವ ನಾಗೇಶ್ ಮನ್ನೋಳ್ಕರ್ ಅವರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ತಮ್ಮ ಬದ್ಧ ವೈರಿಯಾಗಿ ಪರಿವರ್ತನೆಗೊಂಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮೂಗುದಾರ ತೊಡಿಸಲು ಸಜ್ಜಾಗಿದ್ದಾರೆ. ಬೇರೆ ಎಲ್ಲಾ ಕ್ಷೇತ್ರಗಳಿಗಿಂತ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ರಮೇಶ ಜಾರಕಿಹೊಳಿ ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯಾಗಿದೆ.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಚುನಾವಣೆಗೂ ಸಾಕಷ್ಟು ಮೊದಲೇ ಸಾಕಷ್ಟು ಸಲ ವಿವಿಧ ಗ್ರಾಮಗಳಲ್ಲಿ ಮಿಂಚಿನ ಸಂಚಾರ ಮಾಡಿ ಚುನಾವಣೆಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದಾರೆ. ಚುನಾವಣೆ ಕಾಲಕ್ಕೆ ಮಾಡುವ ಎಲ್ಲಾ ಪ್ರಚಾರ ಕಾರ್ಯಗಳನ್ನು ಬೆಳಗಾವಿ ಗ್ರಾಮೀಣದಲ್ಲಿ ಸಾಹುಕಾರ್ ಈಗಾಗಲೇ ಮಾಡಿ ಮುಗಿಸಿ ಆಗಿದೆ !

ಒಟ್ಟಾರೆ, ಕಳೆದ ಒಂದು ವರ್ಷದಿಂದ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿ ಇಡೀ ಮತಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಯಾಗುವಂತೆ ನೋಡಿಕೊಂಡಿದ್ದಾರೆ. ಇಲ್ಲಿ
ರಮೇಶ ಜಾರಕಿಹೊಳಿ ಅವರು ಈ ಬಾರಿ ಮಧ್ಯಪ್ರವೇಶ ಮಾಡಿ ಬಿಜೆಪಿ ಭದ್ರಕೋಟೆ ನಿರ್ಮಿಸಿದ್ದಾರೆ. ಸಾಕಷ್ಟು ಅಭ್ಯರ್ಥಿಗಳು ಇದ್ದರೂ ಅವರ ಅವರನ್ನೆಲ್ಲ ಒಗ್ಗೂಡಿಸಿಕೊಂಡು ಅಭ್ಯರ್ಥಿಗಿಂತ ಇಲ್ಲಿ ಪಕ್ಷದ ಗೆಲುವೇ ಮುಖ್ಯ ಎಂದು ಮನವರಿಕೆ ಮಾಡಿ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತಂದು ಆಗಾಗ ಪ್ರಚಾರ ಮಾಡಿಸಿದ್ದಾರೆ. ಹೀಗಾಗಿ, ಈ ಬಾರಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಬಿಜೆಪಿ ಪಾಲಿಗೆ ಹೆಚ್ಚುವರಿಯಾಗಿ ದಕ್ಕುವ ಎಲ್ಲಾ ಸಾಧ್ಯತೆಗಳಿವೆ.

ಜೊತೆಗೆ ತಾವು ಪಾರಂಪರಿಕವಾಗಿ ಸ್ಪರ್ಧೆ ನಡೆಸುತ್ತಾ ಬಂದಿರುವ ಗೋಕಾಕ ಮತಕ್ಷೇತ್ರದಲ್ಲಿ ಚುನಾವಣೆ ಘೋಷಣೆಗೂ ಮುನ್ನ ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಎಲ್ಲಾ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳಲ್ಲಿ ಸಮಾವೇಶಗಳನ್ನು ನಡೆಸುವ ಮೂಲಕ ಮತಗಳನ್ನು ಭದ್ರಪಡಿಸಿಕೊಂಡು ಇಟ್ಟಿದ್ದಾರೆ.
ರಮೇಶ ಜಾರಕಿಹೊಳಿಯವರನ್ನು ಸಾಂಪ್ರದಾಯಿಕವಾಗಿ ಬೆಂಬಲಿಸುತ್ತಲೇ ಬಂದಿರುವ ಗೋಕಾಕ ಮತಕ್ಷೇತ್ರದ ಜನ ಈ ಸಲ ಅವರನ್ನು ಅಭೂತಪೂರ್ವವಾಗಿ ಗೆಲ್ಲಿಸಲು ಪಣತೊಟ್ಟಿದ್ದಾರೆ. ಜಾರಕಿಹೊಳಿಯವರಿಗೆ ಗೋಕಾಕನಲ್ಲಿ ಗೆಲುವು ನಿರಾಯಾಸ. ಆದರೆ, ಅದು ಈ ಬಾರಿ ದಾಖಲೆಯಾಗಬೇಕು ಎಂಬ ಮಾತು ಆಗಾಗ ಮೊಳಗಿತ್ತು. ಇದಕ್ಕೆ ಪೂರಕವಾದ ವಾತಾವರಣ ಈಗಾಗಲೇ ಕ್ಷೇತ್ರಾದ್ಯಂತ ಸೃಷ್ಟಿಯಾಗಿದೆ.

ಒಟ್ಟಾರೆ, ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ತಂದುಕೊಡಲು ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷ ರಣನೀತಿಯನ್ನು ಸಿದ್ಧಪಡಿಸಿದೆ. ಮುಂದಿನ ಒಂದು ತಿಂಗಳ ಕಾಲ ರಮೇಶ ಜಾರಕಿಹೊಳಿಯವರು ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭರ್ಜರಿ ಚುನಾವಣೆ ಪ್ರಚಾರ ನಡೆಸುವ ಮೂಲಕ ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪ್ರಯತ್ನಿಸಲಿದ್ದಾರೆ.

ರಮೇಶ ಜಾರಕಿಹೊಳಿ ಅವರು ಹಿಡಿದ ವರ್ಚಸ್ವಿ ನಾಯಕರು. ಅತ್ಯಂತ ಶ್ರೇಷ್ಠ ಸಂಘಟಕರು. ತಾವು ಹಿಡಿದ ಕೆಲಸ ಪೂರ್ಣವಾಗುವವರೆಗೆ ಅವರು ವಿಶ್ರಮಿಸುವುದಿಲ್ಲ. ಛಲದಂಕ ಮಲ್ಲ ಎಂದೆ ಪ್ರಸಿದ್ಧಿ ಪಡೆದಿರುವ ಅವರ ಪಾಲಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದಾಗಿದೆ. ಬಿಜೆಪಿಗೆ ಅತಿ ಹೆಚ್ಚು ಸ್ಥಾನ ತಂದು ಕೊಡುವ ಮೂಲಕ ರಮೇಶ ಜಾರಕಿಹೊಳಿ ಅವರು ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ನಿರ್ಣಾಯಕ ಪಾತ್ರ ನಿಭಾಯಿಸುವುದು ನಿಶ್ಚಿತ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

one × two =