Breaking News

ಶರಣರು ಜನಸಾಮಾನ್ಯರಿಗೆ ಹತ್ತಿರವಾದ ಕನ್ನಡದಲ್ಲಿಯೇ ಸಾಹಿತ್ಯ ಬರೆದರು : ಡಾ.ಪಿ.ಜಿ.ಕೆಂಪಣ್ಣವರ

Spread the love

ಶರಣರು ಜನಸಾಮಾನ್ಯರಿಗೆ ಹತ್ತಿರವಾದ ಕನ್ನಡದಲ್ಲಿಯೇ ಸಾಹಿತ್ಯ ಬರೆದರು : ಡಾ.ಪಿ.ಜಿ.ಕೆಂಪಣ್ಣವರ

ಯುವ ಭಾರತ ಸುದ್ದಿ ಬೆಳಗಾವಿ :
ಕನ್ನಡ ಭಾಷೆಯ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸಿದವರು ಹನ್ನೆರಡನೆಯ ಶತಮಾನದ ಶರಣರು. ಜನಸಾಮಾನ್ಯರ ಆವರಣಕ್ಕೆ ಸಾಹಿತ್ಯವನ್ನು ತಂದುನಿಲ್ಲಿಸಿದರು ಎಂದು ಹಿರಿಯ ಸಾಹಿತಿ ಡಾ.ಪಿ.ಜಿ.ಕೆಂಪಣ್ಣವರ ಹೇಳಿದರು.
ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಆಶ್ರಯದಲ್ಲಿ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಜರುಗಿದ ಯುಗಾದಿ ಅಮಾವಾಸ್ಯೆ ಅನುಭಾವ ಕಾರ್ಯಕ್ರಮದಲ್ಲಿ ಅವರು ವಚನ ಸಾಹಿತ್ಯದಲ್ಲಿ ಕನ್ನಡ ಪರ ಚಿಂತನೆಗಳು ವಿಷಯದ ಕುರಿತು ಮಾತನಾಡುತ್ತ ಪಂಪ ರನ್ನ ಜನ್ನ ನಾಗವರ್ಮ ಹರಿಹರ ಮುಂತಾದವರು ಕನ್ನಡ ಸಾಹಿತ್ಯದ ಅಡಿಪಾಯ ಹಾಕಿದರು. ಅವರದು ರಾಜಾಶ್ರಯದ ಸಾಹಿತ್ಯವಾಗಿತ್ತು. ವ್ಯಕ್ತಿ ಕೇಂದ್ರವಾದ ಸಾಹಿತ್ಯಕ್ಕೆ ಅವರು ಹೆಚ್ಚು ಒತ್ತು ನೀಡಿದರು. ಆದರೆ ಜನರಿಗಾಗಿ ಸಾಹಿತ್ಯ ಬರೆದವರು ಶರಣರು. ಅವರದು ಸಾಹಿತ್ಯ ರಚನೆಯಲ್ಲಿ ಪ್ರಜಾಪ್ರಭುತ್ವದ ನಿಲುವು ಎದ್ದುಕಾಣುತ್ತಿತ್ತು. ನಾನು ಎಲ್ಲರೀಗಾಗಿ ಎಲ್ಲರೂ ನನಗಾಗಿ ಎನ್ನುವ ಶರಣರ ತತ್ವವು ಅವರ ವಚನ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿದೆ. ಸರಳ ಪದಗಳ ಬಳಕೆ ವಿಶಿಷ್ಟ. ಆಡು ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎನ್ನುವ ಇಂದಿನ ಶಿಕ್ಷಣದ ಧೋರಣೆಯು ಅಂದಿನ ವಚನಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಸಂಸ್ಕೃತ ಪದಗಳಿಗೆ ಕನ್ನಡದ ಸಂಸ್ಕಾರ ಕೊಟ್ಟರು. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವದರಿಂದ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ ಜಾಗೃತಗೊಂಡು ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ. ವೇದಾಗಮ, ಉಪನಿಷತ್ತು, ಭಗವದ್ಗೀತೆಯ ಸಂಸ್ಕೃತ ಭಾಷೆಯಲ್ಲಿಯ ಸಂದೇಶವನ್ನು ಸರಳ ಕನ್ನಡದಲ್ಲಿ ವಚನಗಳ ಮೂಲಕ ನೀಡಿದರು. ಸಂಸ್ಕೃತ ಬಳಸಲಿಲ್ಲ. ಭಾಷೆಯ ಬಳಕೆಯು ಒಂದು ಭಾಷೆಯನ್ನು ಉಳಿಸುತ್ತದೆ ಬೆಳೆಸುತ್ತದೆ. ಅದರ ಆಯುಷ್ಯವನ್ನು ವರ್ಧಿಸುತ್ತದೆ. ಕನ್ನಡ ಭಾಷೆ ಬೆಳೆಯಲು ಅದರ ಹಿಗ್ಗಲಿಕೆಯ ಗುಣವೇ ಕಾರಣ. ಅನೇಕ ಅಚ್ಚಗನ್ನಡದ ಪದಗಳ ಬಳಕೆಯನ್ನೂ ವಚನಗಳಲ್ಲಿ ಕಾಣುತ್ತೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಸಾಹಿತ್ಯ ಮತ್ತು ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಶರಣರು ತಮ್ಮ ವಚನ ಸಾಹಿತ್ಯದಲ್ಲಿ ಬಳಸಿದ ಭಾಷೆಯ ಅಧ್ಯಯನದಿಂದ ಕನ್ನಡ ಭಾಷೆಯ ಸತ್ವ ಮತ್ತು ಸೌಂದರ್ಯದ ಅನುಭೂತಿಯಾಗುತ್ತದೆ ಎಂದರು.
ಹೊಸ ವರ್ಷದ ಸಂಭ್ರಮವೇ ಯುಗಾದಿ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಎಲ್ಲರಿಗೂ ಯುಗಾದಿ ಹೊಸತನವನ್ನು ನೀಡಲೆಂದು ಶುಭಕೋರಿದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಪರಮಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ಶರಣರು ಸರಳ ಭಾಷೆಯಲ್ಲಿ ವಚನ ರಚಿಸುವುದರ ಮೂಲಕ ಧರ್ಮ ಪ್ರಚಾರ ಮಾಡಿದರು. ಶರಣರ ವಚನಗಳಲ್ಲಿ ಸಾಕಷ್ಟು ಮರಾಠಿ ಪದಗಳಿವೆ. ಇದು ಅವರ ಭಾಷಾ ಬಾಂಧವ್ಯಕ್ಕೂ ಕನ್ನಡಿ ಹಿಡಿಯುತ್ತದೆ ಎಂದರು.
ಅನಿತಾ ಮಾಲಗತ್ತಿ ವಚನ ಪ್ರಾರ್ಥನೆ ಮಾಡಿದರು, ಪ್ರಭಾ ಪಾಟೀಲ್ ವಚನ ವಿಶ್ಲೇಷಣೆ ಮಾಡಿದರು, ಮಂಜು ಶ್ರೀ ಹಾವನ್ನವರ ಸ್ವಾಗತಿಸಿದರು. ಸುಧಾ ಪಾಟೀಲ ಅತಿಥಿ ಪರಿಚಯ ನೀಡಿದರು. ಶೈಲಾ ಸಂಸುದ್ದಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಸಾದ ಹಿರೇಮಠ ದಂಪತಿಗಳು ದಾಸೋಹ ಸೇವೆಗೈದರು. ಜ್ಯೋತಿ ಬದಾಮಿ ವಂದಿಸಿದರು. ವಧುವರ ಅನ್ವೇಷಣ ಕೇಂದ್ರ ಅಧ್ಯಕ್ಷ ಡಾ.ಎಫ್.ವ್ಹಿ.ಮಾನ್ವಿ, ಚೇತನ ಅಂಗಡಿ, ಡಾ.ಗುರುದೇವಿ ಹುಲೆಪ್ಪನವರಮಠ, ವೈದ್ಯ ರವಿ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

5 × 2 =