Breaking News

ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧೆ ?

Spread the love

ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧೆ ?

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪೈಪೋಟಿ ನೀಡಲು, ಬಿಜೆಪಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು:
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪೈಪೋಟಿ ನೀಡಲು ಬಿಜೆಪಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್‌ ಚಿಂತನೆ ನಡೆಸುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ, ತಮ್ಮ ಕೊನೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ನಾಯಕನನ್ನು ಹಣಿಯಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ.

ಈ ಮೊದಲು ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ವಿಜಯೇಂದ್ರ ಅವರನ್ನು ತಮ್ಮ ಸ್ವಕ್ಷೇತ್ರ ಶಿಕಾರಿಪುರದಿಂದ ಕಣಕ್ಕಿಳಿಸಲು ಬಯಸಿರುವ ಬಿಎಸ್‌ವೈ, ಈ ಕುರಿತು ಹೈಕಮಾಂಡ್‌ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಇದೀಗ ಮತ್ತೋರ್ವ ಪ್ರಬಲ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದ್ದು, ವಸತಿ ಸಚಿವ ವಿ. ಸೋಮಣ್ಣ ಅವರತ್ತ ದೃಷ್ಟಿ ಹರಿಸಿದೆ. ಇದಕ್ಕೆ ವರುಣಾ ಕ್ಷೇತ್ರದಲ್ಲಿರುವ ಲಿಂಗಾಯತ ಸಮುದಾಯದ ಪ್ರಾಬಲ್ಯ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ವಿ. ಸೋಮಣ್ಣ, ವರುಣಾ ಕ್ಷೇತ್ರದ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸಮರ್ಥರು ಎಂಬುದು ಬಿಜೆಪಿ ಹೈಕಮಾಂಡ್‌ ಲೆಕ್ಕಾಚಾರವಾಗಿದೆ.

ವರುಣಾ ಕ್ಷೇತ್ರದಲ್ಲಿ ಸುಮಾರು 55 ಸಾವಿರದಷ್ಟು ಲಿಂಗಾಯತ ಮತದಾರರಿದ್ದಾರೆ. ಒಕ್ಕಲಿಗ ಸಮುದಾಯದ ಜನಸಂಖ್ಯೆ ಸುಮಾರು 12 ಸಾವಿರದಷ್ಟಿದೆ. 35 ಸಾವಿರದಷ್ಟು ಕುರುಬರು, 12 ಸಾವಿರದಷ್ಟು ಇತರ ಹಿಂದುಳಿದ ವರ್ಗಗಳ ಸಮುದಾಯದವರು, 43 ಸಾವಿರದಷ್ಟು ದಲಿತರು ಮತ್ತು ಸುಮಾರು 23 ಸಾವಿರದಷ್ಟು ನಾಯಕ ಸಮುದಾಯದ ಮತಗಳಿವೆ.

ಸಿದ್ದರಾಮಯ್ಯ ಕುರುಬ ಮತ್ತು ದಲಿತ ಮತ್ತು ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿದ್ದರೆ, ಬಿಜೆಪಿ ಲಿಂಗಾಯತ ಮತ್ತು ಒಕ್ಕಲಿಗ ಮತಗಳನ್ನು ಸೆಳೆಯಲು ತಂತ್ರ ಹೆಣೆಯುತ್ತಿದೆ. ಹೀಗಾಗಿ ಸೋಮಣ್ಣ ಅವರನ್ನು ಕಣಕ್ಕಿಳಿಸಿದರೆ ಈ ಎರಡೂ ಸಮುದಾಯಗಳ ಮತಗಳನ್ನು ಸುಲಭವಾಗಿ ಪಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ರಾಜ್ಯ ಬಿಜೆಪಿ ಸರ್ಕಾರ ಇತ್ತೀಚಿಗಷ್ಟೇ ಒಕ್ಕಲಿಗರಿಗೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕಲ್ಪಿಸಿದೆ. ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲಾಗಿದ್ದು, ಎಸ್‌ಸಿ/ಎಸ್‌ಟಿ ಹಾಗೂ ದಲಿತ ಸಮುದಾಯದ ಬಹುಪಾಲು ಮತಗಳು ಸುಲಭವಾಗಿ ದೊರೆಯಲಿದೆ ಎಂಬ ವಿಶ್ವಾಸ ಬಿಜೆಪಿಗೆ ಇದೆ.

ಹೀಗಾಗಿ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸುವುದರಿಂದ ಲಿಂಗಾಯತ ಮತಗಳು ಮತ್ತು ಮೀಸಲಾತಿಯ ಕಾರಣಕ್ಕೆ ಒಕ್ಕಲಿಗ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಸುಲಭವಾಗಿ ಬಾಚಿಕೊಳ್ಳಬಹುದು ಎಂಬುದು ಬಿಜೆಪಿ ಹೈಕಮಾಂಡ್‌ ವಾದವಾಗಿದೆ. ಸೋಮಣ್ಣ ಬೇರು ಮಟ್ಟದ ರಾಜಕಾರಣವನ್ನು ಚೆನ್ನಾಗಿ ಬಲ್ಲವರಾಗಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ ಅನುಭವಿದೆ. ಈ ಎಲ್ಲ ಕಾರಣಗಳಿಂದಾಗಿ ಸಿದ್ದರಾಮಯ್ಯ ವಿರುದ್ಧ ವಿ. ಸೋಮಣ್ಣ ಅವರೇ ಪ್ರಬಲ ಅಭ್ಯರ್ಥಿ ಎಂಬುದು ಹೈಕಮಾಂಡ್‌ ಅನಿಸಿಕೆಯಾಗಿದೆ.


Spread the love

About Yuva Bharatha

Check Also

ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ

Spread the love ಬಿಜೆಪಿ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳ ವಿಚಾರದಲ್ಲಿ ಖಚಿತ ತೀರ್ಮಾನ ಮಾಡ್ತೀವಿ: ಸಿದ್ದರಾಮಯ್ಯ …

Leave a Reply

Your email address will not be published. Required fields are marked *

fifteen − ten =