Breaking News

ಜಲ್ಲಿಕಟ್ಟು, ಕಂಬಳ ಕ್ರೀಡೆಗಳಿಗೆ ಸುಪ್ರೀಂ ಕೋರ್ಟ್‌ ಅನುಮತಿ; ತಿದ್ದುಪಡಿ ಕಾಯಿದೆ ಎತ್ತಿ ಹಿಡಿದ ನ್ಯಾಯಾಲಯ

Spread the love

ಜಲ್ಲಿಕಟ್ಟು, ಕಂಬಳ ಕ್ರೀಡೆಗಳಿಗೆ ಸುಪ್ರೀಂ ಕೋರ್ಟ್‌ ಅನುಮತಿ; ತಿದ್ದುಪಡಿ ಕಾಯಿದೆ ಎತ್ತಿ ಹಿಡಿದ ನ್ಯಾಯಾಲಯ

ನವದೆಹಲಿ:
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಗೆ (ಪಿಸಿಎ) ತಮಿಳುನಾಡು ಸರ್ಕಾರ ಮಾಡಿರುವ ತಿದ್ದುಪಡಿಗಳ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಗುರುವಾರ ಎತ್ತಿಹಿಡಿದಿದೆ. ಆ ಮೂಲಕ ರಾಜ್ಯದ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಿದೆ.
ಇದೇ ವೇಳೆ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡುವ ಕಾನೂನುಗಳನ್ನು ಕೂಡ ನ್ಯಾಯಾಲಯ ಎತ್ತಿಹಿಡಿದಿದೆ ಎದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಗೂಳಿಗಳ ನೋವು ಸಂಕಟ ಶಮನಗೊಳಿಸಿ ಕ್ರೀಡೆಯನ್ನು ಮುಂದುವರಿಸಲು ಅನುವು ಮಾಡಿಕೊಡುವಂತಹ ತಿದ್ದುಪಡಿಗಳನ್ನು ಜಾರಿಗೆ ತಂದಿದ್ದು, ಸರ್ಕಾರದ ಕ್ರಮದಲ್ಲಿ ಲೋಪ ಇಲ್ಲ ಎಂದು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ ಅವರಿದ್ದ ಸಾಂವಿಧಾನಿಕ ಪೀಠ ಹೇಳಿದೆ.
ಇದು ಗೋಜಾತಿಯ ಜಾನುವಾರುಗಳಿಗೆ ಸಂಬಂಧಿಸಿದ ಕ್ರೀಡೆಯಾಗಿದ್ದು ಇದರಲ್ಲಿ ಪಾಲ್ಗೊಳ್ಳುವುದಕ್ಕೆ ಅನುಮತಿ ನೀಡಲಾಗುವುದು. ಸಂವಿಧಾನದ 48 ನೇ ವಿಧಿಗೆ ಕಾಯಿದೆ ಸಂಬಂಧಿಸಿದ್ದಲ್ಲ. ಅದು ಭಾರತದ ಸಂವಿಧಾನದ ಏಳನೇ ಶೆಡ್ಯೂನ ನಮೂದು 17, ಪಟ್ಟಿ IIIಗೆ ಸೇರಿದ್ದೆಂದು ಹೇಳಬಹುದಾಗಿದೆ” ಎಂದು ತೀರ್ಪು ವಿವರಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡುವ ಕಾನೂನುಗಳನ್ನು ಕೂಡ ನ್ಯಾಯಾಲಯ ಇದೇ ವೇಳೆ ಎತ್ತಿಹಿಡಿದಿದೆ. ಈ ಕಾನೂನುಗಳು ಸಂವಿಧಾನದ 51A(ಜಿ) ಮತ್ತು 51 ಎ(ಎಚ್‌) ವಿಧಿಗಳನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಅವು 14 ಮತ್ತು 21 ನೇ ವಿಧಿಗಳನ್ನೂ ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ತಿದ್ದುಪಡಿ ಕಾಯಿದೆಗಳು ಮಾನ್ಯತೆ ಪಡೆದ ಶಾಸನಗಳಾಗಿದ್ದು ಈ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತಿದ್ದುಪಡಿ ಮಾಡಿದ ಕಾನೂನಿನ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಜಲ್ಲಿಕಟ್ಟು ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಜನವರಿ 2016ರಲ್ಲಿ, ಕೇಂದ್ರ ಸರ್ಕಾರ ಪಿಸಿಎ ಕಾಯಿದೆಯ ವ್ಯಾಪ್ತಿಯಿಂದ ಜಲ್ಲಿಕಟ್ಟು ಮತ್ತು ಎತ್ತಿನ ಬಂಡಿ ಓಟಗಳಿಗೆ ವಿನಾಯಿತಿ ನೀಡುವ ಹೊಸ ಅಧಿಸೂಚನೆ ಹೊರಡಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ನಂತರ, ತಮಿಳುನಾಡು ಸರ್ಕಾರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಮಿಳುನಾಡು ತಿದ್ದುಪಡಿ) ಕಾಯಿದೆ- 2017ನ್ನು ಜಾರಿಗೊಳಿಸಿತು. ಇದರಿಂದಾಗಿ ಜಲ್ಲಿಕಟ್ಟು ರೀತಿಯ ಗೂಳಿ ಪಳಗಿಸುವ ಕ್ರೀಡೆಗೆ ಹಸಿರು ನಿಶಾನೆ ದೊರೆತಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಅರ್ಜಿದಾರರ ಪರ ವಕೀಲರು ಜಲ್ಲಿಕಟ್ಟು ಒಂದು ಹಿಂಸಾತ್ಮಕ ಕ್ರೀಡೆಯಾಗಿದ್ದು ತಮ್ಮ ಒಪ್ಪಿಗೆ ನೀಡಲಾಗದ ಮೂಕ ಪ್ರಾಣಿಗಳು ಇದರಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ದೂರಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಶ್ಯಾಮ್ ದಿವಾನ್, ಆನಂದ್ ಗ್ರೋವರ್, ಕೃಷ್ಣನ್ ವೇಣುಗೋಪಾಲ್ ಮತ್ತು ವಿ ಗಿರಿ ವಾದ ಮಂಡಿಸಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three × two =