Breaking News

ಗೋಕಾಕನಲ್ಲಿ ಗರ್ಜಿಸಿದ ಸಿಂಹ !

Spread the love

ಗೋಕಾಕನಲ್ಲಿ ಗರ್ಜಿಸಿದ ಸಿಂಹ !

 

ಯುವ ಭಾರತ ಸುದ್ದಿ ಗೋಕಾಕ :
ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಚಿಂತೆ, ರೇವಣ್ಣಗೆ ಪತ್ನಿ ಭವಾನಿ ಸ್ಪರ್ಧಿಸುವ ಕ್ಷೇತ್ರದ ಚಿಂತೆ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿದರು.

ಗೋಕಾಕನಲ್ಲಿ ಶುಕ್ರವಾರ ಬಿಜೆಪಿ ಯುವ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

ಕ್ಷೇತ್ರ ಹಾಗೂ ಹೆಂಡತಿ-ಮಕ್ಕಳ ಬಗ್ಗೆ ಚಿಂತೆ ಮಾಡುವವರಿಂದ ಈ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಅಂತವರಿಗೆ ರಿಟೈರ್ಮೆಂಟ್ ನೀಡಿ ಬಿಜೆಪಿಯನ್ನು ಅರಳಿಸಬೇಕು. ದೇಶಕ್ಕೆ ಆಶಾಕಿರಣವಾಗಿರುವ ಬಿಜೆಪಿಯನ್ನು ಬಹುದೊಡ್ಡ ಅಂತರದಲ್ಲಿ ಬಹುಮತದಿಂದ ಆರಿಸಿ ಕಳಿಸಬೇಕು ಎಂದು ಕರೆ ನೀಡಿದರು.

ಜೆಡಿಎಸ್ ನಲ್ಲಿ ನಡೆದಿರುವ ಕುಟುಂಬ ರಾಜಕಾರಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ಚಿಂತೆಯನ್ನು ಅವರು ತೀವ್ರವಾಗಿ ಟೀಕಿಸಿದರು.
ಗೋಕಾಕಕ್ಕೆ ನಾನು ಮೊದಲ ಸಲ ಬಂದೆ. ರಮೇಶ ಜಾರಕಿಹೊಳಿ ಅವರು ದಾಡಸಿತನದ ನೇತಾರ ಎಂದು ಕೇಳಿದ್ದೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಅವರು ದಾಡಸಿತನದ ನಾಯಕರು ಹೌದು. ಹೀಗಾಗಿಯೇ ಗೋಕಾಕ ಅಭಿವೃದ್ದಿಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹೆಜ್ಜೆಗೆ ಹೆಜ್ಜೆ ಹಾಕುವ ನಾಯಕ ಎಂದರೆ ರಮೇಶ ಜಾರಕಿಹೊಳಿಯವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕರ್ನಾಟಕದವರಿಗೆ ಉತ್ತರ ಕರ್ನಾಟಕ ಎಂದಾಗ ಮೊದಲಿಗೆ ನೆನಪಾಗುವುದು ಈ ಭಾಗ ಹಿಂದುಳಿದ ಪ್ರದೇಶ. ಅದೇ ಕಣ್ಣಿಗೆ ಬರುತ್ತದೆ. ಆದರೆ, ಗೋಕಾಕ ಅತ್ಯಂತ ಸ್ವಚ್ಛ ನಗರಿ. ಇಲ್ಲಿನ ನಗರ ಸಭೆಯು ಬಿಜೆಪಿಯದ್ದೇ ಹಿಡಿತದಲ್ಲಿದೆ. ಸ್ವಚ್ಛ ಮೈಸೂರು ನೋಡಿದಂತೆ ಸ್ವಚ್ಛ ಗೋಕಾಕ ಇಲ್ಲಿ ಕಾಣಿಸುತ್ತದೆ. ರಮೇಶ ಜಾರಕಿಹೊಳಿ ಅವರ ಭದ್ರಕೋಟೆ ಇದು. ಎಲ್ಲಿ ನೋಡಿದರೂ ಅವರನ್ನು ಪ್ರೀತಿಸುವ ಜನ ಇಲ್ಲಿ ಕಾಣಬಹುದು. ಇಡೀ ಕ್ಷೇತ್ರದ ಜನರ ಪ್ರೀತಿ ಗಳಿಸಿರುವ ರಾಜ್ಯದ ಏಕೈಕ ನಾಯಕ ಎಂದರೆ ರಮೇಶ ಜಾರಕಿಹೊಳಿ ಎನ್ನುವುದು ಗೋಕಾಕನಲ್ಲಿ ಕಂಡುಬರುತ್ತದೆ. ಇಲ್ಲಿ ಅವರನ್ನು ಮನಸಾರೆ ಪ್ರೀತಿಸುವ ಜನರಿದ್ದಾರೆ. ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮಂತ್ರಿ ಆಗಬೇಕು. ಈ ನಿಟ್ಟಿನಲ್ಲಿ ನೀವೆಲ್ಲರೂ ವಿಶ್ರಮಿಸದೆ ಅವರನ್ನು 50,000 ಕ್ಕೂ ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಮತಕ್ಷೇತ್ರಗಳಲ್ಲೂ ಪರಿಣಾಮ ಬೀರುವ ಏಕೈಕ ನಾಯಕ ಎಂದರೆ ರಮೇಶ ಜಾರಕಿಹೊಳಿಯವರು. ಅವರ ನಾಯಕತ್ವ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಯಾರು ಎಂಬ ಜಗಳ ನಡೆಯುತ್ತಿದೆ. ಸಿದ್ದರಾಮಯ್ಯ ಎಲ್ಲಾ ಭಾಗ್ಯಗಳನ್ನು ನಾನು ಕೊಟ್ಟೆ ಎನ್ನುತ್ತಾರೆ. ಆದರೆ, ಅವರಿಗೆ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ. ಕೋಲಾರದಲ್ಲಿ ವರ್ತೂರು ಪ್ರಕಾಶ ತೊಡೆ ತಟ್ಟಿದ್ದಾರೆ. ಎಲ್ಲಿ ನಿಂತರು ನನ್ನನ್ನು ಸೋಲಿಸುತ್ತಾರೆ ಎಂಬ ಭಯ ಸಿದ್ದರಾಮಯ್ಯ ಅವರಿಗೆ ಬಂದಿದೆ. ಅವರಿಗೆ ಸ್ಪರ್ಧಿಸುವ ಕ್ಷೇತ್ರದ ಚಿಂತೆ. ವರುಣಾಕ್ಕೆ ಹೋಗಲು ಅವರ ಶ್ರೀಮತಿಯೇ ಬಿಡುತ್ತಿಲ್ಲ. ಅವರ ಶ್ರೀಮತಿಗೆ ಮಗನ ಚಿಂತೆ. ಹಾಸನದಲ್ಲಿ ಜೆಡಿಎಸ್ ಗೆ ಕುಟುಂಬದ ಚಿಂತೆ. ಅಲ್ಲಿ ರೇವಣ್ಣಗೆ ಭವಾನಿಯ ಚಿಂತೆ. ಇವೆರಡು ಪಕ್ಷಗಳಿಗೆ ಕ್ಷೇತ್ರ ಚಿಂತೆ. ಹೆಂಡತಿ-ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿರುವುದರಿಂದ ಈ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ ? ಈ ನಿಟ್ಟಿನಲ್ಲಿ ನೀವು ಆತ್ಮಾವಲೋಕದ ಮಾಡಿಕೊಳ್ಳಬೇಕಿದೆ. ರಾಜ್ಯದ ಅಭಿವೃದ್ಧಿಗೆ ಚಿಂತಿಸುವ ಬಿಜೆಪಿಗೆ ಅಧಿಕಾರಕ್ಕೇರಲು ಜನ ಮನಸ್ಸು ಮಾಡಬೇಕು ಎಂದು ತಿಳಿಸಿದರು.

ಮಾತು ಎತ್ತಿದರೆ ಕಾಂಗ್ರೆಸ್ ಪಕ್ಷ ಕೇಂದ್ರ ಹಾಗೂ ರಾಜ್ಯಕ್ಕೆ ದಮ್ಮು ದಮ್ಮು ಎನ್ನುತ್ತಾರೆ. ರಾಮ ಜನ್ಮಭೂಮಿ ತೀರ್ಪು ಬಂದರೆ ದೇಶದಲ್ಲಿ ಕಲಹ ಆಗುತ್ತದೆ ಎಂದರು. ಆದರೆ, ಸುಪ್ರೀಂಕೋರ್ಟ್ ಗೆ ಧೈರ್ಯ ತುಂಬಿದವರು ನಾವು. ಕಾಶ್ಮೀರದಲ್ಲಿ 370 ವಿಧಿಯನ್ನು ಕಿತ್ತು ಹಾಕಿದವರು ನಾವು. ಚೀನಾದಲ್ಲಿ ಎಂದರೆ ಯುಪಿಎ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ ಅವರಿಗೆ ಹೆದರಿಕೆ ಇತ್ತು. ಆಗ ಅವರು ಚೀನಾ ಗಡಿಯಲ್ಲಿ ಸೇತುವೆ ನಿರ್ಮಾಣಕ್ಕೆ ಬೇಡ ಎಂದರು. ಆದರೆ, ನರೇಂದ್ರ ಮೋದಿ ಪ್ರಧಾನಿ ಆದ ನಂತರ ಚೀನಾ ಭಾರತಕ್ಕೆ ಧಮ್ಕಿ ಹಾಕಲು ಬಂದಾಗ ಮೋದಿ ಅವರ ಧೈರ್ಯ ಪರಾಕ್ರಮ ನೋಡಿ ಹಿಂದೆ ಸರಿದದ್ದು ನಮ್ಮ ದಮ್ಮು. ರಾಜ್ಯ ಸರ್ಕಾರಕ್ಕೂ ದಮ್ಮು ಎಂದು ಹೀಯಾಳಿಸಿದರು. ನಮ್ಮ ಮುಖ್ಯಮಂತ್ರಿ ಅವರು ಕಳಸಾ ಬಂಡೂರಿ ಯೋಜನೆಗೆ ಹೋರಾಟ ಮಾಡಿದರು. ಆದರೆ, ಅವರೇ ಆ ಯೋಜನೆಯನ್ನು ಸಕಾರಗೊಳಿಸುತ್ತಿದ್ದಾರೆ. ಅದು ನಮ್ಮ ದಮ್ಮು. ಭದ್ರಾ ಯೋಜನೆಗೆ 6,000 ಕೋಟಿ ತಂದು ಯೋಜನೆ ಕಾರ್ಯರೂಪಕ್ಕೆ ತಂದೆವು. ಇದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಆಡಳಿತದ ದಮ್ಮು ಎಂದು ಅವರು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು.

ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಜಾತಿ-ಜಾತಿಗಳು, ಧರ್ಮಗಳ ನಡುವೆ ಒಡೆದು ಆಡಳಿತ ನಡೆಸಿತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಸಮುದಾಯ, ಜಾತಿ, ಧರ್ಮಗಳನ್ನು ಒಂದೇ ಎಂದು ಹೇಳಿ ಎಲ್ಲರನ್ನೂ ಭಾರತೀಯರನ್ನಾಗಿ ನೋಡಿತು. ಯಾವುದೇ ಯೋಜನೆಯನ್ನು ತಾರತಮ್ಯ ಮಾಡಲಿಲ್ಲ. ನಾವು
ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರದಲ್ಲಿ ಭಾರತ ಜೋಡೋ ಯಾತ್ರೆ ಕೈಗೊಂಡರು. ಕಾಶ್ಮೀರಕ್ಕೆ ಹೋಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅಲ್ಲಿಯ ವಾತಾವರಣವನ್ನು ಕೊಂಡಾಡಿದರು. ಆದರೆ, ಮೋದಿ ಪ್ರಧಾನಿಯಾಗುವ ಮೊದಲು ಕಾಶ್ಮೀರದ ಜನರ ಕೈಯಲ್ಲಿ ಎಕೆ 47 ಕಾಣಿಸುತ್ತಿತ್ತು. ಮೋದಿ ಪ್ರಧಾನಿಯಾದ ನಂತರ ಈಗ ಅಲ್ಲಿಯ ಜನರ ಕೈಯಲ್ಲಿ ತಿರಂಗಾ ಕಾಣಿಸುತ್ತಿದೆ. ಬಿಜೆಪಿ ಅಭಿವೃದ್ಧಿಯನ್ನು ಮಾಡಿ ತೋರಿಸಿದೆ. ಹೀಗಾಗಿ ಕಾಶ್ಮೀರದಲ್ಲಿ ಇದೀಗ ಬದಲಾವಣೆಯ ಅಲೆ ಕಾಣಿಸಿಕೊಂಡಿದೆ ಎಂದು ಹೇಳಿದರು.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಚುನಾವಣೆಗೆ ಹಲವು ತಿಂಗಳುಗಳು ಇರುವಂತೆ ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ದುಡಿಯುತ್ತಾರೆ. ಇಲ್ಲಿ ಅಭ್ಯರ್ಥಿ ಯಾರೆಂಬುದನ್ನು ನೋಡದೆ ಯಾರೇ ಇರಲಿ ಅವರ ಗೆಲುವಿಗಾಗಿ ಶ್ರಮಿಸುತ್ತಾರೆ. ಬಿಜೆಪಿಯ ಈ ನಿಲುವು ನನಗೆ ಬಹಳ ಹಿಡಿಸಿದೆ ಎಂದು ಹೇಳಿದರು.

 

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಮೋದಿ ಪ್ರಧಾನಿಯಾಗುವ ಮೊದಲು ಚೀನಾ ಹಾಗೂ ಪಾಕಿಸ್ತಾನಗಳಿಂದ ಬರಿ ಗಲಾಟೆ ನಡೆಯುತ್ತಿತ್ತು. ಉಗ್ರರು ಸಾವಿರಾರು ಕಿಲೋಮೀಟರ್ ದೂರದ ಮುಂಬೈಗೆ ಬಂದು ಬಾಂಬ್ ಸ್ಫೋಟ ಮಾಡಿದರು. ಮೋದಿ ಅವರನ್ನು ಸಹ ಪಾಕಿಸ್ತಾನ ಪರೀಕ್ಷೆ ಮಾಡಲು ಮುಂದಾಯಿತು. ಆದರೆ, ಮೋದಿ ಅದಕ್ಕೆ ತಕ್ಕ ಶಾಸ್ತಿ ಮಾಡಿದರು. ಮೋದಿ ಅವರ ಆಡಳಿತದಲ್ಲಿ ಗಟ್ಟಿತನವಿದೆ. ಇದರಿಂದಾಗಿ ಬೇರೆ ದೇಶದವರು ಬಂದು ತಮ್ಮ ದೇಶದ ಸಮಸ್ಯೆಗೆ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಮುಂದಿನ ಐದಾರು ವರ್ಷದಲ್ಲಿ ಮೊದಲ ಸ್ಥಾನ ಸಿಗುವುದು ಶತಸಿದ್ಧ. ಕೇಂದ್ರ ಹಾಗೂ ರಾಜ್ಯದಲ್ಲಿ ಮುಂದಿನ ಚುನಾವಣೆಗಳಲ್ಲಿ ಡಬಲ್ ಇಂಜಿನ್ ಸರಕಾರ ಬರುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬಿಜೆಪಿ ವಿರುದ್ದ ಬರೀ ಭ್ರಷ್ಟಾಚಾರದ ಅಪಪ್ರಚಾರ ಮಾಡುತ್ತಿದೆ. ಆದರೆ, ದಾಖಲೆಗಳನ್ನು ನೀಡಲು ಮುಂದಾಗುತ್ತಿಲ್ಲ. ಅವರ ಆರೋಪಕ್ಕೆ ಯಾವುದೇ ಮಹತ್ವವಿಲ್ಲ. ಕಾಂಗ್ರೆಸ್ ನೀಡುವ ಗ್ಯಾರಂಟಿ ಯೋಜನೆ ಹಲವಾರು ರಾಜ್ಯಗಳಲ್ಲಿ ಈಡೇರಿಸಲಿಲ್ಲ. ಗುಜರಾತ್ ಹಾಗೂ ಛತ್ತೀಸಗಢಗಳಲ್ಲಿ ಕಾಂಗ್ರೆಸ್ ನೀಡಿದ ಭರವಸೆ ಇಂದಿಗೂ ಈಡೇರಿಲ್ಲ. ಕಾಂಗ್ರೆಸ್ ನವರು ಕರ್ನಾಟಕವನ್ನು ಎಟಿಎಂ ಮಾಡಿಕೊಡಲು ಸಾಧ್ಯವಿಲ್ಲ. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣಬಹುಮತ ಗಳಿಸಲಿದೆ. 2024 ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಮತ್ತೆ ಬಿಜೆಪಿ ಸರಕಾರ ಬರಲಿದೆ ಎಂದು ಅವರು ಭವಿಷ್ಯ ನುಡಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three + 9 =