Breaking News

ಮೋದಿ ಆಗಮನಕ್ಕೆ ಕುಂದಾನಗರಿ ಜನತೆ ಕಾತರ

Spread the love

ಮೋದಿ ಆಗಮನಕ್ಕೆ ಕುಂದಾನಗರಿ ಜನತೆ ಕಾತರ

ಯುವ ಭಾರತ ಸುದ್ದಿ ಬೆಳಗಾವಿ :
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವನ್ನು ಐತಿಹಾಸಿಕವಾಗಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನಲೆಯಲ್ಲಿ ಮೋದಿ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿ ಅದರ ಪೂರ್ಣ ಲಾಭ ಪಡೆಯಲು ಕೇಸರಿ ಪಡೆ ಸಂಕಲ್ಪಿಸಿದೆ.
ಎಲ್ಲಿ ನೋಡಿದರೂ ಕೇಸರಿ ಧ್ವಜಗಳ ಹಾರಾಟ..ಮೋದಿ ಕುರಿತ ವಿಡಿಯೋಗಳ ಆರ್ಭಟ.. ಬೆಳಗಾವಿಯಲ್ಲಿಂದು ಕಂಡುಬಂದಿರುವ ನೋಟವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗಾವಿ ಮಹಾನಗರಕ್ಕೆ ಸೋಮವಾರ ಮಧ್ಯಾಹ್ನ ಆಗಮಿಸುತ್ತಿದ್ದಾರೆ. ಅವರನ್ನು ತೀರಾ ಹತ್ತಿರದಿಂದ ಕಾಣುವ ಅವಕಾಶ ನಗರದ ಜನತೆಗೆ ಲಭಿಸಿದೆ. ಬೆಳಗಾವಿ ನಗರವನ್ನು ಬಿಜೆಪಿ ಇದೀಗ ಸಂಪೂರ್ಣ ಕೇಸರಿಮಯ ಮಾಡಿದೆ. ವರ್ಚಸ್ವಿ ನಾಯಕರಾಗಿರುವ ಮೋದಿ ಅವರನ್ನು ಬೆಳಗಾವಿ ಕರೆತಂದು ರೋಡ್ ಶೋ ನಡೆಸಲು ಯಶಸ್ವಿಯಾಗಿರುವ ಬಿಜೆಪಿ ನಾಯಕರು ಒಟ್ಟಾರೆ ಮೋದಿ ಕಾರ್ಯಕ್ರಮವನ್ನು ಐತಿಹಾಸಿಕವನ್ನಾಗಿಸಲು ಸಂಕಲ್ಪಿಸಿದ್ದಾರೆ.

ಬೆಳಗಾವಿ ರಸ್ತೆಗಳನ್ನು ಸ್ವಚ್ಛಗೊಳಿಸಿ ವರ್ಣಮಯಗೊಳಿಸಲಾಗಿದೆ.
ಬಿಜೆಪಿ ಹಾಗೂ ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿದೆ. ನಗರ ಈಗ ನವವಧುವಿನಂತೆ ಶೃಂಗಾರಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಧ್ಯಾಹ್ನ ರಾಣಿ ಚನ್ನಮ್ಮ ವೃತ್ತದಿಂದ ಕಾಲೇಜು ರಸ್ತೆ, ರಾಮಲಿಂಗಖಿಂಡಗಲ್ಲಿ, ಶನಿ ಮಂದಿರ, ಕಪಿಲೇಶ್ವರ, ಶಿವ ಛತ್ರಪತಿ ಶಿವಾಜಿ ಉದ್ಯಾನ ಮೂಲಕ 10.5 ಕಿಲೋಮೀಟರ್ ನಷ್ಟು ದೂರ ಸಾಗಿ ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನ್ಯ ಸಿಟಿಯಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯವರು ಮೊದಲ ಬಾರಿಗೆ ಇಷ್ಟು ದೂರದ ರೋಡ್ ಶೋ ಕರ್ನಾಟಕದಲ್ಲಿ ನಡೆಸುತ್ತಿದ್ದಾರೆ. ರೋಡ್ ಶೋ ಸಾಗಲಿರುವ ಮಾರ್ಗದ ಉದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಇಡೀ ಬೆಳಗಾವಿ ಇದೀಗ ಕೇಸರಿಮಯವಾಗಿ ಪರಿವರ್ತನೆಗೊಂಡಿದೆ. ರಸ್ತೆಗಳು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿ ಭೇಟಿ ಹಿನ್ನೆಲೆಯಲ್ಲಿ ಹೊಸ ಲುಕ್ ಪಡೆದುಕೊಂಡಿವೆ. ಪ್ರಧಾನಿಯವರನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಲಭಿಸಿರುವುದರಿಂದ ಬೆಳಗಾವಿ ಮಹಾನಗರ ಜನತೆ ಕಾತರದ ಕ್ಷಣಗಳಿಗೆ ಕಾಯುತ್ತಿದ್ದಾರೆ. ಬೆಳಗಾವಿ ಪಾಲಿಗೆ ಇದೊಂದು ಐತಿಹಾಸಿಕ ಹಾಗೂ ಮರೆಯಲಾರದ ಕಾರ್ಯಕ್ರಮವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.


ಶಿವಮೊಗ್ಗದಲ್ಲೂ ನೂತನ ವಿಮಾನ ನಿಲ್ದಾಣ ಉದ್ಘಾಟಿಸಲಿರುವ ಮೋದಿ ಮಧ್ಯ ಕರ್ನಾಟಕದ ಜನತೆಯನ್ನು ಸೆಳೆಯಲಿದ್ದಾರೆ. ಒಟ್ಟಾರೆ ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಭರ್ಜರಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿರುವ ಪ್ರಧಾನಿಯವರು ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬುವುದನ್ನು ನಿಶ್ಚಿತ.
ಜೊತೆಗೆ ಭದ್ರತೆ ದೃಷ್ಟಿಯಿಂದ ಬೆಳಗಾವಿ ಮಹಾನಗರದಲ್ಲಿ ಎಲ್ಲಿ ನೋಡಿದರಲ್ಲಿ ಬಿಗು ಪೋಲಿಸ್ ಬಂದೋಬಸ್ತ್ ಸರ್ಪಗಾವಲು ಹಾಕಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಶಿವಮೊಗ್ಗ ಪಾಲಿಗೆ ಐತಿಹಾಸಿಕ ದಿನ. ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯ ವಿಮಾನ ನಿಲ್ದಾಣ ಉದ್ಘಾಟನೆ ನನ್ನ ಜೀವನದಲ್ಲಿ ಮರೆಯಲಾರದ ಕ್ಷಣ ಎಂದು ತಿಳಿಸಿದ್ದಾರೆ.

ಕಿಸಾನ್ ಸಮ್ಮಾನ್: 16 ಸಾವಿರ ಕೋಟಿ ರೂಪಾಯಿ ರೈತರ ಖಾತೆಗೆ ನೇರ ಜಮೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಪ್ರಧಾನಮಂತ್ರಿಗಳ‌ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಮಾಡಲಾಗಿದ್ದು, ಒಂದು ಲಕ್ಷಕ್ಕಿಂತ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರು ತಿಳಿಸಿದರು.

ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಫೆ.27 ರಂದು ನಡೆಯಲಿರುವ ಮಾನ್ಯ ಪ್ರಧಾನಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆಯನ್ನು ಭಾನುವಾರ(ಫೆ.26) ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನು ಮಾನ್ಯ ಪ್ರಧಾನಮಂತ್ರಿಗಳು ನೇರವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆ/ವರ್ಗಾವಣೆ ಮಾಡಲಿದ್ದಾರೆ.
ದೇಶದ ಒಟ್ಟು 8 ಕೋಟಿ ರೈತರ ಖಾತೆಗೆ ತಲಾ 2 ಸಾವಿರದಂತೆ 16 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಕರ್ನಾಟಕ ರಾಜ್ಯದ 49.55 ರೈತರಿಗೆ 991 ಕೋಟಿ ರೂಪಾಯಿ ಮತ್ತು ಬೆಳಗಾವಿ ಜಿಲ್ಲೆಯ 5.10 ಲಕ್ಷ ರೈತರ ಖಾತೆಗೆ 102 ಕೋಟಿ ರೂಪಾಯಿಗಳನ್ನು ಮಾನ್ಯ ಪ್ರಧಾನಮಂತ್ರಿಗಳು ವರ್ಗಾವಣೆ ಮಾಡಲಿದ್ದಾರೆ ಎಂದು ಹೇಳಿದರು.

ಜನಜೀವನ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 1120 ಕೋಟಿ ರೂಪಾಯಿ ವೆಚ್ಚದ ವಿವಿಧ ತಾಲ್ಲೂಕುಗಳ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಿಗಳು ಬಟನ್‌ ಒತ್ತುವ ಮೂಲಕ 8 ಕೋಟಿ ರೈತರಿಗೆ ಕಿಸಾನ್‌ ಸಮ್ಮಾನ್‌ ನಿಧಿಯ ಯೋಜನೆಯ ಹಣ ವರ್ಗಾವಣೆ ಮಾಡಲಿದ್ದಾರೆ. ಲೋಂಡಾ– ಬೆಳಗಾವಿ– ಘಟಪ್ರಭಾ ಡಬ್ಲಿಂಗ್‌ ರೈಲು ಮಾರ್ಗವನ್ನು ಅವರು ದೇಶಕ್ಕೆ ಸಮರ್ಪಣೆ ಮಾಡುವರು. ನವೀಕರಣಗೊಂಡ ಬೆಳಗಾವಿ ರೈಲು ನಿಲ್ದಾಣ ಹಾಗೂ ಜಲಜೀನ್‌ ಮಿಷನ್‌ ಅಡಿ ನಡೆದ ಕಾಮಗಾರಿಗಳನ್ನು ಉದ್ಘಾಟಿಸುವರು.

ಬೃಹತ್ ರೋಡ್ ಶೋ:

ಬೆಳಗಾವಿ ನಗರದಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ ಬಳಿಕ ಮಧ್ಯಾಹ್ನ ಮಾಲಿನಿ ಸಿಟಿ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಗಳು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಕೆಎಸ್‌ಆರ್‌ಪಿ ಮೈದಾನಕ್ಕೆ ತೆರಳುವರು. ಅಲ್ಲಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಬಂದ ನಂತರ, ರೋಡ್ ಶೋ ಆರಂಭಿಸಲಿದ್ದಾರೆ’ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ, ನರೇಂದ್ರಸಿಂಗ್ ಥೋಮರ್‌ ಸೇರಿದಂತೆ ಬೆಳಗಾವಿ ಜಿಲ್ಲೆ ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಕೂಡ ಇರಲಿದ್ದಾರೆ.

ವೇದಿಕೆ ಕಾರ್ಯಕ್ರಮದಲ್ಲಿ 1 ಲಕ್ಷ ಕುರ್ಚಿ ಹಾಕಿಸಲಾಗಿದೆ. ಇದಲ್ಲದೇ, ಚನ್ನಮ್ಮ ವೃತ್ತದಿಂದ ರೋಡ್‌ ಶೋ ನೋಡಲು 8 ಪಾಯಿಂಟ್‌ಗಳನ್ನು ಮಾಡಲಾಗಿದೆ. ಜನ ಅಲ್ಲಿ ನಿಂತು ಪ್ರಧಾನಿ ಅವನ್ನು ಸ್ವಾಗತಿಸುವರು. 10.45 ಕಿ.ಮೀ ಉದ್ದದ ರ್‍ಯಾಲಿ ಇದು. ಬೆಳಗಾವಿ ಮಟ್ಟಿಗೆ ಇದು ಹಿಂದೆಂದೂ ನಡೆದಿರದ ದೊಡ್ಡ ರ್‍ಯಾಲಿ. ಇದೊಂದು ದಾಖಲೆಯಾಗಲಿದೆ ಎಂದರು.

ಇದಾದ ಬಳಿಕ ಮುಖ್ಯ ವೇದಿಕೆ, ಆಸನ ವ್ಯವಸ್ಥೆ, ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ರಂಗೋಲಿ ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಸಚಿವ ಪ್ರಹ್ಲಾದ ಜೋಶಿ ಪರಿಶೀಲಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಫಲಾನುಭವಿಗಳು, ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಭದ್ರತೆ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿವರಿಸಿದರು.
ಶಾಸಕರು ಹಾಗೂ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಅನಿಲ್‌ ಬೆನಕೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜಿರ್ಲಿ ಸೇರಿದಂತೆ ಅನೇಕ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

seventeen − fifteen =