Breaking News

ಬಾನುಲಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ!

Spread the love

ಬಾನುಲಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ!

 

ಯುವ ಭಾರತ ಸುದ್ದಿ ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಸಮುದಾಯ ಬಾನುಲಿ ಮತ್ತು ಖಾಸಗಿ ಎಫ್‌ಎಂ ಚಾನೆಲ್‌ಗಳು ಎಲ್ಲ ನಗರಗಳಲ್ಲೂ ಕಾರ್ಯನಿರ್ವಹಿಸುತ್ತಿವೆ. ಆ ಕಾರಣದಿಂದ ಬಾನುಲಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅನೇಕ ನವ ಪ್ರತಿಭೆಗಳ ಅವಶ್ಯಕತೆಯಿದೆ. ಹಾಗಾಗಿ ಉದ್ಯೋಗ ಪಡೆಯಲು ಬಾನುಲಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಜೆಎಂಸಿ ವಿಭಾಗದ ಡಾ.ಸಂಜಯ ಮಾಲಗತ್ತಿ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಇತ್ತೀಚೆಗೆ ಏರ್ಪಡಿಸಿದ್ದ ಎರಡು ದಿನದ ಪುನಃಶ್ಚೇತನ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಉದ್ಘೋಷಕರು, ನಿರೂಪಕರು, ತಂತ್ರಜ್ಞರು, ಎಡಿಟರ್ಸ್‌, ಕಂಟೆಂಟ್ ಬರಹಗಾರರು, ರೇಡಿಯೋ ಕಾರ್ಯಕ್ರಮ ನಿರ್ಮಾಣ ವಿಭಾಗ ಹೀಗೆ ಅನೇಕ ಕೌಶಲ್ಯಗಳನ್ನು ವೃದ್ಧಿಸಿಕೊಂಡ ಯುವಕರಿಗೆ ಬಾನುಲಿ ಕ್ಷೇತ್ರದಲ್ಲಿ ಉದ್ಯೋಗ ಸುಲಭವಾಗಿ ದೊರೆಯುವುದು. ಆದ್ದರಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಬಾನುಲಿ ಕಾರ್ಯಕ್ರಮಗಳ ಶೈಲಿ, ಎಡಿಟಿಂಗ್ ಈ ಎಲ್ಲ ಕೌಶಲ್ಯಗಳನ್ನು ಪರಿಣಿತಿ ಸಾಧಿಸಬೇಕು ಎಂದರು.

ಅನೇಕ ವೈಶಿಷ್ಟತೆಗಳನ್ನು ಹೊಂದಿರುವ ಬಾನುಲಿ ಮಾಧ್ಯಮವು ಉಳಿದೆಲ್ಲ ಮಾಧ್ಯಮಗಳಿಗಿಂತ ಭಿನ್ನವಾಗಿದೆ. ಆದ ಕಾರಣ ಸಾಮಾಜಿಕ ಜಾಲತಾಣ, ಟಿ.ವಿ ಮತ್ತು ಸಿನಿಮಾ ಮಾಧ್ಯಮಗಳ ಭರಾಟೆ ಮಧ್ಯ ಬಾನುಲಿಯು ಜನರ ಮೆಚ್ಚುಗೆ ಗಳಿಸಿದ ಮಾಧ್ಯಮವಾಗಿದೆ. ಅಷ್ಟೇ ಅಲ್ಲದೆ ಕಾಲಕ್ಕೆ ತಕ್ಕಂತೆ ಬಾನುಲಿ ತನ್ನ ಕಾರ್ಯ ಶೈಲಿ ಬದಲಾಯಿಸಿಕೊಂಡ ಪರಿಣಾಮ ಬಾನುಲಿಯ ಜನಪ್ರಿಯತೆ ಕುಗ್ಗುವ ಬದಲಾಗಿ, ಹಿಗ್ಗುತ್ತಾ ಸಾಗಿದೆ. ಈ ಎಲ್ಲಾ ವೈಶಿಷ್ಟತೆ ಹೊಂದಿದ ಬಾನುಲಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳ ಸತತ ಅಧ್ಯಯನಶೀಲರಾಗುವ ಜೊತೆಗೆ ಅವಶ್ಯಕ ಧ್ವನಿ ಪರಿಷ್ಕರಣೆಯ ತಂತ್ರಾಂಶಗಳಲ್ಲಿ ಕಾರ್ಯ ನಿರ್ವಹಿಸುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ. ಕಮಲಾಕ್ಷಿ ತಡಸದ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರ ಮತ್ತು ವೃತ್ತಿ ನಿತ್ಯ ನೂತನ ಸವಾಲುಗಳು ಎದುರಾಗುವ ಮತ್ತು ನವ ಅನುಭವಗಳನ್ನು ನೀಡುತ್ತದೆ. ಆದ್ದರಿಂದ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಬಹು ಆಯಾಮಗಳಲ್ಲಿ ಪರಿಣಿತಿ ಪಡೆಯುವ ಅವಶ್ಯಕತೆಯಿದೆ ಎಂದು ಹೇಳಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಎಲ್‌ಇ ವೇಣುಧ್ವನಿ ಎಫ್‌ಎಂ ಕಾರ್ಯಕ್ರಮ ನಿರ್ವಾಹಕ ಅಧಿಕಾರಿ ಮಂಜುನಾಥ ಬಳ್ಳಾರಿ ಮಾತನಾಡಿ, ಸಮುದಾಯ ಬಾನುಲಿಗಳ ವಿಶೇಷತೆ ಮತ್ತು ಅವುಗಳು ಕಾರ್ಯನಿರ್ವಹಿಸುವ ವಿಧಾನದ ಬಗ್ಗೆ ತಿಳಿಸಿದರು. ಕೆಎಎಲ್‌ಇ ವೇಣುಧ್ವನಿ ಎಫ್‌ಎಂ ಕಾರ್ಯಕ್ರಮ ನಿರ್ವಾಹಕಿ ಮನೀಷಾ ಪಿ.ಎಸ್. ಮಾತನಾಡಿ, ಬಾನುಲಿ ಕಾರ್ಯಕ್ರಮಗಳ ಉದ್ಘೋಷಕರ ಮತ್ತು ನಿರೂಪಕರ ಧ್ವನಿ ಮತ್ತು ಮಾತುಗಾರಿಕೆ ಕುರಿತಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ವಿಭಾಗದ ಸಿಬ್ಬಂದಿ ವಿದ್ಯಾಶ್ರೀ ಹಾಲಕೇರಿಮಠ, ಪೂಜಾ ಹೆಗಡೆ, ಅರುಣ ಹೊಸಮಠ ಮತ್ತು ಮೀನಾಕ್ಷಿ ಕಳ್ಳಿ ಇದ್ದರು. ಮಂಜುನಾಥ ಡೊಣುರ ಸ್ವಾಗತಿಸಿದರು. ಸಂಜೀವಿನಿ ಉಳ್ಳಾಗಡ್ಡಿ ಪರಿಚಯಿಸಿದರು. ವಿಜಯಕುಮಾರ ಬುದ್ರಿ ನಿರೂಪಿಸಿದರು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

1 × four =