ಬಸ್ ಇಲ್ಲ ; ಮಿರಗಿ ಗ್ರಾಮದ ಕಾಲೇಜು ವಿದ್ಯಾರ್ಥಿಗಳಿಗೆ ಗೂಡ್ಸ್ ವಾಹನವೇ ಗತಿ !
ಖಾಜು ಸಿಂಗೆಗೋಳ
ಯುವ ಭಾರತ ಸುದ್ದಿ ಇಂಡಿ : ಗ್ರಾಮೀಣ ಪ್ರದೇಶಕ್ಕೆ ಸಮರ್ಪಕ ಬಸ್ ಸಂಚಾರ ಒದಗಿಸದೆ ಇರುವುದರಿಂದ ವಿದ್ಯಾರ್ಥಿಗಳು ಶಾಲೆ,ಕಾಲೇಜಿಗೆ ಗೂಡ್ಸ ವಾಹನ,ಟಂಟಂ ನಲ್ಲಿ ಹೋಗುವ ಪರಿಸ್ಥಿತಿ ಉಂಟಾಗಿದೆ.ಇಂಡಿ ಸಾರಿಗೆ ಘಟಕದ ಬಸ್‌ಗಳು ಮದುವೆ ಹಾಗೂ ಶಾಲಾ ವಿದ್ಯಾರ್ಥಿಗಳ ಪ್ರವಾಸಕ್ಕೆ ಹೋಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಸ್ಸಿನ ಅನಾನೂಕಲವಾಗಿರುವ ತುಂಟು ನೆಪದಲ್ಲಿ ಸಾರಿಗೆ ಘಟಕದ ಅಧಿಕಾರಿಗಳು ಶಾಲಾ ವಿದ್ಯಾರ್ಥಿಗಳ ಜೊತೆ ಚಲ್ಲಾಟ ಆಡುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ದೂರು.
ತಾಲೂಕು ಕೇಂದ್ರದಿಂದ ಸುಮಾರು ೩೦ ಕಿ.ಮೀ.ಅಂತರದಲ್ಲಿ ತಾಲೂಕಿನ ಕೊನೆಯ ಹಳ್ಳಿ ಮಿರಗಿ ಗ್ರಾಮಕ್ಕೆ ಬಸ್ಸಿನ ಸೌಕರ್ಯ ಇಲ್ಲದಕ್ಕಾಗಿ ವಿದ್ಯಾರ್ಥಿಗಳು ನಿತ್ಯ ಗೂಡ್ಸ ವಾಹನ,ಇಲ್ಲವೆ ಟಂಟಂನಲ್ಲಿ ಕಾಲೇಜಿಗೆ ಹೋಗುವ ಪರಿಸ್ಥಿತಿ ಉಂಟಾಗಿದೆ.ಗೂಡ್ಸ ವಾಹನದಲ್ಲಿ ಮಕ್ಕಳನ್ನು ಕಳುಹಿಸಿದರೆ ಏನಾದರು ತೊಂದರೆ ಉಂಟಾಗಬಹುದು ಎಂಬ ಆತಂಕದಲ್ಲಿಯೇ ಪಾಲಕರು ಮಕ್ಕಳಿಗೆ ಗೂಡ್ಸ ವಾಹನದಲ್ಲಿ ಕಾಲೇಜುಗಳಿಗೆ ಕಳುಹಿಸಿದ್ದಾರೆ. ವಿದ್ಯಾರ್ಥಿಗಳು ವಾರ್ಷಿಕ ಬಸ್ ಪಾಸ್ ತೆಗೆಸಿಕೊಂಡಿದ್ದರೂ,ಬಸ್ಸಿನ ಅನಾನುಕೂಲತೆಯಿಂದ ಹಣ ನೀಡಿ ಗೂಡ್ಸ ವಾಹನದಲ್ಲಿ ಹೋಗುತ್ತಿದ್ದಾರೆ.
ಹಳ್ಳ ಹಿಡಿದ ಹಳ್ಳಿ ಬಸ್ ಸಂಚಾರ ವ್ಯವಸ್ಥೆ : ಹೌದು ಇಂಡಿ ಸಾರಿಗೆ ಘಟಕದಿಂದ ನಿತ್ಯ ಗ್ರಾಮೀಣ ಪ್ರದೇಶಗಳಿಗೆ ಓಡುವ ಬಸ್ ಸಂಚಾರ ದಿನದಿಂದ ದಿನಕ್ಕೆ ಮಾರ್ಗಗಳು ಸ್ಥಗಿತಗೊಳ್ಳುತ್ತಿದ್ದು, ಸಾರಿಗೆ ಬಸ್‌ನ್ನೆ ನಂಬಿಕೊಂಡಿರುವ ಸಾವಿರಾರು ಗ್ರಾಮೀಣ ಪ್ರದೇಶದ ಶಾಲೆ,ಕಾಲೇಜಿನ ವಿದ್ಯಾರ್ಥಿಗಳು ನಿತ್ಯ ಉಪವಾಸದಿಂದ ಕಾಲ್ನಡಿಗೆಯಲ್ಲಿ ಗ್ರಾಮ ತಲುಪಬೇಕಾದ ಪರಿಸ್ಥಿತಿ ತಲುಪಿದೆ. ಗ್ರಾಮೀಣ ಪ್ರದೇಶದಿಂದ ನಿತ್ಯ 30 ಕಿಮೀ ದೂರದ ತಾಲೂಕು ಕೇಂದ್ರದಲ್ಲಿನ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಿದ್ದು, ಕಾಲೇಜು ಅವಧಿ ಮುಗಿದ ಮೇಲೆ ಬಸ್ಸಿಗಾಗಿ ಕಾಯ್ದು ,ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ಉಪವಾಸದಿಂದ ಮುಖ ಸಪ್ಪಗೆ ಮಾಡಿಕೊಂಡು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಬೇಕಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ಇಂಡಿ ಬಸ್‌ಗಳು ಮದುವೆ ಸಮಾರಂಭ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರಿಂದ ಬಸ್ಸಿನ ಅನಾನೂಕೂಲತೆ ಆಗಿರಬಹುದು ಎಂದು ಸಬೂಬು ಹೇಳುತ್ತಾರೆ.
ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಹಾಗೂ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸಿನ ಅನಾನುಕೂಲತೆ ಆಗುತ್ತದೆ ಎಂಬುದು ಗೊತ್ತಿದ್ದರೂ ಸಹ ಅಧಿಕಾರಿಗಳು ಮದುವೆ ಇತರೆ ಸಮಾರಂಭಗಳಿಗೆ ಬಸ್‌ಗಳು ಬಾಡಿಗೆ ನೀಡುತ್ತಿರುವುದು ವಿದ್ಯಾರ್ಥಿ,ಪ್ರಯಾಣಿಕರ ದುರ್ದೈವದ ಸಂಗತಿ. ಇಂಡಿ,ಚಡಚಣ ತಾಲೂಕು ಸೇರಿ ಒಟ್ಟು ೧೨೪ ಗ್ರಾಮಗಳನ್ನು ಹೊಂದಿರುವ ತಾಲೂಕಿನ ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಸಮರ್ಪಕ ಬಸ್ಸಿನ ಸೌಕರ್ಯ ಒದಗಿಸದಕ್ಕಾಗಿ ಇಲ್ಲಿನ ಡಿಪೋ ಅಽಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.ಅಽಕಾರಿಗಳು ಹೇಳುವ ಪ್ರಕಾರ ಇಂಡಿ ಬಸ್ ಘಟಕದಲ್ಲಿ ೧೦೪ ಸೇಡ್ಯೂಲ್ಡಗಳು ಇವೆ.ಪ್ರತಿನಿತ್ಯ ಎಲ್ಲ ಸೇಡ್ಯೂಲ್ಡಗಳು ಓಡಿಸಬೇಕು ಎಂಬ ಸಂಸ್ಥೆಯ ನಿಯಮ ಇದೆ. ಚಾಲಕ ಹಾಗೂ ನಿರ್ವಾಹಕರ ಕೊರತೆಯ ನೆಪದಿಂದ ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳು ನಿಗದಿತ ಸಮಯಕ್ಕೆ ಓಡುತ್ತಿಲ್ಲ.ಒಂದೊಂದು ದಿನ ಸಂಜೆಯಾದರು ಬಸ್ ಓಡುವುದಿಲ್ಲ.ಅಲ್ಲಿಯವರೆಗೆ ಪ್ರಯಾಣಿಕರು,ಶಾಲೆ,ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಉಪವಾಸ ಇರುವ ಶಿಕ್ಷೆ ಅನುಭವಿಸುತ್ತಿದ್ದಾರೆ.
ನಿತ್ಯ ಉಪವಾಸ ಶಿಕ್ಷೆ : ಗ್ರಾಮೀಣ ಪ್ರದೇಶದಿಂದ ಬೆಳಿಗ್ಗೆ ೭ ಗಂಟೆಗೆ ತಾಲೂಕು ಕೇಂದ್ರ ಇಂಡಿ ಪಟ್ಟಣಕ್ಕೆ ಬರುವ ಶಾಲೆ,ಕಾಲೇಜಿನ ವಿದ್ಯಾರ್ಥಿಗಳು ಮಧ್ಯಾಹ್ನ ೧ ಗಂಟೆಗೆ ಕಾಲೇಜು ಅವಽ ಮುಗಿದ ಮೇಲೆ ಗ್ರಾಮಕ್ಕೆ ಹೋಗಬೇಕಾದರೆ ಬಸ್ಸಿನ ಕೊರತೆಯಿಂದ ವಿದ್ಯಾರ್ಥಿಗಳು ಸಂಜೆ ೪ ಗಂಟೆ ಬಸ್ ಬರುವವರೆಗೆ ಉಪವಾಸ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.
“ಮಿರಗಿ ಗ್ರಾಮದಿಂದ ನಿತ್ಯ ಸಮೀಪದ ೬ ಕಿಮೀ ಅಂತರದಲ್ಲಿರುವ ಗೋಳಸಾರ ಗ್ರಾಮಕ್ಕೆ ಸುಮಾರು 30 ರಿಂದ 4೦ ವಿದ್ಯಾರ್ಥಿಗಳು ಬೆಳಿಗ್ಗೆ ಕಾಲೇಜಿಗೆ ಹೋಗುತ್ತಾರೆ. ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವುದರಿಂದ ನಿತ್ಯ ೬ ಕಿಮೀ ನಡೆದುಕೊಂಡು ಕಾಲೇಜಿಗೆ ಹೋಗಬೇಕು,ಇಲ್ಲವೆ ಗೂಡ್ಸ ವಾಹನದಲ್ಲಿ ಹೋಗಬೇಕಾಗಿದೆ.ಬಸ್ಸಿನ ಅನಾನುಕೂಲತೆಯಿಂದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗದಂತಾಗಿದೆ.ಪರೀಕ್ಷೆ ಸಮೀಪಿಸುತ್ತಿರುವದರಿಂದ ಕಾಲೇಜು ಅಭ್ಯಾಸಕ್ಕೆ ತೊಂದರೆಯಾಗುತ್ತಿದ್ದು,ಪರೀಕ್ಷೆ ಬರೆಯುವುದಾದರೂ ಹೇಗೆ ಎಂಬ ಚಿಂತೆ ವಿದ್ಯಾರ್ಥಿಗಳಲ್ಲಿ ಕಾಡುತ್ತಿದೆ.ಬಸ್ ಸೌಲಭ್ಯದ ಕೊರತೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಕೂಡಲೆ ಇಂಡಿ ಸಾರಿಗೆ ಘಟಕದ ಅಧಿಕಾರಿಗಳು ಮದುವೆ ಸಮಾರಂಭಗಳಿಗೆ ಬಸ್ ನೀಡುವುದು ನಿಲ್ಲಿಸಿ,ಗ್ರಾಮೀಣ ಪ್ರದೇಶಕ್ಕೆ ಬಸ್ಸಿನ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ”
“ತಾಲೂಕು ಕೇಂದ್ರದ ಕೊನೆಯ ಹಳ್ಳಿ ಮಿರಗಿ ಗ್ರಾಮಕ್ಕೆ ಬಸ್ಸಿನ ಸೌಕರ್ಯ ಕಲ್ಪಿಸಬೇಕು. ಬಸ್ಸಿನ ಅನಾನುಕೂಲತೆಯಿಂದ ಶಾಲಾ,ಕಾಲೇಜು ವಿದ್ಯಾರ್ಥಿಗಳು ಗೂಡ್ಸ ವಾಹನದಲ್ಲಿ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಕಾಲೇಜಿನಿಂದ ಮರಳಿ ಕಾಲ್ನಡಿಗೆಯಿಂದ ಗ್ರಾಮಕ್ಕೆ ಬರುತ್ತಿದ್ದಾರೆ. ಮಿರಗಿ ಗ್ರಾಮದಿಂದ ಸುಮಾರು ೨೦ ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುತ್ತಿರುವುದರಿಂದ ಪ್ರತಿನಿತ್ಯ ನಡೆದುಕೊಂಡು ಬರುತ್ತಿದ್ದಾರೆ.ಗ್ರಾಮಕ್ಕೆ ಬಸ್ಸಿನ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಶಾಸಕರ ಗಮನಕ್ಕೆ ತಂದಾಗ,ಸಾರಿಗೆ ಘಟಕದ ಅಧಿಕಾರಿಗಳಿಗೆ ಕರೆ ಮಾಡಿ ಗ್ರಾಮಕ್ಕೆ ಬಸ್ ಸರಿಯಾಗಿ ಓಡಿಸಿ ಎಂದು ತಾಕೀತು ಮಾಡಿದರು ಬಸ್ ಓಡಿಸುತ್ತಿಲ್ಲ. ಅಲ್ಲದೆ ಇಂಡಿ ಸಾರಿಗೆ ಘಟಕದ ಅಽಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ.ಆದರೆ ಅವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.ಅಧಿಕಾರದ ದರ್ಪ ತೊರಿಸುತ್ತಿದ್ದಾರೆ. ಯಾರಿಗೆ ಹೇಳತ್ತೀರಿ ಹೇಳರಿ,ಯಾರೂ ನನಗೆ ಏನು ಮಾಡುವುದು ಆಗುವುದಿಲ್ಲ ಎಂದು ಹೆದರಿಸಿ ಕಳುಹಿಸುತ್ತಿದ್ದಾರೆ. ನಮ್ಮ ಗ್ರಾಮದ ಬಸ್ಸಿನ ಗೋಳು ಯಾರ ಮುಂದೆ ತೊಡಬೇಕು ಎಂದು ತಿಳಿಯದಾಗಿದೆ.ಮಲ್ಲಿಕಾರ್ಜುನ ಚಾಕುಂಡಿ,ರವಿ ಆಲಮೇಲ,ಮಿರಗಿ ಗ್ರಾಮಸ್ಥರು”