Breaking News

ಹೊರರಾಜ್ಯಗಳಲ್ಲಿಯ ನಮ್ಮ ಕರುಳುಬಳ್ಳಿಗಳು ಒಂದೆಡೆ ಸೇರಿದ ಅಪರೂಪದ ಕ್ಷಣಗಳು

Spread the love

ಹೊರರಾಜ್ಯಗಳಲ್ಲಿಯ ನಮ್ಮ ಕರುಳುಬಳ್ಳಿಗಳು ಒಂದೆಡೆ ಸೇರಿದ ಅಪರೂಪದ ಕ್ಷಣ

ಯುವ ಭಾರತ ಸು ಬೆಂಗಳೂರು :  ನಿನ್ನೆ ಜನೇವರಿ 25,2023 ರಂದು ಬೆಂಗಳೂರಿನಲ್ಲಿ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸೇರಿದ್ದ ನೆರೆಯ ಆರು ರಾಜ್ಯಗಳ ಕನ್ನಡದ

ಪ್ರಮುಖರ ಸಭೆಯು ನಿಜಕ್ಕೂ ಅತ್ಯಂತ ಅಪರೂಪದ ಸಭೆ. ಬಹುಶಃ ಹಿಂದೆ ಯಾವಾಗಲೂ ಇಂಥ ಸಭೆ ನಡೆದಿರಲಿಲ್ಲ. ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರು ಕಳೆದ ವರ್ಷದ ಡಿಸೆಂಬರ್ 27 ರಂದು ಬೆಳಗಾವಿಯಲ್ಲಿ ಜತ್ತ ಕನ್ನಡಿಗರ ನಿಯೋಗ ಭೆಟ್ಟಿಯಾದ ಸಂದರ್ಭದಲ್ಲಿ ನೀಡಿದ ಸೂಚನೆಯ ಮೇರೆಗೆ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರು ನಿನ್ನೆಯ ಸಭೆಯನ್ನು ಆಯೋಜಿಸಿದ್ದರು. ಪ್ರಾಧಿಕಾರದ ಕಾರ್ಯದರ್ಶಿ ಮತ್ತಿಹಳ್ಳಿ ನಾಗರಾಜ ಅವರು ವಹಿಸಿದ ವಿಶೇಷ ಆಸಕ್ತಿ ಮತ್ತು ಕಾಳಜಿಯಿಂದಾಗಿ ಈ ಸಭೆಯು ಅರ್ಥಪೂರ್ಣವಾಗಿತ್ತು.

ಕಳೆದ ನವೆಂಬರ್ ತಿಂಗಳಲ್ಲಿ ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದ ತಾರಕಕ್ಕೇರಿದಾಗ ಜತ್ತ ಬಗ್ಗೆ ಬೊಮ್ಮಾಯಿ ಅವರು ನೀಡಿದ ಹೇಳಿಕೆಯಿಂದಾಗಿ ಜತ್ತ ಮತ್ತು ಅಕ್ಕಲಕೋಟೆಯ ಕನ್ನಡಿಗರಲ್ಲಿ ಸಂಭ್ರಮದ ವಾತಾವರಣ ಉಂಟಾಯಿತು. ಕೊನೆಗೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಜತ್ತ ಕನ್ನಡಿಗರ ಸಮಸ್ಯೆಗಳ ಬಗ್ಗೆ ಬೊಮ್ಮಾಯಿ ಅವರ ಗಮನ ಸೆಳೆಯುತ್ತಲೇ ಬಂದಿತು. ಡಿಸೆಂಬರ್ 27 ರಂದು ಜತ್ತ ಕನ್ನಡಿಗರ ನಿಯೋಗ ಬೆಳಗಾವಿಗೆ ಬಂದು ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದಲ್ಲಿ ಭೆಟ್ಟಿಯಾಯಿತು. ಹೊರನಾಡ ಕನ್ನಡಿಗರಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಐದು ಪ್ರತಿಶತ ಮೀಸಲಾತಿ ನೀಡುವದನ್ನು ಒಳಗೊಂಡು ಇತರ ಬೇಡಿಕೆಗಳ ಸಂಬಂಧ ಪ್ರಾಧಿಕಾರದ ಅಧ್ಯಕ್ಷರು ಸಭೆ ನಡೆಸಬೇಕೆಂದು ಸೂಚಿಸಿದರು.

ಈ ಹಿನ್ನೆಲೆಯಲ್ಲಿ ನಿನ್ನೆ ಮಹಾರಾಷ್ಟ್ರ, ಗೋವೆ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಗೋವೆಯ ಕನ್ನಡದ ಪ್ರಮುಖರು ಬೆಂಗಳೂರಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸಿದ್ದರು.

ಒಂದೊಂದು ರಾಜ್ಯದವರದ್ದು ಒಂದೊಂದು ಸಮಸ್ಯೆ. ಅಲ್ಲಿಯ ಸರಕಾರಗಳು ಅಲ್ಲಿಯ ಕನ್ನಡಿಗರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಿವೆ. ಕನ್ನಡಿಗರನ್ನು, ಕನ್ನಡ ಶಾಲೆಗಳನ್ನು, ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳನ್ನು ಹತ್ತಿಕ್ಕುತ್ತಿವೆ. ಕನ್ನಡ ಭವನ ನಿರ್ಮಿಸಲು ಅಡ್ಡಗಾಲು ಹಾಕುತ್ತಿವೆ. ಇವೆಲ್ಲ ಸಮಸ್ಯೆಗಳಿದ್ದರೂ ನಮ್ಮವರು ಅಲ್ಲಿ ಕನ್ನಡಿಗರಾಗಿ ಬದುಕುವ ಛಲ ಬಿಟ್ಟಿಲ್ಲ. ಕನ್ನಡ ಸಂಘಟನೆಗಳನ್ನು
ಕಟ್ಟಿಕೊಂಡಿದ್ದಾರೆ. ಕರ್ನಾಟಕ ಸರಕಾರ ಅವರ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದಿದ್ದರೂ ಅಲ್ಲಿಯ ಕನ್ನಡಿಗರು ನಮ್ಮ ಸರಕಾರದತ್ತ ಆಶಾಮನೋಭಾವವನ್ನೇ ಹೊಂದಿದ್ದಾರೆ.

ರಾಜ್ಯ ಪುನರ್ ವಿಂಗಡಣೆಯ ಕಾಲಕ್ಕೆ ಆಂಧ್ರದಲ್ಲಿಯೇ ಉಳಿದುಹೋದ ಅಚ್ಚ ಕನ್ನಡ ಪ್ರದೇಶಗಳಾದ ಆದೋನಿ, ರಾಯದುರ್ಗ,ಆಲೂರು ಮತ್ತು
ಮಡಕಶಿರಾ, ಕೇರಳದ ಕಾಸರಗೋಡು, ಮಹಾರಾಷ್ಟ್ರದ ಜತ್ತ,ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಮತ್ತು ತಮಿಳುನಾಡು, ಗೋವೆಯ ಕನ್ನಡ ಪ್ರಮುಖರು ತಮ್ಮ
ಸಮಸ್ಯೆಗಳನ್ನು ಭಾವಾವೇಶದಿಂದ ಹೇಳಿಕೊಳ್ಳುವಾಗ ಕರುಳು ಚುರುಕ್ ಎಂದಿತು. ಅವರ ಕಣ್ಣುಗಳೇ ಅಲ್ಲಿಯ ಕತೆಗಳನ್ನು ಹೇಳುತ್ತಿದ್ದವು. ಅವರು ಆಡಿದ ಶಬ್ದಗಳು ಅವರ ದುಸ್ಥಿತಿಯನ್ನು ಬಿಂಬಿಸುತ್ತಿದ್ದವು ! ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ ಅವರು ಎಲ್ಲವನ್ನು ಶಾಂತ ರೀತಿಯಿಂದ ಆಲಿಸಿದರು. ರಾಜ್ಯ ಸರಕಾರ, ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡುವ ಭರವಸೆಯನ್ನೂ ನೀಡಿದರು. ಈವರೆಗೂ ಇಂಥ ಸಭೆಯೇ ನಡೆದಿರಲಿಲ್ಲ.ಕನಿಷ್ಠ ಸಭೆ ಕರೆದು ಕೇಳಿದ್ದೇ ಆರು ರಾಜ್ಯಗಳ ಕನ್ನಡಿಗರಿಗೆ ಸಮಾಧಾನ ತಂದಿತ್ತು.

ಈ ಆರು ರಾಜ್ಯಗಳಲ್ಲಿ ಕನ್ನಡದಲ್ಲಿ ಓದಿದ ಮಕ್ಕಳಿಗೆ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಐದು ಪ್ರತಿಶತ ಮೀಸಲಾತಿ ಕಲ್ಪಿಸುವ ಸಂಬಂಧ ಮತ್ತಿತರ ಸಮಸ್ಯೆಗಳತ್ತ ಗಮನ ಸೆಳೆಯಲು ಶೀಘ್ರವೇ ಮುಖ್ಯಮಂತ್ರಿಗಳನ್ನು ಭೆಟ್ಟಿಯಾಗಿ ವರದಿ ಸಲ್ಲಿಸಲು ನಿನ್ನೆಯ ಸಭೆಯು ನಿರ್ಧರಿಸಿದೆ. ಅಲ್ಲದೇ ಕೇರಳ ಮತ್ತು ಆಂಧ್ರಪ್ರದೇಶ, ತೆಲಂಗಾಣಗಳ ಗಡಿಯಲ್ಲಿನ
ಜಿಲ್ಲಾಧಿಕಾರಿಗಳು ಹಾಗೂ ಬಳ್ಳಾರಿ, ರಾಯಚೂರು ಜಿಲ್ಲಾಧಿಕಾರಿಗಳು, ಮತ್ತಿತರ ಜಿಲ್ಲಾಧಿಕಾರಿಗಳ ಜಂಟಿ ಸಭೆ ನಡೆಸಲು ನಿರ್ಣಯಿಸಲಾಗಿದೆ.

ನಿನ್ನೆಯ ಸಭೆಯು ಹೊರನಾಡ ಕನ್ನಡಿಗರ ಹಿತಾಸಕ್ತಿ ಕಾಪಾಡುವತ್ತ ಮೊದಲ ಹೆಜ್ಜೆಯಾಗಿದೆ. ಪ್ರತಿ ಮೂರು
ತಿಂಗಳಿಗೊಮ್ಮೆ ಈ ಆರು ರಾಜ್ಯಗಳ ಬೇರೆ ಬೇರೆ ಸ್ಥಳಗಳಲ್ಲಿ ಆರೂ ರಾಜ್ಯಗಳ ಕನ್ನಡ ಪ್ರಮುಖರ ಸಭೆ ಆಯೋಜಿಸಲೂ ಸಹ ಸಭೆಯಲ್ಲಿ ಒಮ್ಮತದ ತೀರ್ಮಾನ
ಆಗಿದೆ.

(ಅಶೋಕ ಚಂದರಗಿ ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ)


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

one + 15 =