ನಾಗಪುರದಿಂದ ಯಾರೇ ಬರಲಿ ನನ್ನನ್ನು ಸೋಲಿಸಲಾಗದು : ರಾಹುಲ್ ಗಾಂಧಿಯವರನ್ನು ಸ್ವಾಗತಿಸಿಕೊಂಡ ನಂತರ ಶೆಟ್ಟರ್ ನುಡಿ
ಯುವ ಭಾರತ ಸುದ್ದಿ ಹುಬ್ಬಳ್ಳಿ:
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಅವರನ್ನು ಇತ್ತೀಚಿಗಷ್ಟೇ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸ್ವಾಗತಿಸಿಕೊಂಡು ಗಮನ ಸೆಳೆದರು.
ಹುಬ್ಬಳ್ಳಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಅವರನ್ನು ಶೆಟ್ಟರ್ ಬರಮಾಡಿಕೊಂಡು ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಲಿರುವ ಲಾಭಗಳ ಬಗ್ಗೆ ಮನವರಿಕೆ ಮಾಡಿದರು.
ನಾಗಪುರದಿಂದ ಯಾರೇ ಬರಲಿ :
ನಾಗಪುರದಿಂದ ಯಾರೇ ಬಂದರೂ, ನನ್ನ ವಿರುದ್ಧ ಕೆಲಸ ಮಾಡಿದರೂ ಪ್ರಯೋಜವಾಗುವುದಿಲ್ಲ. ಅವರಿಗೆ ಸ್ಥಳೀಯವಾಗಿ ಯಾವ ಜ್ಞಾನವೂ ಇರುವುದಿಲ್ಲ. ಅವರು ಇಲ್ಲಿನ ಸ್ಥಿತಿ ಅಧ್ಯಯನ ಮಾಡುವ ಹೊತ್ತಿಗೆ ಚುನಾವಣೆಯೇ ಮುಗಿದಿರುತ್ತದೆ ಎಂದು ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಪ್ರತಿಕ್ರಿಯೆ ನೀಡಿದರು.
ನಗರದ ವಿಮಾನ ನಿಲ್ದಾಣದಲ್ಲಿ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾಗಪುರದವರು ಅಭ್ಯರ್ಥಿಯ ಮೇಲೆ ನಿಗಾ ಇಟ್ಟು ಚುನಾವಣೆ ಮಾಡುವುದಾದರೆ ಮಹಾರಾಷ್ಟ್ರದಲ್ಲಿ ನಡೆದ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋಲು ಅನುಭವಿಸಿತು? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ-ಧಾರವಾಡ ಕೇಂದ್ರ ಮತ ಕ್ಷೇತ್ರದ ಜನರ ಪ್ರೀತಿ-ವಿಶ್ವಾಸ ಹಾಗೂ ಕಾಂಗ್ರೆಸ್ ಪಕ್ಷದ ಶಕ್ತಿ ನನ್ನೊಂದಿಗೆ ಇರುವವರೆಗೆ ಯಾರು ಏನೂ ಮಾಡಲಾಗದು. ನನ್ನ ಮೇಲೆ ನಿಗಾ ಇಡಲು, ನಾನ್ಯಾವ ಕಾನೂನುಬಾಹಿರ ಚಲನವಲನಗಳನ್ನು ಹೊಂದಿಲ್ಲ ಎಂದರು.
ಚುನಾವಣೆಯಲ್ಲಿ ಅಭ್ಯರ್ಥಿಗಳ ಕುರಿತು ಪಾಸಿಟಿವ್ ಮತ್ತು ನೆಗೆಟಿವ್ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವುದು ಸಾಮಾನ್ಯ. ಇಂತಹದ್ದನ್ನು ನನ್ನ ಜೀವನದಲ್ಲಿ ತುಂಬಾ ನೋಡಿದ್ದೇನೆ. ಈಗ ನನ್ನ ವಿರುದ್ಧವೂ ಮಾಡಲಾಗುತ್ತಿದೆ. ಮನೆಯಲ್ಲಿ ಕುಳಿತು ಮಾಡುವ ಈ ಕೆಲಸದಿಂದ ಯಾವ ಪರಿಣಾಮವೂ ಬೀರದು. ಜನರ ಮಧ್ಯೆ ಹೋಗಿ ಕೆಲಸ ಮಾಡಿದ್ದು ಮಾತ್ರ ಪ್ರಭಾವ ಬೀರುತ್ತದೆ ಎಂದು ಹೇಳಿದರು.