Breaking News

ಅಸ್ತಿತ್ವಕ್ಕೆ ಬರಲಿದೆಯೇ ಇನ್ನೊಂದು ಹೊಸ ಪಕ್ಷ ?

Spread the love

ಅಸ್ತಿತ್ವಕ್ಕೆ ಬರಲಿದೆಯೇ ಇನ್ನೊಂದು ಹೊಸ ಪಕ್ಷ ?

ದೆಹಲಿ:
ರಾಜಸ್ಥಾನ ಕಾಂಗ್ರೆಸ್‌ನ ಭಿನ್ನಮತೀಯ ನಾಯಕ ಸಚಿನ್‌ ಪೈಲಟ್‌ ಅವರು ತಮ್ಮ ತಂದೆ ರಾಜೇಶ್‌ ಪೈಲಟ್‌ ಅವರ ಪುಣ್ಯಸ್ಮರಣೆ ದಿನವಾದ ಜೂನ್‌ 11ರಂದು ಹೊಸ ಪಕ್ಷ ಪ್ರಗತಿಶೀಲ ಕಾಂಗ್ರೆಸ್‌ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪೈಲಟ್‌ ಹೊಸ ಪಕ್ಷ ಸ್ಥಾಪನೆಗೆ ಚುನಾವಣಾ ನೀತಿ ತಜ್ಞ ಪ್ರಶಾಂತ್‌ ಕಿಶೋರ್‌ ಅವರ ರಾಜಕೀಯ ಸಲಹಾ ಸಂಸ್ಥೆ ಇಂಡಿಯನ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ (ಐಪಿಎಸಿ) ನೆರವಾಗುತ್ತಿದೆ. ರಾಜಸ್ಥಾನದಲ್ಲಿ ತೃತೀಯ ರಂಗ ರಚನೆಗೆ ಹನುಮಾನ್‌ ಬೆನಿವಾಲ್‌ ಅವರ ರಾಷ್ಟ್ರೀಯ ಲೋಕತಾಂತ್ರಿಕ್‌ ಪಾರ್ಟಿ (ಆರ್‌ಎಲ್‌ಪಿ) ಮತ್ತು ಆಮ್‌ ಆದ್ಮಿ ಪಕ್ಷದ (ಎಎಪಿ) ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಪೈಲಟ್‌ ಕಾಂಗ್ರೆಸ್‌ನಿಂದ ಹೊರ ನಡೆದರೆ ಅವರೊಂದಿಗೆ ಎಷ್ಟು ಶಾಸಕರು ಹೆಜ್ಜೆ ಇಡಲಿದ್ದಾರೆ ಎಂಬುದನ್ನು ಹಾಗೂ ಇದರಿಂದ ರಾಜ್ಯ ಸರ್ಕಾರಕ್ಕೆ ತೊಂದರೆಯಾಗಲಿದೆಯೇ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.

ಭ್ರಷ್ಟಾಚಾರ ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ, ಏಪ್ರಿಲ್‌ 11 ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದ ಪೈಲಟ್‌, ಮೇ 11 ರಂದು ಐದು ದಿನಗಳ ಪಾದಯಾತ್ರೆ ನಡೆಸಿದ್ದರು. ಹೀಗಾಗಿ, ಜೂನ್‌ 11 ರಂದು ಹೊಸ ಪಕ್ಷ ಘೋಷಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಪೈಲಟ್‌ ಅವರು, ಸಿಎಂ ಅಶೋಕ್‌ ಗೆಹಲೋತ್ ಅವರೊಂದಿಗೆ ಹಲವು ವರ್ಷಗಳಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಈ ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್‌ ಗಾಂಧಿ ಮೇ 29 ರಂದು ಗೆಹಲೋತ್ ಮತ್ತು ಪೈಲಟ್‌ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಬಳಿಕ, ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಉಭಯ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ ಎಂದು ಪಕ್ಷ ಘೋಷಿಸಿತ್ತು.

ಆದರೆ, ಮರುದಿನ ಮಾತನಾಡಿದ್ದ ಪೈಲಟ್‌, ಬಿಜೆಪಿ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರ ರಾಜೇ ವಿರುದ್ಧದ ಭ್ರಷ್ಟಾಚಾರ ಆರೋಪ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ತನಿಖೆಗಾಗಿನ ತಮ್ಮ ಬೇಡಿಕೆಗಳಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದರು. ಆ ಮೂಲಕ, ಗೆಹಲೋತ್‌ ಜೊತೆ ಹೊಂದಾಣಿಕೆ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಪೈಲಟ್‌ ಕಾಂಗ್ರೆಸ್‌ ಬಿಡುವುದು ಖಚಿತವಾದರೆ, ಗುಲಾಂ ನಬಿ ಆಜಾದ್‌, ಜ್ಯೋತಿರಾದಿತ್ಯ ಸಿಂದಿಯಾ, ಕಪಿಲ್‌ ಸಿಬಲ್‌, ಜಿತೇಂದ್ರ ಪ್ರಸಾದ್, ಆರ್‌ಪಿಎನ್‌ ಸಿಂಗ್‌, ಸುನಿಲ್‌ ಝಾಖರ್‌, ಅಶ್ವಿನಿ ಕುಮಾರ್‌, ಹಾರ್ದಿಕ್‌ ಪಟೇಲ್ ಮತ್ತು ಅಲ್ಪೇಶ್‌ ಠಾಕೂರ್‌ ಅವರಂಥ ಪ್ರಮುಖ ನಾಯಕರ ಸಾಲಿಗೆ ಸೇರಲಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

2 − two =