ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್-ರಮೇಶ ಜಾರಕಿಹೊಳಿ.!
ಗೋಕಾಕ: ಕೋವಿಡ್ ಮಹಾಮಾರಿಯ ಬಳಿಕ ಚೇತರಿಸಿಕೊಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್‌ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರದಂದು ಮಂಡಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಕಳೆದ ಸಾಲಿನ ಬಜೆಟ್‌ಗಿಂತ ಶೇ೭.೭ರಷ್ಟು ಹೆಚ್ಚು ಪ್ರಮಾಣದ ಬಜೆಟ್ ಹೆಚ್ಚಿಸಿದ್ದು, ಶಿಕ್ಷಣ- ಉದ್ಯೋಗ-ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸಲು ಆದ್ಯತೆ ಮತ್ತು ವಿಶೇಷ ಉಪಕ್ರಮಗಳಿರುವ ಆಯವ್ಯಯ ಪತ್ರ ಇದಾಗಿದ್ದು, ರೈತ ಶಕ್ತಿ ಹೊಸ ಯೋಜನೆ ಪ್ರಕಟಿಸಲಾಗಿದೆ.
ಸಮಗ್ರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ದುರ್ಬಲ ವರ್ಗದ ರಕ್ಷಣೆ ಮತ್ತು ಏಳಿಗೆ ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕವಾಗಿ ಗುರುತಿಸಿ ಅಭಿವೃದ್ಧಿಗೆ ಸಂಘಟಿತ ಕಾರ್ಯಕ್ರಮ, ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯ ಪಾಲುದಾರಿಕೆಯೊಂದಿಗೆ ಅಭಿವೃದ್ಧಿ, ನವಭಾರತಕ್ಕಾಗಿ ನವ ಕರ್ನಾಟಕ ಹೊಸ ಚಿಂತನೆ, ಹೊಸ ಚೈತನ್ಯದ ಜೊತೆಗೆ ಹೊಸ ಮುನ್ನೋಟಕ್ಕೆ ಒತ್ತು ನೀಡಲಾಗಿದೆ. ಒಟ್ಟರೆಯಾಗಿ ಇಂದು ಮಂಡನೆಯಾದ ಬಜೆಟ್ ಶ್ರೀ ಸಾಮಾನ್ಯರ ಪರವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.