ಮೊದಲ ದಿನವೇ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ ನಾಮಪತ್ರ ಸಲ್ಲಿಕೆ.
ಗೋಕಾಕ: ಗೋಕಾಕ ವಿಧಾನಸಭಾ ಮತಕ್ಷೇತ್ರದಿಂದ ೭ನೇ ಬಾರಿ ಆಯ್ಕೆ ಬಯಸಿ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೋಳಿ ಅವರು ಮೊದಲ ದಿನವೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಗುರುವಾರದಂದು ನಗರ ತಾಲೂಕಾಡಳಿತ ಸೌಧ(ತಹಶೀಲ್ದಾರ ಕಾರ್ಯಾಲಯ)ಕ್ಕೆ ತೆರಳಿ ಗೋಕಾಕ ಮತಕ್ಷೇತ್ರದ ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
೧೯೮೫ರಿಂದ ಈ ವರೆಗೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ರಮೇಶ ಜಾರಕಿಹೊಳಿ ಅವರು ಎರಡನೇ ಬಾರಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಪ್ರವೇಶಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಶಾಸಕರ ಆಪ್ತಸಹಾಯಕ ಭೀಮಗೌಡ ಪೋಲಿಸಗೌಡ್ರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಕಾಂತು ಎತ್ತಿನಮನಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಚಿದಾನಂದ ದೇಮಶೆಟ್ಟಿ, ಭರಮಪ್ಪ ತೋಳಿ ಸೇರಿದಂತೆ ಅನೇಕರು ಇದ್ದರು.