ಗುತ್ತಿಗೇದಾರನ ಮನೆ ಕಳ್ಳತನ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ.!
ಗೋಕಾಕ: ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಹಾಡು ಹಗಲೇ ಮನೆಯ ಕಿಟಕಿ ಮುರಿದು ಅಪಾರ ಪ್ರಮಾಣದ ಹಣ, ಬಂಗಾರ ಮತ್ತು ಬೆಳ್ಳಿ ಆಭರಣ ಕಳುವಾದ ಘಟನೆ ಶುಕ್ರವಾರದಂದು ಸಂಜೆ ನಗರದಲ್ಲಿ ಜರುಗಿದೆ.
ನಗರದ ಬಸವೇಶ್ವರ ಐಟಿಐ ಕಾಲೇಜು ಪಕ್ಕದ ನಿವಾಸಿ, ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ತೊಳಿನವರ ಅವರÀ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಮನೆಯಲ್ಲಿದ್ದ ೩೦ ಲಕ್ಷ ರೂಪಾಯಿ ನಗದು, ೧೩೧ ತೊಲೆಯ ಬಂಗಾರದ ಆಭರಣ ಹಾಗೂ ೧೦.ಕೆಜಿ ತೂಕದ ಬೆಳ್ಳಿ ಆಭರಣ ಮತ್ತು ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಗುತ್ತಿಗೇದಾರ ಪ್ರಕಾಶ ತೊಳಿನವರ ಕುಟುಂಬ ಶುಕ್ರವಾರದಂದು ಮಗಳನ್ನು ಭೇಟಿ ಮಾಡಲು ಬದಾಮಿಗೆ ಪ್ರಯಾಣ ಕೈಗೊಂಡಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಕಳ್ಳರು ಕಿಟಕಿಯ ಸಲಾಕೆಗಳನ್ನು ಮುರಿದು ಹಣ, ಆಭರಣ ಕಳ್ಳತನ ಮಾಡಿದ್ದಾರೆ. ಹಾಡು ಹಗಲೇ ಕಳ್ಳತನ ನಡೆದಿದ್ದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗೋಕಾಕ ಶಹರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿವೈಎಸ್‌ಪಿ ಮನೋಜಕುಮಾರ ನಾಯ್ಕ, ಸಿಪಿಐ ಗೋಪಾಲ ರಾಠೋಡ, ಶಹರ ಠಾಣೆ ಪಿಎಸ್‌ಐ ಎಮ್ ಡಿ ಘೋರಿ ಹಾಗೂ ಸಿಬ್ಬಂಧಿ ಇದ್ದರು.
ಬಾಕ್ಸ್: ಗುತ್ತಿಗೇದಾರ ಪ್ರಕಾಶ ತೋಳಿನವರ ಮನೆಯಲ್ಲಿ ಹಣ, ಬಂಗಾರ ಆಭರಣ, ಬೆಳ್ಳಿ ಜೊತೆಗೆ ವಿದೇಶಿ ಕರೇನ್ಸಿಯೂ ಕಳ್ಳತನವಾಗಿದ್ದು, ಮಲೇಷಿಯಾ ಹಾಗೂ ಅಮೇರಿಕಾ ಡಾಲರ್ ವಿದೇಶಿ ಕರೇನ್ಸಿಯನ್ನು ಮನೆಯಲ್ಲಿ ಇಡಲಾಗಿದ್ದು ಅವುಗಳು ಸಹ ಕಳುವಾಗಿರುವದಾಗಿ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ ಅವರಲ್ಲಿ ಗುತ್ತಿಗೇದಾರ ಪ್ರಕಾಶ ಅಳಲು ತೋಡಿಕೊಂಡಿದ್ದು, ಸ್ಥಳದಲ್ಲೆ ಇದ್ದು ಈ ಪ್ರಕರಣ ಭೇದಿಸಿ ತಮ್ಮ ವಸ್ತು ಮರಳಿಸುವದಾಗಿ ಪೋಲಿಸ್ ಅಧಿಕಾರಿ ತಿಳಿಸಿದರು.