ಆಂತರಿಕ ಸಮೀಕ್ಷೆಯಲ್ಲೂ ಸುಧೀರ ಗಡ್ಡೆ ಮುಂದು !
ಯುವ ಭಾರತ ಸುದ್ದಿ ಬೆಳಗಾವಿ:
ಧರ್ಮ, ಜಾತಿ ಮೀರಿ ಎಲ್ಲ ಸಮಾಜದ ಜನರ ಏಳ್ಗೆಗೆ ಶ್ರಮಿಸುತ್ತಿರುವ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ ಸುಧೀರ ಗಡ್ಡೆ ಅವರು ಉತ್ತರ ಮತಕ್ಷೇತ್ರಕ್ಕೆ ಹೇಳಿ ಮಾಡಿಸಿದ ಅಭ್ಯರ್ಥಿ ಆಗಿದ್ದು ದಿನದಿಂದ ದಿನಕ್ಕೆ ಜನಾಭಿಪ್ರಾಯ ಅಧಿಕವಾಗುತ್ತಿರುವುದು ಕಂಡು ಬರುತ್ತಿದೆ.
ಕಾಂಗ್ರೆಸ್ ನಲ್ಲಿ ಅನೇಕ ಆಕಾಂಕ್ಷಿಗಳು ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ. ರಾಜ್ಯ ರಾಜಕಾರಣದಿಂದ ಹೈಕಮಾಂಡ್ ವರೆಗೂ ತಮ್ಮದೇ ಆದ ವರ್ಚಸ್ಸು ತೋರಿಸುತ್ತಿದ್ದಾರೆ. ಆದರೆ ಹೈಕಮಾಂಡ್ ಅಂಡರ್ ಗ್ರೌಂಡ್ ಸರ್ವೇ ನಡೆಸುತ್ತಿದ್ದು, ಜನಬೆಂಬಲ ಇರುವ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದೆ. ಇದರಲ್ಲಿ ಪ್ರಮುಖವಾಗಿ ಸುಧೀರ ಗಡ್ಡೆ ಹೆಸರು ಕೇಳಿ ಬರುತ್ತಿದೆ. ನಂತರದಲ್ಲಿ ಫಿರೋಜ ಸೇಠ ಹಾಗೂ ಅಜೀಮ್ ಪಟವೇಗಾರ ಹೆಸರೂ ಹರಿದಾಡುತ್ತಿವೆ.
ಫೀರೋಜ್ ಸೇಠ ಅಥವಾ ಅಜೀಮ್ ಪಟವೇಗಾರಗೆ ಟಿಕೆಟ್ ನೀಡಿದರೆ ಒಂದೇ ಸಮುದಾಯದ ಮತಗಳು ಕಾಂಗ್ರೆಸ್ ಗೆ ಸಿಗಬಹುದು. ಬೇರೆ ಜಾತಿಯ ಮತಗಳು ಕಾಂಗ್ರೆಸ್ ನಿಂದ ಕೈ ತಪ್ಪುವ ಆತಂಕ ಇದೆ. ಇದರ ಲಾಭ ಬಿಜೆಪಿ ಸುಲಭವಾಗಿ ಪಡೆದುಕೊಳ್ಳುತ್ತದೆ. ಆದ್ದರಿಂದ ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಮುಸ್ಲಿಂ ಹೊರತುಪಡಿಸಿ ಬೇರೆ ಸಮಾಜದ ವ್ಯಕ್ತಿಗೆ ಟಿಕೆಟ್ ಕೊಟ್ಟು ಎಲ್ಲ ವರ್ಗದ ಮತದಾರರನ್ನು ಸೆಳೆಯುವ ಲೆಕ್ಕಾಚಾರ ಕಾಂಗ್ರೆಸ್ ವರಿಷ್ಠರದ್ದಾಗಿದೆ.
ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಸೂಕ್ತ ಅಭ್ಯರ್ಥಿ ಬೇಕೆಂಬ ಅಂತಿಮ ತೀರ್ಮಾನಕ್ಕೆ ಕಾಂಗ್ರೆಸ್ ವರಿಷ್ಠರು ಬಂದಿದ್ದು, ಹೀಗಾಗಿ ಮರಾಠಾ, ಲಿಂಗಾಯತ, ಮುಸ್ಲಿಂ, ಎಸ್ ಸಿ, ಎಸ್ಟಿ ಸಮಾಜದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಅಭ್ಯರ್ಥಿಯ ಶೋಧ ನಡೆಸುತ್ತಿದ್ದಾರೆ. ಇದರಲ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧೀರ ಗಡ್ಡೆ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಕ್ಷೇತ್ರದ ತುಂಬೆಲ್ಲ ಆಂತರಿಕ ಸರ್ವೇ ನಡೆಸಿದಾಗ ಸುಧೀರ ಗಡ್ಡೆ ಅಭ್ಯರ್ಥಿ ಆಗಲಿ ಎಂಬ ಮಾಹಿತಿ ಸಿಕ್ಕಿದೆ.