ಸಂವಿಧಾನ ಕೇವಲ ಕಾನೂನು ತಜ್ಞರ ಪುಸ್ತಕವಲ್ಲ- ನ್ಯಾಯಮೂರ್ತಿ ಅನಿಲ್ ಕತ್ತಿ
ಯುವ ಭಾರತ ಸುದ್ದಿ ಬೆಳಗಾವಿ:
ಕಾನೂನನ್ನು ನೋಡುವ ದೃಷ್ಟಿಕೋನ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲಿದೆ, ಹಾಗಾಗಿ ಸಮಾಜ ಸೇವೆ ಮಾಡಬಯಸುವವನು ಮಾತ್ರ ಕಾನೂನು ಅರಿವು ಮೂಡಿಸಬಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅನಿಲ್ ಕಟ್ಟಿ ಹೇಳಿದರು.
ನಗರದ ಕೆ ಎಲ್ ಎಸ್ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಸಂವಿಧಾನ ಕೇವಲ ಆರೋಪಿಗಷ್ಟೇ ಅಲ್ಲ, ಅಪರಾಧಿಗೂ ಅವರದೇ ಆದ ಹಕ್ಕುಗಳನ್ನು ನೀಡಿದೆ. ಸಂವಿಧಾನ ನೀಡಿರುವ ಹಕ್ಕುಗಳಿಗೆ ಚ್ಯುತಿ ಬಂದಾಗ ಹೈಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆಯಿರಿ. ಸಂವಿಧಾನದ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸಿ, ಸಂವಿಧಾನದ ಪೀಠಿಕೆ ಆಶಯ ಮೂಲಧ್ಯೇಯವಾಗಿರಲಿ ಎಂದು ಹೇಳಿದರು.
ಗೌರವ ಅತಿಥಿಯಾಗಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಪ್ರೊ. ಸಿ.ಎಸ್.ಪಾಟೀಲ ಮಾತನಾಡಿ, ಸರ್ಕಾರದ ವಿರುದ್ಧ ಸೆಟೆದು ನಿಲ್ಲಬಲ್ಲ ಏಕೈಕ ವೃತ್ತಿಯೆಂದರೆ ಅದು ವಕೀಲಿಕೆ. ವಕೀಲರು ನ್ಯಾಯಾಂಗದ ಸ್ವಾಯತ್ತತೆಯನ್ನು, ಕಾನೂನನ್ನು ಹಾಗೂ ಸಂವಿಧಾನವನ್ನು ರಕ್ಷಿಸುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಎಂ.ಆರ್.ಕುಲಕರ್ಣಿ ಮಾತನಾಡಿ, ವಕೀಲಿ ವೃತ್ತಿ ಸರಳವಲ್ಲ. ಆದರೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದ ಮೂಲಕ ಈ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಹಣ ಮಾಡುವುದು ಮತ್ತು ಬದುಕುವುದು ಮಾತ್ರ ವಕೀಲಿ ವೃತ್ತಿಯ ಉದ್ದೇಶವಲ್ಲ. ಇದರ ಹೊರತಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವ ಗುರುತರ ಹೊಣೆಗಾರಿಕೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮೇಲಿದೆ. ಈ ವೃತ್ತಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದರು.
ಸ್ಪರ್ಧೆಯಲ್ಲಿ ದೇಶದ ವಿವಿಧ ಕಾನೂನು ಕಾಲೇಜುಗಳ 30 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ಭೋಪಾಲ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ತಂಡ ಪ್ರಥಮ ಸ್ಥಾನ ಹಾಗೂ ಉತ್ತಮ ವಾದಪತ್ರ ಪ್ರಶಸ್ತಿ ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದರೆ, ಮುಂಬೈನ ಬಾಬಾ ಸಾಹೇಬ್ ಆಪ್ಟೆ ಕಾಲೇಜು ತಂಡ ಎರಡನೇ ಸ್ಥಾನ ಪಡೆಯುವ ಮೂಲಕ ರನ್ನರ್ ಅಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮಂಗಳೂರಿನ ಎಸ್ ಡಿ ಎಂ ಕಾಲೇಜಿನ ಶ್ರೀಕಂದ್ ಎಂ. ಉತ್ತಮ ವಾದಮಂಡಕ ಹಾಗೂ ತಂಜಾವೂರಿನ ಶಾಸ್ತ್ರ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಬಾನುಶೇಖರ್ ಉತ್ತಮ ವಾದಮಂಡಕಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎ.ಎಚ್. ಹವಾಲ್ದಾರ್, ನಗರದ ಹಿರಿಯ ನ್ಯಾಯವಾದಿ ಎಸ್.ಬಿ. ಶೇಖ್, ಸ್ಪರ್ಧೆಯ ಸಂಯೋಜಕಿ ಅಶ್ವಿನಿ ಪರಬ್, ವಿದ್ಯಾರ್ಥಿ ಪ್ರತಿನಿಧಿಗಳಾದ ಕ್ಷಮಾ ಭಟ್, ತೇಜಸ್ವಿನಿ ಸಂಶೋಳೆ , ಸೌಮ್ಯ ಶೆಟ್ಟಿ, ಹಾಗೂ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.