ಬೆಳಗಾವಿಯಲ್ಲಿ 26, 27 ರಂದು ಸಿರಿಧಾನ್ಯ- ಸಾವಯವ ಮೇಳ
ಯುವ ಭಾರತ ಸುದ್ದಿ ಬೆಳಗಾವಿ :
2023 ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಜ.26 ಹಾಗೂ 27 ರಂದು ಎರಡು ದಿನಗಳ ಕಾಲ ಸಿರಿಧಾನ್ಯ ಮತ್ತು ಸಾವಯುವ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜ.23) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ಆಶ್ರಯದಲ್ಲಿ ಬೆಳಗಾವಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಜ.26 ಹಾಗೂ 27 ರಂದು ಸಿರಿಧಾನ್ಯ ಮೇಳ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಜ.26 ರಂದು ಬೆಳಿಗ್ಗೆ 11 ಗಂಟೆಗೆ ಸಿರಿಧಾನ್ಯ ಹಾಗೂ ಸಾವಯವ ಮೇಳವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅನಿಲ್ ಬೆನಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸುವರು.
ಸಿರಿಧಾನ್ಯ ಕುರಿತು ಜಾಗೃತಿ:
ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆಯಿಂದಾಗಿ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಸಿರಿಧಾನ್ಯಗಳಾದ ನವಣೆ, ಕೊರಲೆ, ಊದಲು, ಹಾರಕ, ಬರಗು, ರಾಗಿ, ಸಜ್ಜೆ ಮತ್ತು ಜೋಳದಿಂದ ತಯಾರಿಸಿದ ಆಹಾರಗಳನ್ನು ಸೇವಿಸಿದಾಗ ಮನುಷ್ಯ ಸದೃಢವಾಗಿ ಸಶಕ್ತವಾಗಿ ಮತ್ತು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.
ಆದ್ದರಿಂದ ಸಿರಿಧಾನ್ಯ ಮತ್ತು ಸಾವಯವ ಆಹಾರ ಧಾನ್ಯಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿ ಜಾಗೃತಿ ಮೂಡಿಸುವ ಉದ್ದೇಶದಿಂದ ಎರಡು ದಿನಗಳ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಿರಿಧಾನ್ಯ ಮೇಳದ ವೈಶಿಷ್ಟ್ಯಗಳು:
ಎರಡು ದಿನಗಳ ಮೇಳದಲ್ಲಿ 75 ರಿಂದ 80 ವಸ್ತುಪ್ರದರ್ಶನ ಮಳಿಗೆಗಳನ್ನು ಹಾಕಲಾಗುವುದು. ಅಲ್ಲಿ ಸಿರಿಧಾನ್ಯ ಮತ್ತು ಸಾವಯವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಉತ್ಪಾದನೆ ಪ್ರದರ್ಶನ ಹಾಗೂ ಮಾರಾಟ; ಸಿರಿಧಾನ್ಯಗಳಿಂದ ತಯಾರಿಸಿದ ಆಹಾರಗಳ ಸ್ಪರ್ಧೆ; ಪಿ.ಎಂ.ಎಫ್.ಎಂ.ಇ. ಯೋಜನೆಯ ಫಲಾನುಭವಿಗಳ ಯಶೋಗಾಥೆಯೊಂದಿಗೆ ಅವರು ತಯಾರಿಸಿದ ಉತ್ಪನ್ನಗಳ ಮಾರಾಟ ಮಳಿಗೆಗಳು ಇರಲಿವೆ.
ಇದಲ್ಲದೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ “ಕೃಷಿ ಜ್ಞಾನ ಭಂಡಾರ” ಎಂಬ ವಿಶೇಷ ಮಳಿಗೆಯನ್ನು ಹಾಕಿ ಅದರಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿಸಿದ ಮಾದರಿಗಳನ್ನು ಬಿತ್ತರಿಸಲಾಗುವುದು.
ಕೃಷಿಯಲ್ಲಿ ಡ್ರೋಣ್ ಬಳಕೆಯ ಪ್ರಾತ್ಯಕ್ಷಿಕೆಯನ್ನು ಕೂಡ ನೀಡಲಾಗುವುದು
ರೈತರಿಗೆ ಸಿರಿಧಾನ್ಯ, ಸಾವಯವ, ಆಹಾರದಲ್ಲಿ ಆರೋಗ್ಯ ಮತ್ತು ಮಣ್ಣಿನ ಆರೋಗ್ಯ ಹಾಗೂ ಇನ್ನಿತರ ವಿಷಯಗಖ ಕುರಿತು ಕೃಷು ವಿಶ್ವವಿದ್ಯಾಲಯ, ಧಾರವಾಡದ ವಿಜ್ಞಾನಿಗಳಿಂದ ಹಾಗೂ ಪ್ರಗತಿಪರ ರೈತರಿಂದ ವಿಷಯ ಮಂಡನೆ ಮತ್ತು ರೈತರೊಂದಿಗೆ ಚರ್ಚಾಗೋಷ್ಠಿ ನಡೆಸಲಾಗುವುದು
ಇದರೊಂದಿಗೆ ಜ.26 ರಂದು ಸಂಜೆ ಸಾಂಸ್ಕೃತಿಕ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಿರಿಧಾನ್ಯ ನಡಿಗೆ ಹಾಗೂ ಸೈಕಲ್ ಜಾಥಾ:
ಮೇಳದ ಅಂಗವಾಗಿ ಮಂಗಳವಾರ (ಜ.24) ಬೆಳಿಗ್ಗೆ 6.30 ಗಂಟೆಗೆ ಚನ್ನಮ್ಮ ವೃತ್ತದಿಂದ “ಸಿರಿಧಾನ್ಯ ನಡಿಗೆ” ಹಮ್ಮಿಕೊಳ್ಳಲಾಗಿದೆ.
ಅದೇ ರೀತಿ ಸಂಜೆ 4 ಗಂಟೆಗೆ ಸೈಕಲ್ ಜಾಥಾ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ವಿದ್ಯಾರ್ಥಿಗಳು, ವೈದ್ಯರು, ನ್ಯಾಯವಾದಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
ಸಿರಿಧಾನ್ಯ ಹಾಗೂ ಸಾವಯವ ಮೇಳದ ಪ್ರಚಾರಸಾಮಗ್ರಿಗಳನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬಿಡುಗಡೆಗೊಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ಕೃಷಿ ನಿರ್ದೇಶಕರಾದ ಎಸ್.ಬಿ.ಕೊಂಗವಾಡ, ಹೂಗಾರ್, ಚಿಕ್ಕೋಡಿಯ ಕೃಷಿ ಉಪ ನಿರ್ದೇಶಕ ಎಲ್.ಐ.ರೂಢಗಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.