Breaking News

ನೇಕಾರ ಸಮುದಾಯ ಸಂಘಟಿತವಾಗಲಿ ; ಹಂಪಿ ಹೇಮಕೂಟದ ಗಾಯತ್ರಿ ಪೀಠದ ಶ್ರೀ ದಯಾನಂದ ಮಹಾಸ್ವಾಮೀಜಿ ಕರೆ

Spread the love

ನೇಕಾರ ಸಮುದಾಯ ಸಂಘಟಿತವಾಗಲಿ ; ಹಂಪಿ ಹೇಮಕೂಟದ ಗಾಯತ್ರಿ ಪೀಠದ ಶ್ರೀ ದಯಾನಂದ ಮಹಾಸ್ವಾಮೀಜಿ ಕರೆ

ಯುವ ಭಾರತ ಸುದ್ದಿ ರಾಮದುರ್ಗ :
ನಮ್ಮ ನೇಕಾರ ಸಮಾಜ ಉನ್ನತಿ ಹೊಂದಬೇಕಾದರೆ, ಸಂಘಟಿತರಾಗಬೇಕು. ಇದರೊಟ್ಟಿಗೆ ಸರ್ವರಂಗಗಳು ಮುಂದೆ ಬರಬೇಕು ಎಂದು ಹಂಪಿ ಹೇಮಕೂಟದ ಗಾಯತ್ರಿ ಪೀಠದ ಶ್ರೀಶ್ರೀಶ್ರೀ ದಯಾನಂದ ಮಹಾಸ್ವಾಮಿಗಳು ಹೇಳಿದರು.
ರಾಮದುರ್ಗ ತಾಲೂಕಿನ ಮನಿಹಾಳ-ಸುರೇಬಾನ ಗ್ರಾಮದ ಘಾಳಿಪೇಟೆಯ ವೇ.ಮೂ.ಶ್ರೀ ಅಯ್ಯಪ್ಪಜ್ಜ ದೇವಸ್ಥಾನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ 31 ಸರ್ವ ಧರ್ಮ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅವಧೂತ ಅಯ್ಯಪ್ಪಜ್ಜನವರು ನಮ್ಮ ನೇಕಾರ ಕುಲದವರು ಎಂಬ ಹೆಮ್ಮೆ ನಮ್ಮದು. ಅಯ್ಯಪ್ಪಜ್ಜ ದೇವಸ್ಥಾನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಮೂಲಕ ಸಾಮೂಹಿಕ ವಿವಾಹ ನೆರವೇರಿದ್ದು ಸಂತಸದ ವಿಷಯ. ಅದೇ ರೀತಿ ನಮ್ಮ ನೇಕಾರ ಸಮುದಾಯವರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಶಾಸಕ ಮಹಾದೇವಪ್ಪ ಯಾದವಾಡ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ, ನೇಕಾರರ ಬದುಕು ಸಂಕಷ್ಟದಲ್ಲಿ ಇರುವ ಈ ಸಂದರ್ಭದಲ್ಲಿ ಇಂತಹ ದೊಡ್ಡ ಕಾರ್ಯ ಮಾಡಿರುವುದು ಶ್ಲಾಘನೀಯ. ಸರ್ಕಾರ ಕೂಡಾ ನೇಕಾರರಿಗೆ ಹಲವಾರು ಯೋಜನೆ ಜಾರಿಗೆ ತಂದಿದೆ. ಇವುಗಳ ಸದುಪಯೋಗ ಪಡೆಯಿರಿ. ಜನರ ಮಾನ ಕಾಪಾಡುವ ನೇಕಾರರ ಪಾತ್ರ ಸಮಾಜದಲ್ಲಿ ಹಿರಿದು. ನನ್ನ ತಾಲೂಕಿ ನೇಕಾರರ ಅಭಿವೃದ್ಧಿ ಗೆ ಶ್ರಮಿಸುತ್ತೇನೆ. ಈ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ಜೋಡಿಗಳ ಬಾಳು ಸಂತಸದಿಂದ ಕೂಡಿರಲಿ ಎಂದರು.

ಮಹಾನಗರ ಪಾಲಿಕೆ ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ ಮಾತನಾಡಿ, ಹೆಣ್ಣಿನ ಜೀವನ‌ ವಿವಿಧ ಕಷ್ಟಗಳಿಂದ ಕೂಡಿದೆ. ನೇಕಾರರು ತಮ್ಮ ಮಕ್ಕಳಿಗೆ ಉತ್ತಮ‌ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ನಾನು ಕೂಡಾ ಕಡುಬಡತನ ನೇಕಾರರ ಕುಟುಂಬದಿಂದ ಬಂದಿದ್ದೇನೆ. ಆದರೆ, ನಾನು ಕಷ್ಟಪಟ್ಟು ಶ್ರಮದಿಂದ ಓದಿ ಕೆಎಎಸ್ ಓದಿ ಇಂದು ಉಪ ಆಯುಕ್ತೆ ಆಗಿ ಕಾರ್ಯ ಮಾಡುತ್ತಿದ್ದೇನೆ. ಅದರಂತೆ ತಾವು ಕೂಡಾ ಕಠಿಣ ಪರಿಶ್ರಮದಿಂದ ಓದಿ ಉನ್ನತ ಹುದ್ದೆ ಪಡೆಯಿರಿ. ಬಡತನ ಸಾಧನೆಗೆ ಅಡ್ಡಿಯಾಗಬಾರದು ಎಂದು ಕಿವಿಮಾತು ಹೇಳಿದರು.

ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್ ಸೋಮಶೇಖರ ಮಾತನಾಡಿ, ನೇಕಾರ ಸಮುದಾಯದಲ್ಲಿ ೨೯ ಒಳ‌ಪಂಗಡ, ಆರು ಲಕ್ಷ ಇದ್ದಾರೆ. ಆದರೆ, ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ ಹಿಂದೆ ಉಳಿದಿದ್ದಾರೆ. ಇನ್ನು ಮುಂದೆ ನೇಕಾರ ಸಮುದಾಯ ಕೂಡಾ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ನೇಕಾರರಿಗೆ ಸರ್ಕಾರ ೨೪ ಭಾಗಗಳಲ್ಲಿ ಜವಳಿ ಪಾರ್ಕ್ ಮಾಡ್ತಾ ಇದೆ.‌ ಇದಕ್ಕೆ ಸಹಕಾರ ನೀಡೋಣ. ನಮ್ಮ ನೇಕಾರ ಸಮುದಾಯದಲ್ಲಿ ಸಂಘಟನೆ ಕೊರತೆ ಇದೆ. ಈ ಸಂಘಟನೆ ಬಲವಾಗಿ ನಾವು ಕೂಡಾ ಆರ್ಥಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಆಗಬೇಕು. ಸರ್ಕಾರ ಇದಕ್ಕೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ನೇಕಾರ ಸಂಘಟನೆ ಮಾಡುತ್ತಿದೇವೆ. ಇದರಿಂದ ನೇಕಾರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸಲಾಗುವುದು. ಈ ಮೂಲಕ ನೇಕಾರ ಸಮುದಾಯ ಮಕ್ಕಳಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶ್ರೀ ಶಿವಮೂರ್ತಿ ಮಹಾಸ್ವಾಮಿ ಆಶೀರ್ವಚನ ನೀಡಿ, ನೇಕಾರರ ಸಮುದಾಯದ ಈ‌ ಒಗ್ಗಟ್ಟು ಎಲ್ಲರಿಗೂ ಮಾದರಿ. ಈ ಒಗ್ಗಟ್ಟು ವೋಟಿಗಾಗಿ ಒಡೆದು ಹೋಗಬಾರದು. ಈ ಒಗ್ಗಟ್ಟನ್ನು ನೋಡಿ ಎಲ್ಲರಿಗೂ ಮಾದರಿ. ನೇಕಾರಿಗೆ ಉಚಿತ ವಿದ್ಯುತ್ ಕೊಡಬೇಡಿ, ಅವರಿಗೆ ಉತ್ತಮ ಮಾರ್ಕೇಟಿಂಗ್ ನೀಡಿ ಎಂದು ಹೇಳಿದರು.

ಬೆಂಗಳೂರು ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ಇಂದು ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡುವುದು ಕಷ್ಟಕರವಾಗಿದೆ. ಆದತೆ ಎಲ್ಲ ಸಮಸ್ಯೆಗಳ ಈ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿ ಯಶಸ್ವಿಯಾಗಿದ್ದಕ್ಕೆ ಎಲ್ಲರಿಗೂ ಅಭಿನಂದನೆ ಎಂದು ತಿಳಿಸಿದರು.
ತಪಸಿಹಳ್ಳಿ ದಿವ್ಯಜ್ಞಾನಾನಂದ ಮಹಾ ಸ್ವಾಮೀಜಿ, ಚೆನ್ನಮಲ್ಲ ಶಿವಾಚಾರ್ಯ, ಶಿವಾನಂದ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಎಸ್.ಎನ್.ಮುನಿರಾಜ, ಏಕನಾಥ ಜವಳಗಿ, ಗಜಾನನ ಗುಂಜೀರಿ ಮಾತನಾಡಿದರು. ಇದೇ ವೇಳೆ ಕಾರ್ಯಕ್ರಮದ ಯಶಸ್ವಿಗೆ ಶಮ್ರಿಸಿದವರನ್ನು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಜಿ.ಎಂ.ಹುಲ್ಲೂರ ಸ್ವಾಗತಿಸಿದರು. ವಿಠಲ ಯಲಿಗೂಡ, ತುಕಾರಾಮ ಕರದಿನ, ಕಾಶಪ್ಪ ಕರದಿನ ವಂದಿಸಿದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

1 × four =