ಕುಡಿದ ಮತ್ತಿನಲ್ಲಿ ಹೆಂಡತಿ,ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ; ನಂತರ ತಾನೂ ನೇಣಿಗೆ ಶರಣು!
ಯುವ ಭಾರತ ಸುದ್ದಿ ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಹಾಗೂ ಮೂವರು ಮಕ್ಕಳ ಮೇಲೆ ಕೊಡಲಿ, ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ನಂತರ ತಾನೂ ನೇಣಿಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ ಎಂದು ವರದಿಯಾಗಿದೆ.
ಇಂದು, ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುಳ್ಳ ಗ್ರಾಮದ ಫಕ್ಕೀರಪ್ಪ ಮಾದರ ಎಂಬಾತನೇ ಹೆಂಡತಿ ಮಕ್ಕಳನ್ನು ಕಡಿದ ನಂತರ ಆತ್ಮಹತ್ಯೆ ಮಾಡಿಕೊಂಡವ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ಸೌಂಡ್ ಜಾಸ್ತಿ ಮಾಡಿ ನಂತರ ಹೆಂಡತಿ ಮುದಕವ್ವನ ಮೇಲೆ ಹಲ್ಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಗಾಯಗೊಂಡ ಮುದಕವ್ವ ಜೋರಾಗಿ ಕಿರುಚಿದ್ದಾಳೆ.
ಆಗ ಮಲಗಿದ್ದ ಮೂರು ಮಕ್ಕಳು ಸಹ ಎದ್ದು ಅಳಲು ಶುರು ಮಾಡಿದ್ದಾರೆ. ಇದರಿಂದ ಆತಂಕಕ್ಕೀಡಾದ ಫಕ್ಕೀರಪ್ಪ ಮೂರು ಮಕ್ಕಳ ಮೇಲೆಯೂ ಅದೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ನಂತರ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಾನೂ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಹಲ್ಲೆಯಿಂದಾಗಿ ಮಗ ಮೃತಪಟ್ಟಿದ್ದಾನೆ. ಪತ್ನಿ, ಒಬ್ಬ ಪುತ್ರಿಯರ ಸ್ಥಿತಿ ಗಂಭೀರವಾಗಿದೆ.
ಬೆಳಿಗ್ಗೆ 6ರ ದೊಡ್ಡದಾಗಿದ್ದ ಟಿವಿ ಸೌಂಡ್ ಕೇಳಿ ಅಕ್ಕಪಕ್ಕದವರಿಗೆ ಅಚ್ಚರಿಯಾಗಿದೆ. ಅವರು ಮನೆಯ ಬಾಗಿಲು ಬಡಿದಿದ್ದಾರೆ. ಆಗ ಯಾರು ಬಾಗಿಯಲು ತೆರೆಯದಿದ್ದಾಗ ಅದನ್ನು ಮುರಿದು ಒಳ ಪ್ರವೇಶಿಸಿದಾಗ ರಕ್ತದ ಮಡುವಿನಲ್ಲಿ ಮೂವರು ಮಕ್ಕಳು ಹಾಗೂ ಮುದಕವ್ವ ಕಂಡುಬಂದಿದ್ದಾರೆ. ತಕ್ಷಣವೇ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೌಂಡಿ ಕೆಲಸ ಮಾಡುತ್ತಿದ್ದ ಫಕ್ಕೀರಪ್ಪ ಮದ್ಯವ್ಯಸನಿಯಾಗಿದ್ದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ಹೇಳಲಾಗಿದೆ. ಬುಧವಾರ ಎಲ್ಲರೂ ಮಲಗಿಕೊಂಡಿದ್ದ ವೇಳೆ ಸುತ್ತಿಗೆಯಿಂದ ಮನೆಯವರ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪುತ್ರ ಶ್ರೇಯಸ್ ಊರ್ಫ್ ಮೈಲಾರಪ್ಪ (6) ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾನೆ. ಪತ್ನಿ ಮುದಕವ್ವ (30), ಪುತ್ರಿಯರಾದ ಶಾಮಲಾ (8), ಸೃಷ್ಟಿ (4) ಗಂಭೀರವಾಗಿ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿದ್ದು, ಕಿಮ್ಸ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ ಪಿ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.