Breaking News

ಎಂ.ಕೆ.ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಣಕಹಳೆ ಮೊಳಗಿಸಿದ ಬಿಜೆಪಿ ಚಾಣಕ್ಯ !

Spread the love

ಎಂ.ಕೆ.ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ರಣಕಹಳೆ ಮೊಳಗಿಸಿದ ಬಿಜೆಪಿ ಚಾಣಕ್ಯ !

ಯುವ ಭಾರತ ಸುದ್ದಿ ಎಂ.ಕೆ.ಹುಬ್ಬಳ್ಳಿ :          ಬಿಜೆಪಿಯ ಚುನಾವಣಾ ಚತುರ ಹಾಗೂ ಚಾಣಕ್ಯ ಎಂದೇ ಗುರುತಿಸಲ್ಪಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಇಂದು ಎಂ.ಕೆ. ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ಉದ್ದೇಶಿಸಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಇರಬೇಕು ಎಂದು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ‌. ಅದರಲ್ಲೂ ಮುಂದಿನ ಬಾರಿ ಸಂಪೂರ್ಣ ಬಹುಮತದಿಂದ ಕರ್ನಾಟಕದಲ್ಲಿ ಬಿಜೆಪಿಯನ್ನು ಆಡಳಿತಕ್ಕೆ ತರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ತಮ್ಮ ಭಾಷಣದ ಉದ್ದಕ್ಕೂ ಅವರು ಪ್ರಧಾನಿ ನರೇಂದ್ರ ಮೋದಿ ಸರಕಾರದ ಹತ್ತಾರು ಜನಪರ ಯೋಜನೆಗಳನ್ನು ಮನಮುಟ್ಟುವಂತೆ ಬಣ್ಣಿಸಿದರು. ಜತೆಗೆ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅನುಸರಿಸುತ್ತಿರುವ ನಡೆ ವಿರುದ್ಧ ಕೆಂಡಮಂಡಲಗೊಂಡರು.

2007 ರಲ್ಲಿ ವಿಧಾನಸಭಾ ಚುನಾವಣೆ ವೇಳೆ ಗೋವಾದಲ್ಲಿ ಮಾತನಾಡಿದ್ದ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಮಹಾದಾಯಿ ನೀರು ಹರಿಸಲ್ಲವೆಂದು ಹೇಳುವ ಮೂಲಕ ರಾಜ್ಯಕ್ಕೆ ಮೋಸ ಮಾಡಿದ್ದು ಕಾಂಗ್ರೆಸ್ . ಆದರೆ ನಾವು ಎರಡೂ ರಾಜ್ಯದಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ, ಕರ್ನಾಟಕಕ್ಕೆ ಮಹದಾಯಿಯ ನೀರು ಹರಿಸಲು ಶ್ರಮಿಸಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡಕ್ಕೆ ನೇರ ರೈಲು ಮಾರ್ಗವನ್ನು ನರೇಂದ್ರ ಮೋದಿ ಸರ್ಕಾರ ಮಾಡಿಕೊಟ್ಟಿದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರವನ್ನು ಎಟಿಎಂ ಮಾಡಿಕೊಂಡಿತ್ತು . ಆದರೆ, ನಾವು ಎಲ್ಲಾ ದುರಾವಸ್ಥೆ ಸರಿ ಮಾಡಿದ್ದೇವೆ ಎಂದಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಡವರ ಉದ್ಧಾರಕ್ಕೆ ಏನೂ ಶ್ರಮಿಸಿವೆ. ಈ ಎರಡು ಪಕ್ಷಗಳು ಏನು ಕೆಲಸ ಮಾಡಿಲ್ಲ ಎಂದು ದೂರಿದರು.

ಕೊರೊನಾ ಕಾಲಘಟ್ಟದಲ್ಲಿ ನರೇಂದ್ರ ಮೋದಿ ಸರಕಾರ ಸಾಕಷ್ಟು ದುಡಿದಿದೆ. ಎಲ್ಲಾ ಜನರಿಗೆ ವ್ಯಾಕ್ಸಿನ್ ನೀಡಿದೆ ಎಂದು ಹೇಳಿದರು.

ಬಿಜೆಪಿ ಸರಕಾರಕ್ಕೆ ಎರಡು ಸಲ ರಾಷ್ಟ್ರಪತಿ ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ, ಈ ಸಂದರ್ಭದಲ್ಲಿ ಬಿಜೆಪಿ ದಲಿತ ಮತ್ತು ಆದಿವಾಸಿ ಬುಡಕಟ್ಟು ಸಮಾಜಕ್ಕೆ ಸೇರಿದ ವ್ಯಕ್ತಿಗಳನ್ನು ರಾಷ್ಟ್ರಪತಿ ಮಾಡುವ ಮೂಲಕ ಉನ್ನತ ಹುದ್ದೆಗೆ ಹಿಂದುಳಿದವರನ್ನು ಕೂರಿಸುವ ಕೆಲಸ ಮಾಡಿದೆ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾಡಿನ ಜನತೆ ಬಿಜೆಪಿಯನ್ನು ಸಂಪೂರ್ಣವಾಗಿ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಯಡಿಯೂರಪ್ಪ ವಾಗ್ದಾಳಿ :
ಬೆಳಗಾವಿ ಭಾಗಕ್ಕೆ ವಂದೇ ಮಾತರಂ ರೈಲು..
ಬೆಳಗಾವಿ ಭಾಗಕ್ಕೆ ವಂದೇ ಮಾತರಂ ರೈಲು ಯೋಜನೆ ಮತ್ತು ಕೆಲವೇ ದಿನಗಳಲ್ಲಿ ಮಹದಾಯಿ ಯೋಜನೆಗೆ ಶಂಕುಸ್ಥಾಪನೆ ಮಾಡಲಾಗುವುದು ಎಂದು ಮಾಜಿ ಸಿಎಂ ಸಿಎಂ ಯಡಿಯೂರಪ್ಪ ಹೇಳಿದರು . ಕಾಂಗ್ರೆಸ್ ಪಕ್ಷ ಜನಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶ ಅಭಿವೃದ್ಧಿ ಆಗುತ್ತಿದೆ ಎಂದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ತಡೆಯಲಾಗಲ್ಲ . ರಾಜ್ಯದಲ್ಲಿ ಬಿಜೆಪಿಗೆ 140 ಸೀಟ್ ತರಲು ಶ್ರಮಿಸೋಣ ಎಂದು ಬಿಎಸ್‌ವೈ ಹೇಳಿದರು. ಪ್ರಧಾನಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಮಾಡಲಾಗುತ್ತಿದೆ . ಯಾವುದೇ ಕ್ಷೇತ್ರವನ್ನು ಕಡೆಗಣಿಸಿಲ್ಲ ಎಂದರು.

ಧಾರವಾಡದಲ್ಲಿ ನೂತನ ವಿಶ್ವವಿದ್ಯಾಲಯಕ್ಕೆ ಪೂಜೆ :
ಧಾರವಾಡದಲ್ಲಿಂದು ನೂತನ ಫಾರೆನ್ಸಿಕ್ ಯೂನಿವರ್ಸಿಟಿ ಸ್ಥಾಪನೆಗಾಗಿ ಭೂಮಿ ಪೂಜೆ ನೆರವೇರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಹೋದ್ಯೋಗಿ ಸಚಿವ ಪ್ರಲ್ಲಾದ್ ಜೋಶಿ ಅವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು . ಧಾರವಾಡದಲ್ಲೇ ಗುಜರಾತ್ ಮಾದರಿಯ ಫಾರೆನ್ಸಿಕ್ ಯೂನಿವರ್ಸಿಟಿ ಕೊಡಬೇಕು ಎಂದು ಪ್ರಹ್ಲಾದ್ ಜೋಶಿಯವರು ನನ್ನ ಹಿಂದೆ ಬಿದ್ದುಬಿಟ್ಟಿದ್ದರು . ಸೂಕ್ತ ಜಾಗವಿಲ್ಲದೇ ಹೇಗೆ ಇದನ್ನ ಮಂಜೂರು ಮಾಡಲು ಸಾಧ್ಯ ಪ್ರಲ್ಲಾದ ಜೋಶಿಯವರೇ ? ಅಂತ ನಾನು ಪ್ರಶ್ನಿಸಿದ್ದೆ . ಆದರೆ ಪ್ರಲ್ಲಾದ್ ಜೋಶಿಯವರು ನಾನು ಜಾಗ ಕೇಳಿದ ಒಂದೇ ದಿನದಲ್ಲಿ 57 ಎಕರೆ ಜಾಗವನ್ನ ಗುರುತಿಸಿ ಕೊಟ್ಟರು . ಆಗ ಯೂನಿವರ್ಸಿಟಿ ಕೊಡದಿರಲು ನನ್ನ ಬಳಿ ಬೇರೆ ಯಾವುದೇ ಕಾರಣ ಉಳಿದಿರಲಿಲ್ಲ . ಈ ರೀತಿ ಕೇಂದ್ರ ಸಚಿವರಾಗಿ ಪ್ರಲ್ಲಾದ್ ಜೋಶಿ ಅವರು ಕಾರ್ಯ ನಿರ್ವಹಿಸುತ್ತಾರೆ . ನಾನು ಮತ್ತೇನು ಕಾರಣ ಹುಡುಕದೇ ಧಾರವಾಡಕ್ಕೆ ನೂತನ ವಿಶ್ವವಿದ್ಯಾಲಯ ನೀಡಲಾಗಿದೆ ಎಂದು ತಿಳಿಸಿದರು.

ಐಪಿಸಿ, ಸಿಆರ್ ಪಿಸಿ ಬದಲಾವಣೆ ಅಗತ್ಯ :
ದೇಶದಲ್ಲಿ ಸದ್ಯ ಇರುವ ಐಪಿಸಿ, ಸಿಆರ್ಪಿಸಿ, ಸಾಕ್ಷ್ಯ ಕಾಯ್ದೆಗಳಿಗೆ ಅಗತ್ಯ ಬದಲಾವಣೆ ತರುವುದರ ಜತೆಗೆ, ವಿಧಿ ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಬಲಿಷ್ಠ ರಾಷ್ಟ್ರ ನಿರ್ಮಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ರಾಷ್ಟೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ 9ನೇ ಕ್ಯಾಂಪಸ್ ಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಪರಾಧ ಕೃತ್ಯಗಳನ್ನು ಸಾಭಿತು ಮಾಡಲು 3ನೇ ಡಿಗ್ರಿ ಕಾಲ ಈಗಿಲ್ಲ. ಆದರೆ ಕಾನೂನಾತ್ಮಕವಾಗಿ ಆರೋಪಿಗೆ ಶಿಕ್ಷೆ ಸಿಗುವಂತೆ ಮಾಡಲು ವಿಧಿ ವಿಜ್ಞಾನ ಆಧಾರಿತ ಸಾಕ್ಷ್ಯ ಸಂಗ್ರಹ ಅಗತ್ಯ. ಈ ನಿಟ್ಟಿನಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ ಗಳ ಸ್ಥಾಪನೆಯೂ ನೇರವಾಗಲಿದೆ ಎಂದರು.

2002ರಲ್ಲಿ ಕೇಂದ್ರ ಗೃಹ ಮಂತ್ರಿ ಆಗಿದ್ದ ಎಲ್ ಕೆ ಅಡ್ವಾಣಿ ಅವರು ಮೊದಲಬಾರಿಗೆ ವಿಧಿ ವಿಜ್ಞಾನ ನಿರ್ದೇಶನಾಲಯ ಆರಂಭಿಸಿದರು. ಅದರ ಆಧಾರದಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರು ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸುವ ಯೋಜನೆ ರೂಪಿಸಿದರು. ಮೂಲ ಸೌಕರ್ಯ ಕಲ್ಪಿಸಿದರೂ ತಜ್ಞರ ಕೊರತೆ ಎದುರಾಯಿತು. ಇದನ್ನು ನಿಗಿಸಲು ವಿಧಿ ವಿಜ್ಞಾನ ವಿಷಯ ಕೋರ್ಸ್ ಆರಂಭಿಸಲು ಗುಜರಾತ್ ಸರ್ಕಾರ ನಿರ್ಧರಿಸಿ ವಿಶ್ವವಿದ್ಯಾಲಯ ಆರಂಭಿಸಿತು. ಆದರೆ ಅಲ್ಲಿಂದ ಹೊರ ಬರುತ್ತಿರುವ ಪರಿಣಿತರ ಸಂಖ್ಯೆ ಕಡಿಮೆ ಇದ್ದ ಕಾರಣ ವಿವಿಧ ರಾಜ್ಯಗಳಲ್ಲಿ ಕ್ಯಾಂಪಸ್ ನಿರ್ಮಾಣ ಮಾಡಲಾಗಿದೆ. ಇದರಿಂದ ದೇಶದ ವಿಧಿ ವಿಜ್ಞಾನ ಕ್ಷೇತ್ರಕ್ಕೆ ಅಗತ್ಯ ಇರುವ 8ರಿಂದ 10 ಸಾವಿರ ತಜ್ಞರ ಸಿಗಲಿದ್ದಾರೆ ಎಂದು ಹೇಳಿದರು.

ವಿದ್ಧಿ ವಿಜ್ಞಾನ ಕೋರ್ಸ್ ಮೂಲಕ 12ನೇ ತರಗತಿ ನಂತರ ಈ ಕೋರ್ಸ್ ಕಲಿಯಬಹುದು. ಇದರಿಂದ ಶೇ 100 ರಷ್ಟು ಉದ್ಯೋಗ ಖಾತ್ರಿ ಇರಲಿದೆ ಎಂದರು

ಜಗತ್ತಿನ ಇತರ ರಾಷ್ಟ್ರಗಳ ಸರಿ ಸಮನಾಗಿ ನಿಲ್ಲಬೇಕಾದರೆ ದೇಶದ ವಿಧಿ ವಿಜ್ಞಾನ ಕ್ಷೇತ್ರ ಬಲಿಷ್ಠ ಗೊಳಿಸಬೇಕು. ಅದಕ್ಕೆ ಅಗತ್ಯ ಇರುವ ತಜ್ಞರನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾರಂಭವಾದ ಈ ಕ್ಯಾಂಪಸ್ ರಾಜ್ಯದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಹಾಗೂ ರಾಜ್ಯ ಪೊಲೀಸ್ ವ್ಯವಸ್ಥೆ ಬಲಿಷ್ಠ ಗೊಳಿಸಲು ನೇರವಾಗಲಿದೆ ಎಂದು ಶಾ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಅಪರಾಧ ಪ್ರಕರಣಗಳ ಸ್ವರೂಪವೂ ಬದಲಾಗಿದೆ. ಇದಕ್ಕೆ ಪೂರಕವಾಗಿ ಪೊಲೀಸ ರು ಒಂದು ಹೆಜ್ಜೆ ಮುಂದಿರಬೇಕು. ಆ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ವ್ಯವಸ್ಥೆ ಬಲಪಡಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.


Spread the love

About Yuva Bharatha

Check Also

ಜನವರಿ 24ರ ಸಾರಿಗೆ ಸಂಸ್ಥೆ ನೌಕರರ ಧರಣಿಯಿಂದ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವುದಿಲ್ಲ: ಎನ್‌ಡಬ್ಲ್ಯುಕೆಆರ್‌ಟಿಸಿ

Spread the loveಜನವರಿ 24ರ ಸಾರಿಗೆ ಸಂಸ್ಥೆ ನೌಕರರ ಧರಣಿಯಿಂದ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವುದಿಲ್ಲ: ಎನ್‌ಡಬ್ಲ್ಯುಕೆಆರ್‌ಟಿಸಿ ಯುವ ಭಾರತ ಸುದ್ದಿ …

Leave a Reply

Your email address will not be published. Required fields are marked *

seventeen + 3 =