ರಾಜು ಝಂವರ ಕೊಲೆ ಪ್ರಕರಣ : ಕೊನೆಗೂ ಪತ್ತೆಯಾಯ್ತು ಶವ
ರಾಜು ಅವರ ಶವವನ್ನು ಕೆನಾಲ್ ಗೆ ಎಸೆಯಲಾಗಿತ್ತು ಎಂದು ಆರೋಪಿಗಳು ಆರಂಭದಲ್ಲಿ ಹೇಳಿದ್ದರು. ಆದರೆ ಇದೀಗ ಅವರ ಶವ ಕೃತ್ಯ ನಡೆದ ಸ್ಥಳದಿಂದ 10 ಕಿಲೋ ಮೀಟರ್ ದೂರದ ಪಂಚನಾಯಕನ ಹಟ್ಟಿ ಬಳಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದರು. ಗುರುವಾರ ಮತ್ತೊಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಯುವ ಭಾರತ ಸುದ್ದಿ ಗೋಕಾಕ :
ಕಳೆದ ಶುಕ್ರವಾರ ಅಪಹರಣಕ್ಕೊಳಗಾಗಿ ಕೊಲೆಯಾದ ಗೋಕಾಕ ನಗರದ ಗಣ್ಯ ವ್ಯಾಪಾರಸ್ಥ ರಾಜು/ ಮುನ್ನ ಝಂವರ (52)ಅವರ ಶವ ಗುರುವಾರ ರಾತ್ರಿ ಪತ್ತೆಯಾಗಿದೆ. ನಗರದ ವೈದ್ಯ ಸಚಿನ್ ಶಂಕರ್ ಶಿರಗಾವಿ ಪ್ರಕರಣದ ಪ್ರಮುಖ ಸೂತ್ರಧಾರಿ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ರಾಜು ಹಾಗೂ ಸಚಿನ್ ಅವರ ನಡುವೆ ನಡೆದ ವೈಮನಸ್ಸು ಕೊಲೆಯಲ್ಲಿ ಪರ್ಯವನಗೊಂಡಿದೆ. ಸಚಿನ್ ಶಿರಗಾವಿ ಮತ್ತು ಶಿರಡಾಣ ವೈದ್ಯ ಶಿವಾನಂದ ಪಾಟೀಲ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗೋಕಾಕ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಅವರಿಬ್ಬರೂ ರಾಜು ಅವರನ್ನು ಕೊಲೆಗೈದ ನಂತರ ಕೆನಾಲ್ ಗೆ ಎಸೆದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು. ನ್ಯಾಯಾಲಯ ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ರಾಜು ಅವರ ಶವಕ್ಕೆ ಕೆನಾಲ್ ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ಶವ ಪತ್ತೆ ಆಗಿರಲಿಲ್ಲ. ಕೆನಾಲ್ ನೀರು ಬಂದ್ ಮಾಡಿ ಶವ ಪತ್ತೆ ಕಾರ್ಯ ನಡೆಸಲಾಗಿತ್ತು. ಕೊನೆಗೂ ಗುರುವಾರ ಘಟನೆ ನಡೆದ ಸ್ಥಳದಿಂದ 10 ಕಿ.ಮೀ ದೂರದ ಪಂಚನಾಯಕನಹಟ್ಟಿ ಬಳಿಯ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ದೊರಕಿದ್ದು ಪೊಲೀಸರು ನಿಟ್ಟಿಸಿರು ಬಿಡುವಂತಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೂರನೇ ಆರೋಪಿ ಬಂಧನ : ಗೋಕಾಕ್ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಮೂರನೇ ಆರೋಪಿ ಇರ್ಷಾದ ಅಹಮದ್ ತ್ರಾಸ್ಗರ್ (25)ಎಂಬುವವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.