ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಮುಖ್ಯ: ಡಾ. ಎಸ್. ಎಸ್. ತೇರದಾಳ
ಯುವ ಭಾರತ ಸುದ್ದಿ ಬೆಳಗಾವಿ :
ವಿದ್ಯಾರ್ಥಿಗಳು ಭವ್ಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಂಸ್ಕಾರದ ಜೊತೆಗೆ ಜ್ಞಾನದ ಅವಶ್ಯಕತೆಯಿದೆ. ಅವೆರಡೂ ಸಿಗುವುದು ಪಾಲಕರು ಮತ್ತು ಶಿಕ್ಷಕರಿಂದ ಎಂದು ಪ್ರಾಚಾರ್ಯ ಡಾ. ಎಸ್. ಎಸ್. ತೇರದಾಳ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪೋಷಕರ ಸಭೆ ಉದ್ದೇಶಿಸಿ ಮಾತನಾಡಿದರು. ನಮ್ಮ ಮಹಾವಿದ್ಯಾಲಯವು ಸುಸಜ್ಜಿತ ಕಟ್ಟಡದೊಂದಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದುವುದರ ಜೊತೆಗೆ ಮಾದರಿ ಮಹಾವಿದ್ಯಾಲಯವಾಗಿ ರೂಪುಗೊಳ್ಳುತ್ತಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣವನ್ನು ಈ ಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಇಲ್ಲಿ ಅಧ್ಯಾಪನ ವೃತ್ತಿಯಲ್ಲಿರುವವರು ಯುಜಿಸಿ ನಿಯಮದ ಪ್ರಕಾರ ಎಲ್ಲಾ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. ನುರಿತ ಮತ್ತು ಅನುಭವಿ ಬೋಧಕ ವರ್ಗವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ನಿರತರಾಗಿದ್ದಾರೆ. ನಮ್ಮ ಮಹಾವಿದ್ಯಾಲಯದಲ್ಲಿ ಓದುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬಂದವರು. ಇವರೆಲ್ಲರೂ ಪ್ರತಿಭಾವಂತರು. ಪ್ರತಿ ವರ್ಷ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರೊಂದಿಗೆ ಪಾಲಕರ ಪಾತ್ರವೂ ಇದೆ. ಪಾಲಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಪ್ರವೇಶಾತಿಯನ್ನು ಮಾಡಿಸಿ ಹೋದರೆ ಸಾಕಾಗುವುದಿಲ್ಲ. ಅವರ ಚಲನವಲನಗಳ, ಅವರ ಅಭ್ಯಾಸದ ಕುರಿತು ನಿಗಾವಹಿಸುತ್ತಲೇ ಇರಬೇಕು. ಪೋಷಕರು ಶಿಕ್ಷಕರೊಂದಿಗೆ ಕೈ ಜೋಡಿಸಿದಾಗ ಯುವಮನಸ್ಸುಗಳನ್ನು ಸರಿಯಾದ ದಾರಿಯಲ್ಲಿ ಸಾಗಿಸಬಹುದಾಗಿದೆ ಎಂದರು. ವಿದ್ಯಾರ್ಥಿಗಳ ಮತ್ತು ಕಾಲೇಜಿನ ಕುರಿತು ಪೋಷಕರು ಹಾಗೂ ಶಿಕ್ಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಡಾ. ಹನುಮಂತಪ್ಪ ಸಂಜೀವಣ್ಣನವರ್ ಸ್ವಾಗತಿಸಿದರು. ಡಾ. ಅರ್ಜುನ ಜಂಬಗಿ ನಿರೂಸಿದರು. ಡಾ. ಮಲ್ಲೇಶ್ ದೊಡ್ಡಲಕ್ಕಣ್ಣವರ ವಂದಿಸಿದರು. ವಿದ್ಯಾರ್ಥಿನಿ ಕಲ್ಪನಾ ಮುಚ್ಚಂಡಿ ಪ್ರಾರ್ಥಿಸಿದರು. ವಿದ್ಯಾರ್ಥಿಗಳ ಪೋಷಕರು ಮತ್ತು ಬೋಧಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.