ಮತ್ತೆ ಸುದ್ದಿಯಲ್ಲಿ ಹೆಲಿಕಾಪ್ಟರ್ ಚುನಾವಣಾ ಪ್ರಚಾರ !
ಸತೀಶ ಮನ್ನಿಕೇರಿ,
ಯುವ ಭಾರತ ವಿಶೇಷ
ಗೋಕಾಕ : ಯಮಕನಮರಡಿ ಕಾಂಗ್ರೆಸ್ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಈ ಬಾರಿಯ ವಿಧಾನಸಭಾ ಚುನಾವಣೆಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸುತ್ತಾರಾ ? ಹೀಗೊಂದು ಚರ್ಚೆ ಇದೀಗ ಬೆಳಗಾವಿ ಜಿಲ್ಲಾದ್ಯಂತ ಹರಡಿದೆ.
ಈ ಮೊದಲು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸತೀಶ ಜಾರಕಿಹೊಳಿಯವರು ಬಾಡಿಗೆ ಹಾಗೂ ಸ್ವತಃ ಹೆಲಿಕಾಪ್ಟರ್ ಖರೀದಿ ಮೂಲಕ ರಾಜ್ಯಾದ್ಯಂತ ತೆರಳಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದರು.
ಶ್ರೀಮಂತ ಕೈಗಾರಿಕೋದ್ಯಮಿಯಾಗಿರುವ ಸತೀಶ ಜಾರಕಿಹೊಳಿ ಅವರು 2013 ರ ವಿಧಾನಸಭಾ ಚುನಾವಣೆ ವೇಳೆ ಮೂರು ತಿಂಗಳ ಕಾಲ ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ಕಾಂಗ್ರೆಸ್ ವರಿಷ್ಠ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚುನಾವಣಾ ಪ್ರಚಾರ ನಡೆಸಿದ್ದರು. ನಂತರ ಪ್ರಯಾಣ ಮತ್ತು ಕಾರುಗಳಲ್ಲಿ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ತನ್ನದೇ ಆದ ಹೆಲಿಕಾಪ್ಟರ್ ಹೊಂದಿರಬೇಕು ಎಂಬ ಅವರ ಸ್ನೇಹಿತರ ಸಲಹೆಯ ಮೇರೆಗೆ ಹೆಲಿಕಾಪ್ಟರ್ ಖರೀದಿಸಿ ಚುನಾವಣಾ ಪ್ರಚಾರಕ್ಕೆ ತೆರಳಿ ಸುದ್ದಿಯಾಗಿದ್ದರು.
ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿವೆ. ಅದರ ಜೊತೆಗೆ ಕೆಲ ಪ್ರಮುಖ ನಾಯಕರು ಸಹ ರಾಜ್ಯಾದ್ಯಂತ ಪ್ರವಾಸಕ್ಕೆ ತಮ್ಮದೇ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಈ ಹಿಂದಿನ ಚುನಾವಣೆಗಳ ಕಾಲಕ್ಕೆ ಹೆಲಿಕಾಪ್ಟರ್ ತರಿಸಿದ್ದ ಬೆಳಗಾವಿಯ ಈ ಪ್ರಭಾವಿ ನಾಯಕ ಚುನಾವಣೆ ಪ್ರಚಾರಕ್ಕಾಗಿ ಮತ್ತೆ ಹೆಲಿಕಾಪ್ಟರ್ ತರಿಸುತ್ತಾರಾ ಎನ್ನುವುದು ಕಾದು ನೋಡಬೇಕು.
ಕುಂದಾ ನಗರಿ ಬೆಳಗಾವಿಯಲ್ಲಿ ಈ ಬಾರಿ ಚುನಾವಣೆಯ ಪ್ರಚಾರದ ಕಾವು ರಂಗೇರಲಿದೆ. ಸತೀಶ ಜಾರಕಿಹೊಳಿ ಪ್ರಚಾರಕ್ಕೆ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ಬಾರಿಯೂ ರಾಜ್ಯಾದ್ಯಂತ ತೆರಳಿ ಪಕ್ಷದ ಪ್ರಚಾರಕ್ಕೆ ಮುಂದಾಗುತ್ತಾರಾ ?
ಕಳೆದ ಚುನಾವಣೆ ವೇಳೆ ಅವರು ಬೆಳಗಾವಿ ನಗರ, ಯಮಕನಮರಡಿ ಕ್ಷೇತ್ರದ 8 ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದರು. ಬೆಲ್ ಕಂಪೆನಿಯ ಹೆಲಿಕಾಪ್ಟರ್ ನಲ್ಲಿ 5 ಜನ ಪ್ರಯಾಣಿಸಬಹುದಾಗಿತ್ತು. ಅಂಥ ಕಾಪ್ಟರ್ ಬಳಸಿದ್ದರು.
2013 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಪ್ರಚಾರಕ್ಕೆ ಹೆಲಿಕಾಪ್ಟರ್ ಬಳಕೆ ಮಾಡಿದ್ದರು. ಆಗ ಬಾಡಿಗೆ ರೂಪದಲ್ಲಿ ಹೆಲಿಕಾಪ್ಟರ್ ತಂದಿದ್ದರು. ಆದರೆ 2018 ರ ವಿಧಾನ ಸಭಾ ಚುನಾವಣೆ ವೇಳೆ ಸ್ವತಃ ಹೆಲಿಕಾಪ್ಟರ್ ಖರೀದಿಸಿ ಚುನಾವಣೆ ಪ್ರಚಾರ ನಡೆಸಿದ್ದರು.