ಹೆಬ್ಬಾಳ್ಕರ್ ಗಡಿಬಿಡಿ : ನಾಳೆಯೇ ಶಿವಾಜಿ ಮೂರ್ತಿ ಅನಾವರಣಕ್ಕೆ ತರಾತುರಿ !
ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧರ್ಮ ಮತ್ತು ಹಿಂದೂ ನಾಯಕರು ಎಂದರೆ ಮೊದಲಿಂದಲೂ ಅಲರ್ಜಿ. ಆದರೆ ಇದೀಗ ರಾಜಹಂಸಗಡದಲ್ಲಿ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೇಲಾಟ ನಡೆಸುತ್ತಿರುವುದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮರಾಠಿ ಭಾಷಾ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟು ದಿನಗಳವರೆಗೆ ಸುಮ್ಮನೆ ಇದ್ದು ಇದೀಗ ಏಕಾಏಕಿಯಾಗಿ ಶಿವಾಜಿ ಮೂರ್ತಿ ಉದ್ಘಾಟನೆಗೆ ಅವರು ತೋರುತ್ತಿರುವ ಇನ್ನಿಲ್ಲದ ಅತ್ಯುತ್ಸಾಹ ಒಟ್ಟಾರೆ ಇಡೀ ಕ್ಷೇತ್ರದ ಜನರ ಆಕ್ರೋಶ ಭುಗಿಲೆಳಲು ಕಾರಣವಾಗಿದೆ.
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ತಾಲೂಕಿನ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಇದೀಗ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ತರಾತುರಿ ನಡೆಸಿದ್ದಾರೆ. ಇದು ಶಿವಾಜಿ ಅಭಿಮಾನಿಗಳು ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನತೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹೆಬ್ಬಾಳ್ಕರ್ ಅವರ ಈ ಗಡಿಬಿಡಿಯ ನಿರ್ಧಾರದಿಂದ ಜನ ಈಗ ಕೆರಳಿ ಕೆಂಡವಾಗಿದ್ದಾರೆ.
ಈ ಮೊದಲು ಅವರು ಮಾರ್ಚ್ 5 ರಂದು ಕಾಂಗ್ರೆಸ್ ನಾಯಕರನ್ನು ಕರೆತಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ನಿರ್ಧರಿಸಿದ್ದರು. ಆದರೆ ಇದು ಕಾಂಗ್ರೆಸ್ ಪಕ್ಷದ ವೈಯಕ್ತಿಕ ಕಾರ್ಯಕ್ರಮವಾಗುತ್ತಿರುವುದನ್ನು ಮನಗಂಡ ಮಾಜಿ ಸಚಿವ ಹಾಗೂ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಯವರು ಹಾಗೂ ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರು ಮಾರ್ಚ್ 2 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆತಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಮುಂದಾಗಿದ್ದರು. ರಮೇಶ್ ಜಾರಕಿಹೊಳಿಯವರ ಈ ನಿರ್ಧಾರದ ವಿರುದ್ಧ ಇದೀಗ ಸಂಚು ರೂಪಿಸಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲಾಡಳಿತದಿಂದ ಆಯೋಜಿತವಾಗಿರುವ ಕಾರ್ಯಕ್ರಮಕ್ಕೂ ಒಂದು ದಿನ ಮೊದಲೇ ಅಂದರೆ ಮಾರ್ಚ್ 1 ರಂದೇ ರಾಜಹಂಸಗಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ತೀವ್ರ ತರಾತುರಿ ನಡೆಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಅವರು ಸ್ವತಃ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗೆಲುವಿಗೆ ಅಹರ್ನಿಶಿ ಶ್ರಮಿಸಿದ್ದರು. ಆದರೆ ಇದೀಗ ಈ ಐದು ವರ್ಷಗಳ ಅವಧಿಯಲ್ಲಿ ತಮ್ಮ ಒಂದು ಕಾಲದ ಗುರುವಿನ ವಿರುದ್ಧವೇ ಸೆಟೆದು ನಿಂತಿರುವುದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆ, ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಂದಿಟ್ಟ ಸಮಸ್ಯೆಯಿಂದ ರಾಜಹಂಸಗಡ ಸೇರಿದಂತೆ ಬೆಳಗಾವಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಶಾಂತವಾಗಿದ್ದ ಬೆಳಗಾವಿ ಮಹಾನಗರದಲ್ಲಿ ಇಲ್ಲದ ಸಮಸ್ಯೆ ಸೃಷ್ಟಿಸುವ ಮೂಲಕ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಜನತೆಯಲ್ಲಿ ಗೊಂದಲ ಮೂಡಿಸಲು ನೇರ ಕಾರಣವಾಗುತ್ತಿದ್ದಾರೆ. ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಅಪಾರ ಅಭಿಮಾನಿಗಳ ಕೋಪಕ್ಕೆ ಗುರಿಯಾಗುತ್ತಿದ್ದಾರೆ.
ಹೆಬ್ಬಾಳ್ಕರ್ ಮಾತಿಗೆ ಕಿವಿಯಾದ ಸಿದ್ದು, ಡಿಕೆಶಿ !
ಕಾಂಗ್ರೆಸ್ ಪಕ್ಷ ಆಯೋಜಿಸಿರುವ ರಾಜಹಂಸಗಡ ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಬುಧವಾರ ಆಗಮಿಸಲಿದ್ದಾರೆ. ಬೆಳಗಾವಿಯ ಪ್ರವಾಸ ಕೈಗೊಂಡ ಈ ಎಲ್ಲಾ ನಾಯಕರು ರಾಜಹಂಸಗಡದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ತೆರಳುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಕಾರ್ಯಕ್ರಮ ನಿಗದಿಯಾಗಿದ್ದರೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾತು ಕೇಳಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಶಿವಾಜಿ ಪ್ರತಿಮೆ ಅನಾವರಣಕ್ಕೆ ಮುಂದಾಗುತ್ತಿದ್ದಾರೆ. ಇಷ್ಟಕ್ಕೂ ಸಿದ್ದರಾಮಯ್ಯ ಜೀವನವಿಡಿ ಹಿಂದೂ ಧರ್ಮೀಯರನ್ನು ಅವಹೇಳನ ಮಾಡುತ್ತಾ ಬಂದವರು. ಇದೀಗ ಅವರನ್ನೇ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಕಾರ್ಯಕ್ರಮಕ್ಕೆ ಏಕಾಏಕಿ ಕರೆತರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.