ರಾಜಹಂಸಗಡ ಶಿವಾಜಿ ಪ್ರತಿಮೆ ಉದ್ಘಾಟನೆಯಲ್ಲಿ ಹಠ ಸಾಧಿಸಿ ಕೊನೆಗೂ ಗೆದ್ದ ಸಾಹುಕಾರ್ !
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ತಾಲೂಕು ರಾಜಹಂಸಗಡ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ ಮಾಡಿಯೇ ತೀರಬೇಕು ಎಂಬ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಯವರ ಕನಸು ಕೊನೆಗೂ ಈಡೇರಿದೆ. ಗುರುವಾರ ಶುಭ ಮುಹೂರ್ತದಲ್ಲಿ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆ ತಂದು ಛತ್ರಪತಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅವರು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾರ್ಚ್ 5 ರಂದು ಮಹಾರಾಷ್ಟ್ರದ ಕೆಲ ಕಾಂಗ್ರೆಸ್ ನಾಯಕರನ್ನು ಕರೆ ತಂದು ಶಿವಾಜಿ ಪ್ರತಿಮೆ ಅನಾವರಣಕ್ಕೆ ಮುಂದಾಗಿದ್ದರು. ಆಮಂತ್ರಣ ಪತ್ರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ಕಾಂಗ್ರೆಸ್ ಮಯ ಕಾರ್ಯಕ್ರಮದಂತೆ ಭಾಸವಾಗಿತ್ತು. ಇದಕ್ಕೆ ರಮೇಶ ಜಾರಕಿಹೊಳಿ ಸೇರಿದಂತೆ ಬೆಳಗಾವಿಯ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕರ್ನಾಟಕ ಸರಕಾರದ ಅನುದಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣವಾಗಿದೆ, ಇದನ್ನು ಸರಕಾರಿ ಕಾರ್ಯಕ್ರಮದಂತೆ ನಡೆಸಬೇಕು ಎಂದು ರಮೇಶ ಜಾರಕಿಹೊಳಿ ಪಟ್ಟು ಹಿಡಿದಿದ್ದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯಕ್ರಮ ಮಾರ್ಚ್ 5 ರಂದು ನಿಗದಿಯಾದ್ದರಿಂದ ಸಿಡಿದೆದ್ದ ಸಾಹುಕಾರ್ ಇದೀಗ ಮುಖ್ಯಮಂತ್ರಿ ಅವರನ್ನು ಒಪ್ಪಿಸಿ ಗುರುವಾರವೇ ಕಾರ್ಯಕ್ರಮವನ್ನು ನಿಗದಿಪಡಿಸಿ ಅದನ್ನು ಲೋಕಾರ್ಪಣೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮೇಲೆ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಭಾರೀ ಹಿಡಿತ ಸಾಧಿಸಿದಂತಾಗಿದೆ. ಮುಂಬರುವ ಚುನಾವಣೆಯಲ್ಲಿ ರಾಜಹಂಸಗಡ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಪ್ರತಿಷ್ಠೆಯ ಸಂಗತಿಯಾಗಲಿದ್ದು ಕೊನೆಗೂ ಸಾಹುಕಾರ್ ಕಾಂಗ್ರೆಸ್ ಶಾಸಕಿ ವಿರುದ್ಧ ವಿಜಯ ಸಾಧಿಸಿದ್ದಾರೆ.
ನಾಡಿನ ಮುಖ್ಯಮಂತ್ರಿಯೆ ಬಂದು ಶಿವಾಜಿ ಕಾರ್ಯಕ್ರಮ ಪ್ರತಿಮೆಯನ್ನು ಅನಾವರಣಗೊಳಿಸಿ ವಿಧ್ಯುಕ್ತವಾಗಿ ಹಾಗೂ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದಂತಾಗಿದೆ. ಇನ್ನು ಕಾಂಗ್ರೆಸ್ಸಿಗರು ಮಾರ್ಚ್ 5ರಂದು ಅದನ್ನು ಮತ್ತೊಮ್ಮೆ ಉದ್ಘಾಟನೆಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಕಾಂಗ್ರೆಸ್ಸಿಗರು ಏನು ಬೇಕಾದರೂ ಮಾಡಿಕೊಳ್ಳಲಿ ಎಂಬ ಅಭಿಪ್ರಾಯ ಗುರುವಾರ ರಾಜಹಂಸಗಡದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳಿಂದಲೇ ಸದಾ ಕೇಳಿ ಬಂತು.