ಗೋಕಾಕ : ರೈತರ ಕಲ್ಯಾಣಕ್ಕಾಗಿ, ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಾರ್ಯಕರ್ತರು ಸೇವಾ ಸಪ್ತಾಹ ಮೂಲಕ ವಿವಿಧ ಬಗೆಯ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾ ಗ್ರಾಮೀಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸೋಮವಾರದಂದು ಅರಭಾವಿ ಮಂಡಲ ಬಿಜೆಪಿಯ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇದೇ ಸೆ. 17 ರಂದು ಮೋದಿ ಅವರ ಜನ್ಮದಿನವಿದ್ದು, ಅಂದು ವಿವಿಧ ಕಾರ್ಯಗಳಲ್ಲಿ ತೊಡಗುವಂತೆ ಕೋರಿದರು.
ಇಂದಿನಿಂದ ಸೆ.20 ರವರೆಗೆ ಬಿಜೆಪಿಯು ಸೇವಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪ್ರತಿ ಬೂಥ್ ಮಟ್ಟದಲ್ಲಿ ಈ ಸೇವಾ ಕಾರ್ಯಕ್ರಮಗಳು ಜರುಗಲಿದ್ದು, ಇದರಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕೋರಿಕೊಂಡರು.
ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಮಾತನಾಡಿ, ಕೋವಿಡ್‍ದಂತಹ ಸಂದರ್ಭದಲ್ಲಿ ಕ್ಷೇತ್ರದ ಪ್ರತಿ ನಾಗರೀಕರ ಕಷ್ಟಗಳಿಗೆ ಸ್ಪಂದಿಸಿ, ತಮ್ಮ ಮನೆಯವರಂತೆ ಜನರನ್ನು ಕಾಳಜಿ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಜನಪರ ಸೇವೆಯನ್ನು ಶ್ಲಾಘಿಸಿದರು.
ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಬಸವರಾಜ ಮಾಳೇದವರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಬೇಕು. ಕಾರ್ಯಕರ್ತರೇ ಪಕ್ಷದ ಆಸ್ತಿಯಾಗಿದ್ದು, ನಮ್ಮಲ್ಲಿ ಮೇಲು-ಕೀಳು, ಬೇಧ-ಭಾವ ಮಾಡಿಕೊಳ್ಳದೇ ಎಲ್ಲರನ್ನು ಒಂದಾಗಿ, ಒಗ್ಗಟ್ಟಾಗಿ ತೆಗೆದುಕೊಂಡು ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ, ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ, ಸೆ. 25 ರಂದು ಪಂ.ದೀನದಯಾಳ ಉಪಾಧ್ಯಾಯ ಜಯಂತಿ, ಅ. 2 ರಂದು ಮಹಾತ್ಮಾ ಗಾಂಧೀಜಿ ಜಯಂತಿಯನ್ನು ಅರಭಾವಿ ಮಂಡಲದ ಪ್ರತಿ ಬೂಥ್ ಮಟ್ಟದಲ್ಲಿ ಆಚರಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಜಿಪಂ ಸದಸ್ಯೆ ಮತ್ತು ಅರಭಾವಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ವಾಸಂತಿ ತೇರದಾಳ, ರವಿ ಪರುಶೆಟ್ಟಿ, ಜಿಲ್ಲಾ ಪದಾಧಿಕಾರಿಗಳಾದ ಮಂಜುಳಾ ಹಿರೇಮಠ, ಆನಂದ ಮೂಡಲಗಿ, ಈರಪ್ಪ ಢವಳೇಶ್ವರ, ಮುತ್ತೆಪ್ಪ ಮನ್ನಾಪೂರ, ಬಸವರಾಜ ಇಟ್ನಾಳ, ಅರಭಾವಿ ಮಂಡಲ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣಾ ದೇವರ, ಓಬಿಸಿ ಮೋರ್ಚಾ ಅಧ್ಯಕ್ಷ ಸಂಗಣ್ಣಾ ಕಂಠಿಕಾರ, ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಎಸ್.ಟಿ ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಎಸ್.ಸಿ ಮೋರ್ಚಾ ಅಧ್ಯಕ್ಷ ನಾಗಪ್ಪ ಕುದರಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಇಕ್ಬಾಲ್ ಸರ್ಕಾವಸ್, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇನ್ನೊರ್ವ ಪ್ರ.ಕಾರ್ಯದರ್ಶಿ ಮಹಾಂತೇಶ ಕುಡಚಿ ವಂದಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಭಾರತಾಂಬೆ, ಪಂ. ದೀನದಯಾಳ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ ಮುಖರ್ಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.