ಡಿ.25 ರಿಂದ ಜ.10 ರವರೆಗೆ ರೈತರ ಕೃಷಿ ಜಮೀನುಗಳಿಗೆ 6.80 ಟಿಎಮ್‍ಸಿ ನೀರು ಬಿಡುಗಡೆ- ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಜಿಎಲ್‍ಬಿಸಿಗೆ 2400, ಜಿಆರ್‍ಬಿಸಿಗೆ 2000, ಸಿಬಿಸಿ ಕಾಲುವೆಗೆ 550 ಕ್ಯೂಸೆಕ್ಸ್ ನೀರು ಬಿಡುಗಡೆ
ಗೋಕಾಕ : ಹಿಡಕಲ್ ಜಲಾಶಯದಿಂದ ಡಿಸೆಂಬರ್ 25 ರಿಂದ 15 ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು 6.80 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಘಟಪ್ರಭಾ ಎಡದಂಡೆ ಕಾಲುವೆಗೆ 2400 ಕ್ಯೂಸೆಕ್ಸ್, ಘಟಪ್ರಭಾ ಬಲದಂಡೆ ಕಾಲುವೆಗೆ 2000 ಕ್ಯೂಸೆಕ್ಸ್ ಮತ್ತು ಸಿಬಿಸಿ ಕಾಲುವೆಗೆ 550 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುವುದು. ಡಿಸೆಂಬರ್ 25 ರಿಂದ ಜನೇವರಿ 10 ರವರೆಗೆ ಸುಮಾರು 6.80 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಗೋಕಾಕ, ಮೂಡಲಗಿ, ರಾಯಬಾಗ, ಮುಧೋಳ, ಬೀಳಗಿ, ಜಮಖಂಡಿ ತಾಲೂಕುಗಳ ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ನೀರನ್ನು ಪೋಲು ಮಾಡಬಾರದು. ಕೃಷಿ ಜಮೀನುಗಳಿಗೆ ಅನುಕೂಲವಾಗಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಹಿಡಕಲ್ ಜಲಾಶಯದಿಂದ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಅಧಿಕಾರಿಗಳಿಗೆ ಅವರು ಆದೇಶ ನೀಡಿದ್ದಾರೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.