ಕೋವಿಡ್ ರೋಗಿಗಳ ಆರೈಕೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಿ-ರಮೇಶ ಜಾರಕಿಹೊಳಿ.!
ಗೋಕಾಕ: ಕೊರೋನಾ ಮತ್ತು ಓಮಿಕ್ರಾನ್ ವೈರಾಣು ರಾಜ್ಯದಾಧ್ಯಂತ ಅತಿವೇಗವಾಗಿ ಹರಡುತ್ತಿದ್ದು, ಗೋಕಾಕ ಮತಕ್ಷೇತ್ರದಲ್ಲಿ ಮುಂಜಾಗೃತೆಯ ಜೊತೆಗೆ ರೋಗಿಗಳ ಆರೈಕೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ಕೋವಿಡ್ ಮುಂಜಾಗೃತಾ ಕ್ರಮ ಕೈಗೊಳ್ಳುವ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ೩ನೇ ಅಲೆ ಪ್ರಾರಂಭವಾಗಿದ್ದು, ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಸರಕಾರ ಸೂಚಿಸಿರುವ ಕೋವಿಡ್ ನಿಯಮಗಳನ್ನು ಪಾಲಿಸಿಬೇಕೆಂದರು.
ಈಗಾಗಲೇ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗಾಗಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದು, ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ಕಾಲಹರಣ ಮಾಡದೆ ಜನರ ಮಧ್ಯೆಹೋಗಿ ಸಮಸ್ಯೆ ಆಲಿಸುವಂತೆ ಕಿವಿಮಾತು ಹೇಳಿದ ಅವರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕುರಿತು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ವೀಕೆಂಡ್ ಕರ್ಫ್ಯೂ, ನೈಟ್ ಕರ್ಪ್ಯೂ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಜಾರಿ ತರುವಂತೆ ಸೂಚನೆ ನೀಡಿದರು.
ಕೋವಿಡ್ ೩ನೇ ಅಲೆಯ ಕುರಿತು ನಿಷ್ಕಾಳಜಿ ಮಾಡುವಂತಿಲ್ಲ. ಅಧಿಕಾರಿಗಳು ಲಸಿಕೆ ಕುರಿತು ಜನರಲ್ಲಿ ಮತ್ತಷ್ಟು ಜಾಗೃತಿ ಮೂಢಿಸಬೇಕು. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುವ ಮೂಲಕ ಕೋವಿಡ್ ಹೊಡೆದೊಡಿಸಲು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಮನವಿ ಮಾಡಿದರು.
ಸಭೆಯಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಪೌರಯುಕ್ತ ಶಿವಾನಂದ ಹಿರೇಮಠ, ಮುಖ್ಯ ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಅಂಟೀನ, ಸಿಪಿಐ ಗೋಪಾಲ ರಾಠೋಡ, ಬಿಇಓ ಜಿ ಬಿ ಬಳಗಾರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.