ಬೆಳಗಾವಿ :
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗಡಿ ವಿವಾದ ಮತ್ತೆ ತಾರಕಕ್ಕೇರಿದೆ. ಈ ಹಿನ್ನಲೆಯಲ್ಲಿ
ವಾಹನಗಳಿಗೆ ಮಸಿ ಬಳಿದಿದ್ದಲ್ಲದೇ ಹಾನಿ ಮಾಡಲಾಗಿದೆ.
ಕರ್ನಾಟಕದಲ್ಲಿ ಕನ್ನಡ ಸಂಘಟನೆಗಳು ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದಿದ್ದಾರೆ. ಮಹಾರಾಷ್ಟ್ರದಲ್ಲೂ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ನೋಂದಣಿ ಹೊಂದಿರುವ ವಾಹನಗಳ ಮೇಲೆ ಅಟ್ಟಹಾಸ ಮೆರೆದಿದ್ದಾರೆ.
ಮಹಾರಾಷ್ಟ್ರದ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭುರಾಜೇ ದೇಸಾಯಿ ಅವರಿಗೆ ಕರ್ನಾಟಕ ಪ್ರವೇಶ ನಿರಾಕರಿಸಿರುವುದನ್ನು ಪ್ರತಿಭಟಿಸಿ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ನೋಂದಣಿ ಹೊಂದಿದ ವಾಹನಗಳ ಗಾಜು ಒಡೆದ ಘಟನೆ ವರದಿಯಾಗಿದೆ.
ಪುಣೆ ಡಿಪೋದಲ್ಲಿನ ಎಂಟು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳ ಗಾಜು ಒಡೆದಿದ್ದಾರೆ.
ಒಟ್ಟಾರೆ, ಉಭಯ ರಾಜ್ಯಗಳ ನಡುವೆ ಸಂಚರಿಸುವ ಬಸ್ ಸೇರಿದಂತೆ ವಾಹನಗಳ ಮಾಲಕರು ಹಾಗೂ ಚಾಲಕರು ಇದೀಗ ಭೀತಿಯ ವಾತಾವರಣದಲ್ಲಿ ವಾಹನ ಚಲಾಯಿಸಬೇಕಾದ ಸಂದಿಗ್ಧತೆ ಎದುರಾಗಿದೆ.
ಮಹಾರಾಷ್ಟ್ರ ಸಚಿವರಿಗೆ ಕರ್ನಾಟಕ ಪ್ರವೇಶ ನಿರ್ಬಂಧಿಸಿದ್ದಕ್ಕಾಗಿ ಕರ್ನಾಟಕ ಪ್ರವೇಶಿಸುವ ಕೋಗೋನಳ್ಳಿ ಟೋಲ್ ಗೇಟ್ ಬಾಳಿ ಉದ್ದವ ಠಾಕ್ರೆ ಬಣದ ಶಿವಶೀನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇತ್ತ ಬೆಳಗಾವಿಯಲ್ಲಿ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾರಾಷ್ಟ್ರ ಸಚಿವರ ವಿರುದ್ಧ ಘೋಷಣೆ ಕೂಗಿ ಬಂಧನಕ್ಕೊಳಗಾದರು. ಜೊತೆಗೆ ಇತ್ತೀಚಿಗೆ ಬೆಳಗಾವಿಯ ಪ್ರತಿಷ್ಠಿತ ಕಾಲೇಜ್ ನಲ್ಲಿ ಕನ್ನಡ ಧ್ವಜ ಪ್ರದರ್ಶಿಸಿ ಹಲ್ಲೆಗೊಳಗಾದ ವಿದ್ಯಾರ್ಥಿಗೆ ನ್ಯಾಯ ದೊರಕಿಸಿ ಕೊಡುವಂತೆ ಮನವಿ ಮಾಡಿದರು.
ಸಂಜೆ ಮಹಾರಾಷ್ಟ್ರ ಪರವಾಗಿ ವಕಾಲತು ನಡೆಸಲು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಹೋಗಿ ಉದ್ಧಟತನ ಮೆರೆದ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಘಟನೆಯೂ ನಡೆಯಿತು.
ಒಟ್ಟಾರೆ ಕೆಲ ದಿನಗಳಿಂದ ಶಾಂತಿ ನೆಲೆಸಿದ್ದ ಬೆಳಗಾವಿಯಲ್ಲಿ ಇದೀಗ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಭಾಷಾ ವಿವಾದ ಮತ್ತೆ ಸೃಷ್ಟಿಯಾಗಿದೆ. ಗುರುವಾರ ಸುಪ್ರೀಂ ಕೋರ್ಟ್ ನಲ್ಲಿ ಉಭಯ ರಾಜ್ಯಗಳ ಗಡಿ ವಿವಾದ ವಿಚಾರಣೆಗೆ ಬರುವ ಸಾಧ್ಯತೆ ಇದೆ.