ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಶಿವಸೇನೆ ಪ್ರಲಾಪ !
ಮುಂಬೈ : ಎಂದೆಂದಿಗೂ ಸಾಧ್ಯವಿಲ್ಲದ ಹಳೆಯ ಜಪವನ್ನು ಮತ್ತೆ ಹಾಡಲು ಶಿವಸೇನೆ ಮುಂದಾಗಿದೆ.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ತನ್ನ ಹಳೆಯ ಅಜೆಂಡಾವನ್ನು ಮತ್ತೆ ಚಲಾವಣೆಗೆ ತಂದಿದೆ.
ದೆಹಲಿಯ(ಕೇಂದ್ರ ಸರ್ಕಾರ) ಬೆಂಬಲವಿಲ್ಲದೆ ಬೆಳಗಾವಿಯಲ್ಲಿ ಹಿಂಸಾಚಾರದ ಘಟನೆಗಳು ನಡೆಯುವುದಿಲ್ಲ. ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡುವಂತೆ ಉದ್ದವ ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ ರಾವತ್ ಟ್ವಿಟ್ ಮಾಡಿದ್ದಾರೆ.
ಮರಾಠಿ ಜನರು ಮತ್ತು ಮಹಾರಾಷ್ಟ್ರದ ವಾಹನಗಳ ಮೇಲೆ ದೆಹಲಿಯ ಬೆಂಬಲವಿಲ್ಲದೆ ಬೆಳಗಾವಿಯಲ್ಲಿ ದಾಳಿ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿದ್ದಾರೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅದರ ಬೆನ್ನೆಲುಬು ಮುರಿಯಲು ಹಾಗೂ ಮರಾಠಿ ಸ್ವಾಭಿಮಾನ ಕೊನೆಗಾಣಿಸುವ ಆಟ ಆರಂಭಿಸಲಾಗಿದೆ. ಬೆಳಗಾವಿಯಲ್ಲಿ ಮರಾಠಿಗರ ಮೇಲೆ ನಡೆದ ದಾಳಿಯ ಹಿಂದೆ ಈ ಸಂಚು ನಡೆದಿದೆ ಎಂದು ಅವರು ದೂರಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಗಳು ಸೋಲಾಪುರ ಮತ್ತು ಸಾಂಗ್ಲಿಯಲ್ಲಿ ಹಕ್ಕು ಸಾಧಿಸಿ ಮಹಾರಾಷ್ಟ್ರವನ್ನು ಆಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಂಜಯ ರಾವತ್ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿರುದ್ಧ ವಾಗ್ದಾಳಿ ನಡೆಸಿ ಕರ್ನಾಟಕದ ಇಂತಹ ದಾಳಿಗಳನ್ನು ಎದುರಿಸಲು ಮಹಾರಾಷ್ಟ್ರ
ಸರಕಾರ ದುರ್ಬಲವಾಗಿದೆ ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಧೈರ್ಯವಿದ್ದರೆ ವಿವಾದಿತ ಗಡಿ ಪ್ರದೇಶಗಳನ್ನು ಈ ಕೂಡಲೇ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ಮಹಾರಾಷ್ಟ್ರದ ಜನರು ಬೆಳಗಾವಿಗೆ ಹೋಗಲು ಸಿದ್ದ. ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರಿಗೆ ವಿಶ್ವಾಸ ತುಂಬಲು ತಯಾರಿದ್ದಾರೆ ಅವರು ಹೇಳಿದ್ದಾರೆ.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆನ್ನುವ ಮಹಾರಾಷ್ಟ್ರಿಗರ ವಾದ ಇಂದು ನಿನ್ನೆಯ ಬೇಡಿಕೆಯಲ್ಲ. ಆಗಾಗ ಇಂತಹ ವಿಷಯವನ್ನು ಪ್ರಸ್ತಾಪಿಸುತ್ತ ಬಂದಿದ್ದಾರೆ. ಕರ್ನಾಟಕ ಸರಕಾರ ಹಾಗೂ ಕನ್ನಡ ಹೋರಾಟಗಾರರು ಇದಕ್ಕೆ ಕಾಲಕಾಲಕ್ಕೆ ತಕ್ಕ ತಿರುಗೇಟು ನೀಡಿದ್ದಾರೆ. ಹೋರಾಟಗಾರರು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಲ್ಲ.
ಬಹು ಸಂಸ್ಕೃತಿಯ ಜನರಿರುವ ಮುಂಬೈಯನ್ನು ಮೊದಲು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ತಿರುಗೇಟು ನೀಡಿ ಬಾಯಿ ಮುಚ್ಚಿಸಿದ್ದರು.