ಯಕ್ಷಗಾನ ರಾಜ್ಯ ಸಮ್ಮೇಳನದ ನಂತರ……
ರಾಜ್ಯ ಸರಕಾರದಿಂದಲೇ ಪ್ರಾಯೋಜಿತವಾದ ಯಕ್ಷಗಾನ ರಾಜ್ಯ ಸಮ್ಮೇಳನ ಮುಗಿದಿದೆ. ನಾನು ಆ ಸಮ್ಮೇಳನಕ್ಕೆ ಹೋಗಿಲ್ಲವಾದ್ದರಿಂದ ಅದರ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತ ಪಡಿಸಲಾರೆ. ಸಮ್ಮೇಳನಕ್ಕೆ 15 ದಿವಸ ಇರುವಾಗಲೇ ನನ್ನ ಕೆಲವು ವಿಚಾರಗಳನ್ನು ಬರೆದಿದ್ದೆ ಅಷ್ಟೇ. ಅದನ್ನು ಸಮ್ಮೇಳನಾಧ್ಯಕ್ಷರಿಗೂ , ಕಾರ್ಯಾಧ್ಯಕ್ಷರಿಗೂ, ಇತರ ಹಲವು ಆಸಕ್ತರಿಗೂ ಕಳಿಸಿದ್ದೆ. ಕೆಲವರು ಪ್ರತಿಕ್ರಿಯೆಗಳನ್ನೂ ಕಳಿಸಿದ್ದಾರೆ.
ಸಮ್ಮೇಳನದ ಬಗ್ಗೆ ಅಲ್ಲಿಗೆ ಹೋದ ಕೆಲವರು ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿ ಒಟ್ಟಾರೆ ಚೆನ್ನಾಗಿಯೇ ಆಯಿತೆಂದು ಅಭಿಪ್ರಾಯಪಟ್ಟಿದ್ದಾರೆ. ಸಮ್ಮೇಳನ ಉಡುಪಿಯಲ್ಲಿ ಆಗಿದ್ದೇ ಸರಿ. ಉಡುಪಿ/ ದಕ ಗಳಲ್ಲಿ ನಮ್ಮ ಉತ್ತರಕನ್ನಡಕ್ಕಿಂತ ಉತ್ತಮವಾಗಿ / ವ್ಯವಸ್ಥಿತವಾಗಿ ಸಂಘಟನೆ ಮಾಡುತ್ತಾರೆ. ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.
ಸಾಮಾನ್ಯವಾಗಿ ಯಾವುದೇ ಇಂತಹ ಬೃಹತ್ ಸಮ್ಮೇಳನಗಳು ವಿವಾದಾತೀತವಾಗಿರುವದಿಲ್ಲ ಮತ್ತು ಎಲ್ಲರಿಗೂ ಸಮಾಧಾನವಾಗುವಂತೆ ಮಾಡಲು ಯಾರಿಗೂ ಸಾಧ್ಯವಾಗುವದಿಲ್ಲ. ಹೆಚ್ಚುಕಡಿಮೆ ಆಗಿಯೇ ಆಗುತ್ತದೆ. ಸಾಧ್ಯವಾದಷ್ಟು ಕಡಿಮೆ ತಪ್ಪು ಮಾಡಲು ನೋಡಬೇಕಾಗುತ್ತದೆ ಅಷ್ಟೇ.
ರಾಜ್ಯ ಯಕ್ಷಗಾನ ಸಮ್ಮೇಳನವೂ ಅದಕ್ಕೆ ಹೊರತೇನಲ್ಲ. ಕೆಲವೊಂದು ಆಗಬೇಕಾದ ಸಂಗತಿಗಳು ಆಗಿರಲಿಕ್ಕಿಲ್ಲ. ಅದು ಸರಕಾರಿ ವ್ಯವಸ್ಥೆಯಡಿ ನಡೆದ ಸಮ್ಮೇಳನವಾದ್ದರಿಂದ ಅದಕ್ಕೆ ಕೆಲವು ಮಿತಿಗಳೂ ಇರುತ್ತವೆ. ಸಮ್ಮೇಳನದಲ್ಲೂ, ಭಾಷಣಗಳಲ್ಲೂ ಬಿಟ್ಟುಹೋದ ಹಲವು ಸಂಗತಿಗಳಿರಬಹುದು. ಆದರೆ ಒಟ್ಟಿನಲ್ಲಿ ಸಮ್ಮೇಳನದ ಫಲಶ್ರುತಿಯೇನು, ಭವಿಷ್ಯದಲ್ಲಿ ಆಗುವ ಪರಿಣಾಮಗಳೇನು ಎನ್ನುವದು ಈಗ ಮುಖ್ಯವಾಗುತ್ತದೆ. ಸಮ್ಮೇಳನದ ಅಂತ್ಯಕ್ಕೇನಾದರೂ ನಿರ್ಣಯಗಳನ್ನು ಕೈಕೊಳ್ಳಲಾಗಿದೆಯೇ ಹೇಗೆಂಬುದು ನನಗೆ ತಿಳಿಯದು. ಕೊನೆಯ ಪಕ್ಷ ಸರ್ವಾಧ್ಯಕ್ಷರ ಭಾಷಣದಲ್ಲಿ ಹೇಳಲಾದ ಕೆಲವು ಅಂಶಗಳನ್ನಾದರೂ ಕಾರ್ಯ ರೂಪಕ್ಕೆ ತರಲು ಅವರೇ ಹೇಳಿದಂತೆ ಒಂದು ಕಾರ್ಯಪಡೆ ರಚಿಸಿ , ಕಾರ್ಯಾನುಷ್ಠಾನಕ್ಕೆ ಪ್ರಯತ್ನ ನಡೆಸಿದರೆ ಸಮ್ಮೇಳನಕ್ಕಾಗಿ 2-3 ಕೋಟಿ ರೂ. ಖರ್ಚು ಮಾಡಿದ್ದಕ್ಕೊಂದು ಅರ್ಥ ಬಂದೀತು ಮತ್ತು ಕಲೆಗೂ ಒಳಿತಾದೀತು. ಕನ್ನಡ ಮತ್ತು ಸಂಸ್ಕೃತಿ ಸಚಿವರೇ ಮುಂದಾಗಿ ಸಮ್ಮೇಳನ ಮಾಡಿಸಿರುವುದರಿಂದ ಅಂತಹದೇನಾದರೂ ಆದೀತೇ ಎಂದು ಕಾದು ನೋಡಬೇಕಾಗಿದೆ.
ಆದರೆ, ಸದ್ಯವೇ ಚುನಾವಣೆ ನಡೆಯಲಿರುವುದರಿಂದ ಮತ್ತು ಮುಂದೆ ಯಾವ ಸರಕಾರ ಅಧಿಕಾರಕ್ಕೆ ಬರುತ್ತದೆನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲದಿರುವುದರಿಂದ ಇದೇ ಮೊದಲ ಮತ್ತು ಕೊನೆಯ ಸಮ್ಮೇಳನವೂ ಆದೀತೇ ಎಂದು ಈಗಲೇ ಊಹಿಸಲಾಗದು.
ನಮ್ಮಂಥವರ ಬಳಿ ಇದಕ್ಕೆ ಸಂಬಂಧಿಸಿದಂತೆ ಹೇಳಲು ವಿಚಾರಗಳಿದ್ದರೂ ಅದನ್ನು ಕೇಳುವವರು ಯಾರು? ಯಾರಿಗೆ ಬೇಕಾಗಿದೆ ನಮ್ಮ ವಿಚಾರ ? ನಾನು 50/60 ವರ್ಷಗಳಿಂದ ಮಾಧ್ಯಮ ಮತ್ತು ಯಕ್ಷಗಾನ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದವನು. ಪುಸ್ತಕಗಳನ್ನೂ ಬರೆದಿದ್ದೇನೆ. ಅಕಾಡೆಮಿ ಪ್ರಶಸ್ತಿಗಳೂ ಬಂದಿವೆ. ಆದರೆ ನಮಗೆ ಅವಕಾಶಗಳು ಹಾಗಿರಲಿ, ಒಂದು ಆಮಂತ್ರಣ ಪತ್ರಿಕೆಯೂ ಇರುವುದಿಲ್ಲ. ಇದನ್ನೆಲ್ಲ ನಾವು ಪ್ರಶ್ನಿಸಿದರೆ ನಮ್ಮ ಮೇಲೇ ಸಿಟ್ಟು ಮಾಡಿಕೊಳ್ಳುತ್ತಾರೆ. ಹೊರತು ತಮ್ಮ ತಪ್ಪು ಒಪ್ಪಿಕೊಳ್ಳುವುದಿಲ್ಲ. ಅದು ನನಗೆ ಗೊತ್ತಿರುವುದರಿಂದಲೇ ನಾನು ಈ ಬಗ್ಗೆ ಏನನ್ನೂ ಹೇಳದಿರಲು ನಿರ್ಧರಿಸಿದ್ದೇನೆ. ಸಮ್ಮೇಳನ ಚೆನ್ನಾಗಿ ಆಯಿತಲ್ಲ. ಅದರಿಂದ ಯಕ್ಷಗಾನಕ್ಕೆ ಒಳಿತಾದರೆ ಸಾಕು.
# ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಕಲಾವಿದರು, ಕವಿ