Breaking News

ಇಂದು ಶ್ರೀ ರಾಮನವಮಿಯ ಸುದಿನ

Spread the love

ಇಂದು ಶ್ರೀ ರಾಮನವಮಿಯ ಸುದಿನ

“ಆಪದಾಂ ಅಪಹರ್ತಾರಂ ದಾತಾರಂ ಸರ್ವಸಂಪದಾಂ
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ”
ಹತ್ತು ದಿಕ್ಕುಗಳಿಗೆ ರಥವನ್ನು ಓಡಿಸುವಂಥವನಾಗಿ, ‘ದಶರಥ’ ಎಂಬ ಹೆಸರು ಪಡೆದು, ಯಾರಿಂದಲೂ ಯುದ್ಧಮಾಡಿ ಗೆಲ್ಲಲಾಗದ ‘ಅಯೋಧ್ಯ’ ರಾಜ್ಯದ ರಾಜನಾಗಿ, ಸಾವಿರಾರು ವರ್ಷ ಆಳಿದ ರಾಜಾ ದಶರಥನಿಗೆ ಮಕ್ಕಳಿಲ್ಲ ಎಂಬ ಚಿಂತೆ ಕಾಡುತ್ತಿತ್ತು. ಕುಲಗುರುಗಳಾದ ವಸಿಷ್ಠರ ಸಲಹೆ ಮೇರೆಗೆ ಇದರ ಪರಿಹಾರಕ್ಕಾಗಿ ‘ಋಷ್ಯಶೃಂಗ’ ಮುನಿಗಳನ್ನು ಮುಂದಿಟ್ಟುಕೊಂಡು ಮಾಡಿದ ‘ಪುತ್ರಕಾಮೇಷ್ಠಿಯಾಗದ’ ಫಲವಾಗಿ, ಅವನ ಪತ್ನಿಯರಾದ ಕೌಸಲ್ಯಾ, ಸುಮಿತ್ರ ಮತ್ತು ಕೈಕೇಯಿ ಇವರಿಂದ ಕ್ರಮವಾಗಿ ರಾಮ, ಲಕ್ಷ್ಮಣ, ಮತ್ತು ಭರತ, ಶತ್ರುಘ್ನ ರೆಂಬ ನಾಲ್ಕು ಮಕ್ಕಳನ್ನು ಪಡೆಯುತ್ತಾನೆ. ಈ ಮಕ್ಕಳ ತುಂಟಾಟ, ಚೇಷ್ಟೆಗಳು ವಿಶ್ವದ ಎಲ್ಲಾ ದಿಕ್ಕುಗಳಲ್ಲಿ ಪ್ರಖ್ಯಾತವಾಗಿತ್ತು.

ಆಗಲೇ ರಾಮನಿಗೆ ಹದಿನೈದು ವರ್ಷ ತುಂಬಿತು. ಲೋಕೋದ್ಧಾರದ ಕೆಲಸಗಳಿಗಾಗಿ ಗುರು ವಿಶ್ವಾಮಿತ್ರರು ಶಿಷ್ಯನನ್ನು ಹುಡುಕಿಕೊಂಡು ಬಂದಿದ್ದಾರೆ. ಅವರ ತೇಜಸ್ಸಿನಿಂದಲೇ ರಕ್ಕಸರನ್ನು ಸುಟ್ಟುಹಾಕುವ ಶಕ್ತಿ ಇದ್ದರೂ, ಕ್ಷತ್ರಿಯರ ತೋಳ್ಬಲಗಳಿಂದಲೇ ಕೆಲಸ ಆಗಬೇಕು ಎಂಬ ಕಾರಣದಿಂದ ರಾಕ್ಷಸರನ್ನು ನಿಗ್ರಹಿಸಲು ರಾಮ-ಲಕ್ಷ್ಮಣರನ್ನು ಕಳಿಸಿಕೊಡು ಎಂದು ದಶರಥನನ್ನು ಕೋರಿದಾಗ, “ನನ್ನ ಪ್ರಾಣ ಹೋದರೂ ಪರವಾಗಿಲ್ಲ ನಾನೇ ಬಂದು ರಾಕ್ಷಸರನ್ನು ನಿಗ್ರಹಿಸಿ ಯಜ್ಞಕಾರ್ಯಕ್ಕೆ ಅನುಕೂಲ ಮಾಡಿಕೊಡುತ್ತೇನೆ” ಎಂದನು. ಅದಕ್ಕೆ ವಿಶ್ವಾಮಿತ್ರರು, ಪ್ರಾಣ ಕೊಟ್ಟು ಯಜ್ಞಕಾರ್ಯ ಉಳಿಸುವುದಲ್ಲ, ರಾಕ್ಷಸರ ಪ್ರಾಣ ತೆಗೆದು ಯಜ್ಞ ಮುಂದುವರಿಯಬೇಕು. ಆದುದರಿಂದ ರಾಮ-ಲಕ್ಷ್ಮಣರನ್ನು ಕಳುಹಿಸು ಎಂದರು. ಈಗ ವಸಿಷ್ಠರು ಮುಂದೆ ಬಂದು “ಮಹಾರಾಜ, ರಾಮನನ್ನು ಕಳಿಸಲು ಹಿಂದೇಟು ಹಾಕಬೇಡ ವಿಶ್ವಾಮಿತ್ರರು ಮಹಾ ತಪಸ್ವಿಗಳು ಇವರೊಂದಿಗೆ ರಾಮನನ್ನು ಕಳಿಸುವುದು ತುಂಬಾ ಸಾರ್ಥಕ್ಯವಿದೆ ಹಾಗಾಗಿ ಕಳಿಸಿಕೊಡು” ಎಂದು ಹೇಳಿದಾಗ ವಿಶ್ವಾಮಿತ್ರರ ಜೊತೆ ರಾಮಲಕ್ಷ್ಮಣರನ್ನು ಒಲ್ಲದ ಮನಸ್ಸಿನಿಂದ ಕಳಿಸಿದನು.

ರಾಮಲಕ್ಷ್ಮಣರಿಗೆ ಬೇಸರವಾಗದಂತೆ ದಾರಿಯುದ್ದಕ್ಕೂ ಅನೇಕ ತೀರ್ಥಕ್ಷೇತ್ರ ಪರಿಚಯ, ಹಾಗೂ ಸ್ಥಳ ಮಹಿಮೆಗಳನ್ನು ಹೇಳುತ್ತಾ ಸಾಗಿದರು. ರಾಮಲಕ್ಷ್ಮಣರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಅಲ್ಲಲ್ಲಿ ಪ್ರಶ್ನೆಗಳನ್ನು ಕೇಳುತ್ತಾ, ಉತ್ತರಗಳನ್ನು ಪಡೆಯುವುದು, ಗೊತ್ತಿಲ್ಲದೆ ಇರುವುದನ್ನು ವಿವರಿಸುವುದು, ಹೀಗೆ ವಿಶ್ವಾಮಿತ್ರರಿಂದ ಒಳ್ಳೆಯ ಶಿಕ್ಷಣ ಸಿಗುತ್ತಿತ್ತು.
ಈ ರೀತಿ ಕಲಿಯುವ ಶಿಕ್ಷಣದಿಂದಾಗಿ ಒಳ್ಳೆಯ ವ್ಯಕ್ತಿತ್ವ ದೊರೆಯುತ್ತದೆ.ಮುಂದೆ ಸಾಗಿದಂತೆ ರಾಮ ಲಕ್ಷ್ಮಣರು ‘ತಾಟಕಿ’ ಮುಂತಾದ ರಾಕ್ಷಸರನ್ನು ಕೊಂದು ಹಾಕಿದರು. ಹೋಗುತ್ತಿರುವಾಗ ದಾರಿಯಲ್ಲಿ ಒಂದು ಘಟನೆ ನಡೆಯುತ್ತದೆ. ಗೌತಮರ ಶಾಪದಿಂದ ಕಲ್ಲಾದ ಅಹಲ್ಯೆಯ ಶಾಪವಿಮೋಚನೆ ಮಾಡಿದ ರಾಮನು ಅಹಲ್ಯೆಯನ್ನು ಗೌತಮರೊಂದಿಗೆ ಒಂದು ಮಾಡಿದನು. ಒಂದು ಮಾಡುವುದು ರಾಮನ ವಿಶೇಷ ಗುಣವಾಗಿದೆ. ವಿಶ್ವಾಮಿತ್ರರು ರಾಮ-ಲಕ್ಷ್ಮಣರಿಗೆ ‘ಬಲ- ಅತಿಬಲ’ ಎಂಬ ವಿದ್ಯೆ ಕೊಟ್ಟು, ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ರಾಮನಿಗೆ ಧಾರೆಯೆರೆದರು. ದೇವರಾದ ರಾಮನು, ಮಾನವನಾಗಿ ಅವತರಿಸಿ ಗುರುಗಳಿಂದ ಶಿಕ್ಷಣ ಪಡೆಯುವುದರ ಮೂಲಕ ಸಿದ್ಧಿಯನ್ನು ಪಡೆಯಬೇಕು ಎಂಬುದನ್ನು ಲೋಕಕ್ಕೆ ತೋರಿಸಿಕೊಟ್ಟನು.

ಮಿಥಿಲಾ ನಗರದ ಜನಕನ ಆಸ್ಥಾನದಲ್ಲಿ ‘ಸೀತಾಸ್ವಯಂವರ’ ಇದೆ ಎಂಬ ಸುದ್ದಿ ಕೇಳಿ ವಿಶ್ವಾಮಿತ್ರರು ರಾಮ ಲಕ್ಷ್ಮಣರನ್ನು ಕರೆದುಕೊಂಡು ಜನಕನ ಆಸ್ಥಾನಕ್ಕೆ ಹೊರಟರು. ರಾಮನು ನಡೆದು ಹೋಗುತ್ತಿದ್ದರೆ, ಅವನ ಗಾಂಭೀರ್ಯ, ಸೌಂದರ್ಯ, ಧೀರ ನಡಿಗೆ, ಇವುಗಳನ್ನು ನೋಡಿದವರು ಅಲ್ಲಿ-ಇಲ್ಲಿ ಹೇಳುತ್ತಲೇ, ಅರಮನೆಯಲ್ಲಿ ಜನಕನ ಕಿವಿಯ ತನಕ ಬಿದ್ದಿತು. ತಾನು ಬಯಸಿದಂಥ ಭಾಗ್ಯ ತನ್ನ ಮನೆ ಬಾಗಿಲಿಗೆ ಬರುತ್ತಿದೆ, ಎಂದು ಜನಕನು ಆನಂದಗೊಂಡನು. ಅವರನ್ನು ಸ್ವಾಗತಿಸಲು ಮೆರವಣಿಗೆಯೊಂದಿಗೆ ತಾನೇ ಮುಂದೆ ನಿಂತು ಅವರ ಬರುವಿಕೆಗಾಗಿ ಕಾಯುತ್ತಿದ್ದನು. ರಾಮನ ಚೆಲುವನ್ನು ಕಣ್ತುಂಬಿಕೊಳ್ಳಲು ಜನಸ್ತೋಮವೇ ನೆರೆದಿತ್ತು. ವಿಶ್ವಾಮಿತ್ರರೊಡಗೂಡಿ ರಾಮಲಕ್ಷ್ಮಣರು ಬಂದರು. ಜನಕನು ಅವರನ್ನು ಪ್ರೀತಿಯಿಂದ ಸ್ವಾಗತಿಸಿ ಅವರಿಗೆ ಎಲ್ಲಾ ವ್ಯವಸ್ಥೆ ಮಾಡಿದನು.

ಜನಕನ ಹಿರಿಯರಿಗೆ ‘ಮಹಾಶಿವನ’ ಕೃಪೆಯಿಂದ ‘ ಶಿವಧನುಸ್ಸು ಲಭಿಸಿತ್ತು’.
ಅದು ತನ್ನಲ್ಲಿ ಇರುವಂತೆ ಶಿವನಲ್ಲಿ ಪ್ರಾರ್ಥಿಸಿದ್ದನು. ಹೀಗಾಗಿ ‘ಶಿವಧನುಸ್ಸು’ ಜನಕನ ಅರಮನೆಯಲ್ಲಿಯೇ ಇತ್ತು. ಜನಕ ಮಹಾರಾಜನ ಆಶಯ ಹೀಗಿತ್ತು. ತನ್ನ ಮಗಳು ಸೀತೆ ಅತ್ಯಂತ ಸುಂದರಿ, ವಿನಯಶೀಲೆ, ಅವಳನ್ನು ಮದುವೆಯಾಗುವ ವರನು “ಶಿವಧನುಸ್ಸನ್ನು ಹೆದೆಯೇರಿಸಿ ಟಂಕಿಸಿದರೆ” ಮದುವೆ ಮಾಡಿಕೊಡುವುದಾಗಿ ಶರತ್ತನ್ನು ಇಟ್ಟಿದ್ದ. ಇದಕ್ಕೆ ಬ್ರಹ್ಮನ ವರವು ಇತ್ತು. ಯಾರೂ ಅತಿಕ್ರಮಣದಿಂದ ಸೀತೆಯನ್ನು ಕರೆದೊಯ್ಯುವಂತಿಲ್ಲ.
ಐದು ಸಾವಿರ ಜನಗಳ ಸಹಾಯದಿಂದ ಅಂಥ ಶಿವಧನುಸ್ಸನ್ನು ತಂದು ಸ್ವಯಂವರದ ಸಭಾಮಂದಿರದಲ್ಲಿ ಇಡಿಸಲಾಗಿತ್ತು.

ಸ್ವಯಂವರದ ದಿನ ಬಂದಿತು. ಘಟಾನುಘಟಿ ರಾಜಾಧಿರಾಜರೆಲ್ಲ ಸೇರಿದ್ದಾರೆ.
ಯಾರು ಎಷ್ಟೇ ಪ್ರಯತ್ನಿಸಿದರೂ, ಶಿವಧನಸ್ಸನ್ನು ಅಲುಗಾಡಿಸಲಾಗಲಿಲ್ಲ. ಆಗ ಶ್ರೀರಾಮನು, ಗುರುಗಳ ಅನುಮತಿ, ಜನಕ ಮಹಾರಾಜನ ಒಪ್ಪಿಗೆ ಪಡೆದು,
ಸಭಿಕರಿಗೆಲ್ಲಾ ವಿನಯದಿಂದ ವಂದಿಸಿ, ಧನಸ್ಸನ್ನು ಎಡಗೈಯಿಂದ ಎತ್ತಿ, ಹಗ್ಗವನ್ನು ಮೇಲಕ್ಕೆ ಎಳೆಯುತ್ತಿದ್ದಾನೆ. ರಾಮ ಹೆದೆ ಏರಿಸಿದಾಗಲೇ ಅಲ್ಲಿ ಕುಳಿತಿದ್ದವರ ಹುಬ್ಬು ಮೇಲೇರಿತು, ಎಲ್ಲರಿಗೂ ಆಶ್ಚರ್ಯ, ಮೆಚ್ಚುಗೆ, ಕಿಚ್ಚು, ರಚ್ಚು, ಮುಖದಲ್ಲಿ ಎದ್ದು ಕಾಣುತ್ತಿತ್ತು. ಇಂತಹ ಅಸಾಮಾನ್ಯ ಕೆಲಸ ಮಾಡಿದವನು ಸಾಮಾನ್ಯನಲ್ಲ ಎಂಬ ಅರಿವಾಯಿತು. ರಾಮನು ಧನಸ್ಸನ್ನು ಎತ್ತಿ ಮುರಿದಾಗ, ಆ ರಭಸಕ್ಕೆ ಸಭೆಯಿಂದ ಹೊರಟಿದ್ದವರ, ಕುಳಿತಿದ್ದವರ ಮೈ ಮೇಲಿನ ಬಟ್ಟೆಗಳೆಲ್ಲ ಕೆಳಗೆ ಬಿದ್ದಿತು. ಮೋಡಗಳು ತುಂಡುತುಂಡಾದಂತೆ, ಬೆಟ್ಟಗಳು ಕಡಿದು ಬಿದ್ದಂತೆ, ಈ ಸದ್ದು ಎಲ್ಲರ ಎದೆಯನ್ನು ಬಡಿದೆಬ್ಬಿಸಿತು.

ಶ್ರೀರಾಮನು ಧನಸ್ಸನ್ನು ಎತ್ತಿ ಮುರಿದ ಕಾರಣ, ಲೋಕದಲ್ಲಿ ರಾಮನ ಬಲವನ್ನು ಮತ್ತಷ್ಟು ಹೆಚ್ಚಿಸಿತು. ‘ಜಗತ್ತಿನ ಬೆಳಕು ರಾಮ’ ಎಂಬಂತೆ ಎಲ್ಲರ ಮನಸ್ಸಿನಲ್ಲಿ ರಾಮನೇ ತುಂಬಿದನು. ಜನಕನು ಸಂತೋಷಗೊಂಡನು. ಕಮಲ ಪುಷ್ಪದ ವರಮಾಲೆಯನ್ನು ಹಿಡಿದು ಬಂದ ಸೀತೆ ರಾಮಚಂದ್ರನ ಕೊರಳಿಗೆ ಹಾರ ಹಾಕಿದಳು. ರಾಮನ ಕಣ್ಣಲ್ಲಿ ಕಣ್ಣಿಟ್ಟು ಅವನನ್ನೇ ಸೀತೆ ನಾಚಿಕೆಯಿಂದ ನೋಡಿ, ಇನ್ನು ಮುಂದೆ ನಾನು ನಿನ್ನವಳು ಎಂಬುದನ್ನು ತಿಳಿಸಿದಳು. ರಾಮನೂ ಸಹ ನಕ್ಕು ನೀನು ಎಂದಿಗೂ ನನ್ನವಳು ಎಂದು ನಗುನಗುತ್ತಾ ಕಣ್ಣಿಂದಲೇ ಹೇಳಿದ. ಈ ಕಣ್ಣಿನ ಮಾತುಗಳನ್ನು ವಿಶ್ವಾಮಿತ್ರ ಜನಕರು ಗಮನಿಸಿ, ತಮ್ಮ ಬದುಕು ಸಾರ್ಥಕವಾಯಿತೆಂದು ಕೊಂಡು ಆನಂದ ಬಾಷ್ಪ ಸುರಿಸಿದರು.

ಇಡೀ ಲೋಕವೇ ಕಾಯುತ್ತಿದ್ದ ರಾಮ-ಸೀತೆಯರ ಸ್ವಯಂವರ ಮುಗಿಯಿತು. ಈಗ ಜನಕ ಮಹಾರಾಜನು, ವಿಶ್ವಾಮಿತ್ರರಲ್ಲಿ ಮದುವೆ ಪ್ರಸ್ತಾಪ ಎತ್ತಿದಾಗ ರಾಮನು ಮುಂದೆ ಬಂದು ನನ್ನ ಹಿರಿಯರೆಲ್ಲ ಬರಬೇಕು. ತಂದೆ-ತಾಯಿ ಗಳಿದ್ದರೆ ಮಾತ್ರ ಮದುವೆ ಕಾರ್ಯ ಪೂರ್ಣತೆಯನ್ನು ಕಾಣುವುದು ಎಂದನು. ವಿಶ್ವಾಮಿತ್ರರದು ಇದೇ ಅಭಿಪ್ರಾಯವಾಗಿತ್ತು. ಜನಕನನ್ನು ಕುರಿತು, ನಿನಗೆ ಇನ್ನೂ ಒಬ್ಬ ಮಗಳಿದ್ದಾಳೆ. ಅಲ್ಲದೆ ಇಕ್ಷುಮತಿ ತೀರದ ಸಾಂಕಾಶ ದೇಶದ ನಿನ್ನ ತಮ್ಮ ಕುಶಧ್ವಜ ರಾಜನಿಗೂ ಇಬ್ಬರು ಮಕ್ಕಳಿದ್ದಾರೆ. ಅವರನ್ನು ಕರೆತಂದು ಒಂದೇ ಮಂಟಪದಲ್ಲಿ ಫಲ್ಗುಣಿ ನಕ್ಷತ್ರ ಕೊಡುವ ಸಮಯದಲ್ಲಿ ಎಲ್ಲರ ಮದುವೆಯನ್ನು ಮಾಡಿದರೆ ಒಳ್ಳೆಯದಾಗುತ್ತದೆ ಎಂದು ವಿಶ್ವಾಮಿತ್ರರು ಹೇಳಿದರು. ದಶರಥ ಹಾಗೂ ಅವನ ಪರಿವಾರದವರನ್ನು ಕರೆತರಲು ಶೀಘ್ರವಾಗಿ ಓಡುವ ಕುದುರೆಗಳನ್ನು ಸಿದ್ಧಪಡಿಸಿ ದೂತರನ್ನು ಕಳಿಸಿದರು.
ರಾಮನ ಯೋಚನೆಯಲ್ಲೇ ಕಳೆಯುತ್ತಿದ್ದ ,ದಶರಥನಿಗೆ ರಾಮನ ಕಲ್ಯಾಣದ ವಿಷಯ ಮನಸ್ಸಿಗೆ ಆನಂದ ತಂದಿತು. ಸಕುಟುಂಬ ಪರಿವಾರದ ಸಮೇತ ‘ಮಿಥಿಲಾ’ ಪಟ್ಟಣಕ್ಕೆ ಬಂದನು.

‘ಗೌತಮರು ಮತ್ತು ಅಹಲ್ಯೆ’ಯನ್ನು ಒಂದು ಮಾಡಿದ, ರಾಮನ ಮೇಲಿನ ಕೃತಜ್ಞತೆಯಿಂದ ಗೌತಮರ ಮಗ ‘ಶತಾನಂದರು’, ದಶರಥನ ಪರಿವಾರವನ್ನು ಸ್ವಾಗತಿಸಲು ಸಂತೋಷದಿಂದ ಕಾದಿದ್ದರು. ಸೀತಾ ರಾಮಚಂದ್ರರ ವಿವಾಹದ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿದ್ದರು. ಮದುವೆಯ ಮಂಗಳಕಾರ್ಯವನ್ನು ನೆರವೇರಿಸುವ ಸೂತ್ರವನ್ನು ತಾವು ನಡೆಸಿ ಕೊಡುತ್ತೇವೆಂದು ಕುಲಪುರೋಹಿತರಾದ ವಸಿಷ್ಠರು , ವಿಶ್ವಾಮಿತ್ರ ರಲ್ಲಿ ಕೇಳಿದಾಗ, “ನೀವು ಕುಲಪುರೋಹಿತರು ಇದನ್ನು ನೀವೇ ಮಾಡಬೇಕು”ಎಂದು ವಿಶ್ವಾಮಿತ್ರರಿಗೆ ಅನುಮತಿ ಕೊಟ್ಟರು. ಹೀಗೆ ಒಬ್ಬರಿಗೊಬ್ಬರು ಗೌರವಿಸುವ ಸಂಪ್ರದಾಯ ಅಂದಿನದಾಗಿತ್ತು.

ಋಷಿ ಮುನಿಗಳಿಗೆ ಹಾಗೂ ದಶರಥನ ಪರಿವಾರದವರಿಗೆ ಜನಕಮಹಾರಾಜ ಮತ್ತೊಮ್ಮೆ ವಂದಿಸಿದನು. ಅವರಿಗೆಲ್ಲ ಅರ್ಘ್ಯಪಾದ್ಯಾದಿಗಳನ್ನಿತ್ತು, ಆಸನದ ವ್ಯವಸ್ಥೆ ಮತ್ತು ಮಧುಪರ್ಕವನ್ನು ಕೊಟ್ಟು, ವಸ್ತ್ರೋಪಚಾರ, ಉಳಿಯುವ ವ್ಯವಸ್ಥೆಗಳು, ಹೀಗೆ ಎಲ್ಲವನ್ನೂ ದಶರಥನ ಪರಿಹಾರಕ್ಕೆ ಲೋಪ ಬರದಂತೆ ಅತಿಥಿ ಸತ್ಕಾರವನ್ನು ಮಾಡಿದನು. ‘ಧರ್ಮ’ ಸಂಭಾಳಿಸುವುದನ್ನು ಮತ್ತು ‘ಆತಿಥ್ಯ’ ಮಾಡುವುದನ್ನು ಜನಕನಿಂದ ತಿಳಿಯಬೇಕು. ಎಂದು ದಶರಥ ಮತ್ತು ವಸಿಷ್ಠರು ಹೊಗಳಿದರು.

ಜನಕನ ತಮ್ಮ ಕುಶಧ್ವಜನ ಮಕ್ಕಳು ಶೃತಿ ಕೀರ್ತಿ, ಮಾಂಡವೀಯರು ಬರುತ್ತಲೇ ಪರಸ್ಪರರ ಪರಿಚಯ ಮಾಡಿಸಿದರು. ಜನಕನ ಮೂಲ ಹೆಸರು ಸೀರಧ್ವಜ, ಜನಕ ಎನ್ನುವುದು ಪರಂಪರೆಯಿಂದ ಬಂದ ಹೆಸರು. ಸೀರ ಧ್ವಜ ಯಜ್ಞ ನಡೆಸುವುದಕ್ಕಾಗಿ ಹೊಲವನ್ನು ಅಗೆಯುತ್ತಿದ್ದಾಗ ಮಧ್ಯದಿಂದ ಮೇಲೆದ್ದು ಬಂದವಳು ‘ಸೀತೆ’. ಪುಟ್ಟ ಮಗು ಆದ್ದರಿಂದ ಅಯೋನಿಜೆ ಎನಿಸಿದಳು. ‘ಸೀರತಹಜಾತ ‘ ಅಂದರೆ ಸೀರಧ್ವಜನ ಮಗಳು ಸೀತೆ ಆದಳು.
ಇವಳ ಜೊತೆ ಜನಕನ ಇನ್ನೊಬ್ಬ ಪುತ್ರಿ ಊರ್ಮಿಳೆ. ಸೀತಾರಾಮರ ಕಲ್ಯಾಣದ ಜೊತೆಯಲ್ಲಿ, ಲಕ್ಷ್ಮಣನಿಗೆ ಊರ್ಮಿಳೆ, ಭರತನಿಗೆ ಮಾಂಡವಿ, ಮತ್ತು ಶತ್ರುಘ್ನನನೀಗೆ ಶೃತಿಕೀರ್ತಿಯರನ್ನು ಕೊಟ್ಟು ,ಅದ್ದೂರಿಯಾಗಿ ವಿವಾಹದ ವಿಧಿ ವಿಧಾನಗಳನ್ನು ವಿಶ್ವಾಮಿತ್ರರು, ವಸಿಷ್ಠರ ಸಮ್ಮುಖದಲ್ಲಿ ನೆರವೇರಿಸಿದರು. ಅಗ್ನಿಯನ್ನು ಪ್ರತಿಷ್ಠಾಪಿಸಿ ದೇವತೆಗಳನ್ನು ಆಹ್ವಾನಿಸಿ, ಗೌರಿ ಪೂಜೆ, ಧಾರೆ, ಲಾಜಾಹೋಮ, ಮಂತ್ರಪೂರ್ವಕವಾಗಿ ಹೆಬ್ಬೆರಳನ್ನು ಹಿಡಿದು ಹೋಮದ ಸುತ್ತ 7 ಹೆಜ್ಜೆಗಳನ್ನಿಟ್ಟು ಹೋಮ ಮುಗಿಯುವತನಕ ಹೆಬ್ಬೆರಳು ಹಿಡಿದಿರುವುದು ಇದೇ ಪಾಣಿಗ್ರಹಣ. ಅಗ್ನಿಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಬದುಕಿನುದ್ದಕ್ಕೂ ಒಬ್ಬರನ್ನೊಬ್ಬರು ಬಿಡುವುದಿಲ್ಲ ಎಂಬುದೇ ಇದರ ಅರ್ಥ.

ಲೋಕೋತ್ತರವಾದ ಪುಣ್ಯಗಳನ್ನು ಪಡೆದುಕೊಂಡವರು, ಮಂತ್ರಗಳಿಂದ ದೇವರನ್ನು ಕಂಡವರು ವಿಶ್ವಾಮಿತ್ರರು ಮತ್ತು ವಸಿಷ್ಠರು. ಈ ಮುನಿಪುಂಗವರು ಮಂಗಳ ಕಾರ್ಯದಲ್ಲಿ ಸಾಕ್ಷಿಯಾಗಿದ್ದು ‘ಸೀತಾರಾಮರ ಕಲ್ಯಾಣವನ್ನು’ ಹಾಗೂ ದಶರಥನ ಎಲ್ಲಾ ಮಕ್ಕಳ ಮಂಗಳಕರವಾದ ಕಲ್ಯಾಣವನ್ನು ನೆರವೇರಿಸಿದರು. ಇಂತಹ ಮಹಾ ಮಹಿಮೆಯುಳ್ಳ ಋಷಿಮುನಿಗಳಿಗೆ ಜನಕ ಮಹಾರಾಜನು ಕೈಮುಗಿದು ನಾನೇ ಭಾಗ್ಯವಂತ ಎಂದು ಕೃತಜ್ಞತೆಯಿಂದ ಧನ್ಯವಾದಗಳನ್ನು ಅರ್ಪಿಸಿದನು.

ವಿವಾಹದ ವಿಧಿ ವಿಧಾನಗಳೆಲ್ಲ ಮುಗಿದವು. ತನ್ನ ಸಂಪತ್ತಿನ ಬಹುಪಾಲನ್ನು ಆನೆ ,ಕುದುರೆ ,ಒಂಟೆಗಳ ,ಮೇಲೆ ಪೇರಿಸಿ ಕೊಡುವ ಮೂಲಕ ಜನಕನು ದಶರಥನಿಗೆ ಅನೇಕಾನೇಕ ಕಾಣಿಕೆ ಕೊಟ್ಟು ಗೌರವಿಸಿದನು. ಲೋಕೋತ್ತರವಾದ ಹೆಣ್ಣುಮಗಳನ್ನು ಲೋಕೋತ್ತರನಾದ ಪುರುಷ ಶ್ರೀರಾಮಚಂದ್ರನಿಗೆ ಕೊಟ್ಟು ಕಲ್ಯಾಣ ಮಾಡಿದ್ದು ನನ್ನ ಜನ್ಮ ಜನ್ಮಾಂತರದ ಭಾಗ್ಯ ಎಂದು ಭಾವಿಸಿ ಅವರೆಲ್ಲರನ್ನೂ ಪ್ರೀತಿಯಿಂದ ಬೀಳ್ಕೊಟ್ಟನು.

ಈ ರೀತಿಯಾಗಿ ಲೋಕವು ಹಿಂದೆಂದೂ ಕಾಣದ, ಮುಂದೆ ಸಿಗದಂಥ, ಅಂದು ಸಮುದ್ರ ಮಂಥನದಲ್ಲಿ, ಲಕ್ಷ್ಮಿ , ನಾರಾಯಣನನ್ನು ಸೇರಿಕೊಂಡಂತೆ, ಮೋಡದ ಮರೆಯಲ್ಲಿ ನಿಂತು ನೋಡುತ್ತಿದ್ದ ದೇವತೆಗಳು, ಸೀತಾ ರಾಮರ ಕಲ್ಯಾಣವನ್ನು ಕಣ್ತುಂಬಾ ನೋಡಿ ಸಾಕ್ಷಿಯಾದರು. ಮಂಗಳಪ್ರದವಾದ ಸೀತಾ ರಾಮಕಲ್ಯಾಣ ಎಲ್ಲರ ಬದುಕಲ್ಲೂ ಮಂಗಳವನ್ನುಂಟುಮಾಡಿತು.

ಇಂಥ ಭಕ್ತಿಪ್ರಧಾನವಾದ ‘ಸೀತಾರಾಮಚಂದ್ರರ ಕಲ್ಯಾಣ ಮಹೋತ್ಸವದ’ ಕಥೆಯನ್ನು ಓದಿದ ನಿಮಗೆಲ್ಲಾ ಶ್ರೀ ಸೀತಾರಾಮಚಂದ್ರರು ಸನ್ಮಂಗಳವನ್ನುಂಟು ಮಾಡಲಿ.
ಓಂ ತತ್ಸತ್ ಶ್ರೀ ಕೃಷ್ಣಾರ್ಪಣಮಸ್ತು.

ಮಂಗಳಂ ಕೋಸಲೇಂದ್ರಾಯ ಮಹನೀಯಗುಣಾತ್ಮನೇ !
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್.

ರಾಮ ರಾಮ ಎನ್ನಿರೋ..
ರಾಮ ರಾಮ ರಾಮ ಎಂದು ಮೂರು ಉಚ್ಛರಿಸಿದರೆ ಸಾಕು. ಸಹಸ್ರನಾಮವನ್ನು ಪಾರಾಯಣ ಮಾಡಿದ ಫಲ ಲಭಿಸುತ್ತದೆ ಎಂದು ರಾಮರಕ್ಷಾಸ್ತೋತ್ರ ಹೇಳುತ್ತದೆ. ಸ್ವಯಂ ಈಶ್ವರ ಉವಾಚ( ಹೇಳುವಂತೆ )ರಾಮ ನಾಮವೆಂಬುದು ಸಹಸ್ರನಾಮಗಳಿಗೆ ಸಮ.

ವಿಷ್ಣು ಸಹಸ್ರನಾಮದಲ್ಲಿ ಹೀಗೆ ಬರುತ್ತದೆ ಪಾರ್ವತಿ ಕೇಳುತ್ತಾಳಂತೆ “ಸಹಸ್ರನಾಮ ಪೂರ್ತಿ ಹೇಳಲಾಗದಿದ್ರೆ ಏನು ಮಾಡಬೇಕು?” ಅಂತ.

ಶಿವ ಉತ್ತರಿಸುತ್ತಾನಂತೆ :

“ಶ್ರೀರಾಮ ರಾಮ ರಾಮೇತಿ ರಮೇರಾಮೇ ಮನೋರಮೆ ಸಹಸ್ರನಾಮತತ್ತುಲ್ಯಮ್ ರಾಮನಾಮ ವರಾನನೇ ಅಂತ ಮೂರು ಬಾರಿ ಅಂದರೂ ಸಾಕು.

ಆ ಪುಣ್ಯ ಪ್ರಾಪ್ತಿ ಆಗುತ್ತದೆ”

ಶ್ರೀ(೧)
ರಾಮ(೨)
ರಾಮ(೩)
ರಾಮೇ(೪)
ತಿ ರಮೇ(೫)
ರಾಮೆ(೬)
ಮನೋ ರಮೇ,(೭)
ಸಹಸ್ರ ನಾಮ(೮)
ಮತತುಲ್ಯಂ ರಾಮ(೯)
ನಾಮ(೧೦)
ವರಾನನೇ.. ಇಲ್ಲಿ ಶ್ರೀ ಅಂದರೂ ನಾರಾಯಣ ನಾಮ ಅಂದರೂ ನಾರಾಯಣ ಒಟ್ಟು ಹತ್ತು ಬಾರಿ ಬರುತ್ತದೆ

ಇದನ್ನು ಮೂರು ಬಾರಿ ಹೇಳಿದರೆ ಸಾವಿರ ಹೇಗಾಗುತ್ತೆ ಗೊತ್ತಾ…

ಅಲ್ಲೇ ಇರೋದು, ನಮ್ಮ ಪೂರ್ವಿಕರ ಜಾಣ್ಮೆ..

ಸೊನ್ನೆ(೦) ಕಂಡುಹಿಡಿದಿದ್ದು ಭಾರತೀಯರು ಎಂದು ಎಲ್ಲರಿಗೂ ಗೊತ್ತು…

ನಮ್ಮ ಪೂರ್ವೀಕರು ಇನ್ನೂ ಬಹಳ ಮುಂದಿದ್ದರು..ಆದರೆ ನಮಗೆ ಅರ್ಥವಾಗಿಲ್ಲ.. 10°3 ಅಂದರೆ 10x10x10=1000

ಸಾವಿರ ನಾಮಗಳ ಸಾರ ಸರ್ವಸ್ವ ಭಗವಂತನ ಒಂದು ನಾಮವಾಗಿದೆ.

‘ಸತತ ಮೇವ ರೂಪಿಣಿ ದಶರೂಪಿಣಿ ಶತಮೇವ ಸಹಸ್ರರೂಪಿಣಿ’ ಎಂಬಂತೆ ಭಗವಂತನ ಒಂದು ನಾಮವು ಸಹಸ್ರರೂಪಗಳಿಗೆ ಸಮನಾಗಿದೆ.

ಈ ಅಂಶವನ್ನು ವಿಷ್ಣುಸಹಸ್ರನಾಮದ ಫಲಶ್ರುತಿಯಲ್ಲಿ ಕಾಣಬಹುದು.

ಮನೋನಿಯಾಮಕರಾದ ರುದ್ರದೇವರು ತನ್ನ ಮಡದಿಗೆ ಶ್ರೀರಾಮನಾಮದ ಮಹಿಮೆಯನ್ನು ಹೀಗೆ ವರ್ಣಿಸುತ್ತಾನೆ. ‘ಶ್ರೀರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ’ ಎನ್ನುತ್ತಾರೆ. ಅಂದರೆ ರಾಮ ರಾಮ ರಾಮ ಎಂದು ಮೂರು ಉಚ್ಛರಿಸಿದರೆ ಸಾಕು. ಸಹಸ್ರನಾಮವನ್ನು ಪಾರಾಯಣ ಮಾಡಿದ ಫಲ ಲಭಿಸುತ್ತದೆ ಎಂದು. ಸ್ವಯಂ ರುದ್ರದೇವರೇ ಹೇಳುವಂತೆ ರಾಮನಾಮವೆಂಬುದು ಸಹಸ್ರನಾಮಗಳಿಗೆ ಸಮ. ರಾಮನಾಮವು ಸಾರಸರ್ವಸ್ವವಾದ ರೂಪವಾಗಿದೆ. ಅಂತಹ ಸಾರ ಸರ್ವಸ್ವವಾದ, ಅದ್ವಿತೀಯವಾದ ನಾಮವನ್ನು ನಾವು ಪಾರಾಯಣ ಮಾಡಲಿಕ್ಕೆ, ಜಪ ಮಾಡಲಿಕ್ಕೆ ಸಾಧ್ಯವಾಗಲಿಲ್ಲವೆಂದರೆ ಇನ್ನು ಅದಕ್ಕಿಂತಲೂ ಸರಳವಾದ ಸಾಧನೋಪಾಯ ಮತ್ತೊಂದಿಲ್ಲ.
ನೀವು ಯಾವ ದೇವತೆಯ ಆರಾಧನೆ, ಯಾವ ದೇವರ ಸಹಸ್ರನಾಮವನ್ನು ಓದುತ್ತೀರಿ ಎಂಬುದು ನಿಮ್ಮಿಚ್ಛೆಗೆ ಬಿಟ್ಟದ್ದು. ಆದರೆ ಅಂತಹ ಸಹಸ್ರನಾಮಗಳಿಗೆ ಏಕೋರೂಪನಾದ ರಾಮನಾಮ ಪಾರಾಯಣ ಶ್ರೇಷ್ಠವಾದದ್ದು. ದಿನಕ್ಕೆ ಒಮ್ಮೆಯಾದರೂ ರಾಮನಾಮ ಪಾರಾಯಣ ಮಾಡುವುದನ್ನು ರೂಢಿಸಿಕೊಳ್ಳಿ.

ನಮ್ಮ ನಾಡು ರಾಮನು ಹುಟ್ಟಿದ ನಾಡು. ರಾಮನು ಓಡಾಡಿದ ನಾಡು. ದೇಶದ ಉದ್ದಗಲಕ್ಕೂ ರಾಮನಿಲ್ಲದ ಮನ ಮಂದಿರಗಳಿಲ್ಲ. ಅಂದಮೇಲೆ ಒಮ್ಮೆಯಾದರೂ ರಾಮನಾಮವನ್ನು ಜಪಿಸದಿರಲು, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನು ನೆನೆಯದಿರಲು ಸಾಧ್ಯವೇ ಇಲ್ಲ.

ಕೃಷ್ಣ, ಗೋವಿಂದ, ಮಾಧವ ಹೀಗೆ ನೂರಾರು ನಾಮಗಳಿದ್ದರೂ ರಾಮನಾಮಕ್ಕೇಕೆ ಅಷ್ಟೊಂದು ಮಹತ್ತು ಎಂದು ನೀವು ಪ್ರಶ್ನಿಸಬಹುದು. ಅದಕ್ಕೆ ಉತ್ತರ ವಿಷ್ಣುಸಹಸ್ರನಾಮದಲ್ಲಿ ಸಿಗುತ್ತದೆ. ರಾಮನಾಮದ ವೈಶಿಷ್ಟ್ಯವನ್ನು ಸ್ವತಃ ರುದ್ರದೇವರೇ ಮನಗಂಡಿದ್ದಾರೆ. ರಾಮ ಎನ್ನುವಲ್ಲಿ ಎರಡು ಅಕ್ಷ ರಗಳಿವೆ. ಮೊದಲನೆಯದು ‘ರಾ’ ಎರಡನೆಯದು ‘ಮ’. ಅದರ ಮಹತ್ವವೇನೆಂದು ತಿಳಿದುಕೊಳ್ಳೋಣ.

ಪಾಪಗಳನ್ನು ಕಳೆಯುವವನು

ಅದಕ್ಕೆ ಮುನ್ನ ಮಂತ್ರವೊಂದರ ಸಾಲನ್ನು ಅದರ ಭಾವಾರ್ಥವನ್ನು ಸೂಕ್ಷ ್ಮವಾಗಿ ಗಮನಿಸೋಣ.

‘ಪಾಪಕ್ಷ ಯಅಪಮೃತ್ಯುಹರಾಯಚ’ ಅಂದರೆ ಪಾಪಗಳನ್ನು ಕಳೆಯುವವನು, ಅಪಮೃತ್ಯುವಿನಿಂದ ಪಾರು ಮಾಡುವವನೇ ಭಗವಂತ ಎಂಬುದಾಗಿದೆ.

ಹಾಗಾದರೆ ಅಂತಹ ಸಮರ್ಥ ಭಗವಂತನಾರು? ಎಂಬುದಕ್ಕೆ ರಾಮನಾಮದಲ್ಲಿದೆ ಉತ್ತರ. ಅದು ಹೇಗೆಂದು ನೋಡೋಣ.

ಅದಕ್ಕೂ ಮುನ್ನ ರಾಮ ಎನ್ನುವ ಪದೋಚ್ಛಾರದ ಗತಿಯನ್ನು ಗಮನಿಸೋಣ.

ಅದರೊಂದಿಗೆ ರಾಮನಾಮದೊಳಗಿನ ಅಂತರಾರ್ಥವನ್ನು ಗ್ರಹಿಸೋಣ.

ರಾ ಎನ್ನುವ ಅಕ್ಷ ರವನ್ನು ಸುಲಭವಾಗಿ ಉಚ್ಛರಿಸಲಿಕ್ಕೆ ಆಗುವುದಿಲ್ಲ. ಅದು ನಾಭಿಯಿಂದ ಹೊರಹೊಮ್ಮುವ ನಾದ. ಅಂದರೆ ರಾ ಎನ್ನುವ ಅಕ್ಷ ರವನ್ನು ಪ್ರಯತ್ನ ಪೂರ್ವಕವಾಗಿ ನಾಭಿಯಿಂದ ಉಚ್ಛರಿಸುತ್ತೇವೆ.

ಇದರ ಉಚ್ಚ್ಛಾರಣೆಯಲ್ಲಿ ಒಂದು ಮರ್ಮವಿದೆ. ರಾ ಎನ್ನುವ ಪದವನ್ನು ಉಚ್ಛರಿಸಿದ ಕೂಡಲೇ ನಮ್ಮ ಬಾಯಿ ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ.

ಅದನ್ನೇ ನಾವು ಲಿಪ್‌ ಓಪನಿಂಗ್ಲೆಟರ್‌ ಎನ್ನುತ್ತೇವೆ.

ಯಾರೇ ಆಗಲಿ ರಾ ಎನ್ನುವ ಪದವನ್ನು ಬಾಯಿಮುಚ್ಚಿ ಕೊಂಡು ಹೇಳಲಿಕ್ಕಾಗದು. ಆದರೆ ಬೇಕೆನಿಸಿದರೆ ಪ್ರಯತ್ನ ಮಾಡಬಹುದು.

ಹೀಗೆ ರಾ ಎನ್ನುವ ಪದವನ್ನು ಉಚ್ಛರಿಸಿದ ಕೂಡಲೇ ನಮ್ಮ ತುಟಿಗಳು ತೆರೆದುಕೊಳ್ಳುತ್ತವೆ. ರಾ ಎನ್ನುವ ಅಕ್ಷ ರವನ್ನು ಉಚ್ಛರಿಸುವುದರಿಂದ ದೇಹದೊಳಗೆ ಹುದುಗಿರುವ, ಸುಪ್ತವಾಗಿರುವ, ಅಡಗಿ ಕುಳಿತಿರುವ ಪಾಪಗಳು ಹೊರಗೆ ಬರುತ್ತವೆ.

ಅಂದರೆ ಪಾಪಗಳು ಕ್ಷ ಯವಾಗುತ್ತವೆ.

ಅದು ಹೇಗೆ ಸ್ವಲ್ಪ ಗಮನಿಸೋಣ. ಬಾಯಿಯಿಂದ ಮಾತು ಹೊರಗೆ ಬರುತ್ತದೆ. ಮಾತಿನೊಂದಿಗೆ ಮನದ ಭಾವನೆಗಳು ಆಚೆ ಬರುತ್ತವೆ. ಅಂತೆಯೇ ಬಾಯಿಯಿಂದ ಹೊರಬರುವ ಕಫ, ಉಗುಳು ಮತ್ತಿತರ ಮಲಿನ ಅಂಶಗಳು ಹೊರಗೆ ಬರುತ್ತವೆಯೇ ವಿನಾ ಒಳಗೆ ಹೋಗಲಿಚ್ಛಿಸುವುದಿಲ್ಲ.

ಅಧ್ಯಾತ್ಮದೃಷ್ಟಿಕೋನದಿಂದ ಹೇಳುವುದಾದರೆ ರಾ ಎನ್ನುವ ಬೀಜಮಂತ್ರವನ್ನು ಉಚ್ಛರಿಸುವುದರಿಂದ ಮನದೊಳಗೆ, ಶರೀರದೊಳಗೆ ಅಡಗಿ ಕುಳಿತ ಪಾಪಗಳೆಲ್ಲವೂ ಹೊರಗೆ ಬಂದು ಕ್ಷ ಯವಾಗುತ್ತವೆ.

ಅಂದರೆ ನಾಶವಾಗುತ್ತವೆ. ಮೇಲೆ ಹೇಳಿದ ‘ಪಾಪಕ್ಷ ಯ’ ಮಂತ್ರದ ಅರ್ಥವು ರಾ ಎನ್ನುವ ನಾಮೋಚ್ಛಾರಣೆಯ ಫಲಕ್ಕೆ ಅನ್ವರ್ಥಕವಾಗಿದೆ ಎಂದಾಯಿತು.

ಭಗವಂತನ ಅನುಗ್ರಹ

ಇನ್ನು ನಮ್ಮ ಕನ್ನಡಿಗರಿಗೆ ತೆಲುಗು ಭಾಷೆಯ ಸ್ವಲ್ಪಮಟ್ಟಿನ ಪರಿಚಯವಾದರೂ ಇದೆ. ತೆಲುಗು ಭಾಷೆಯಲ್ಲಿ ರಾ ಎಂದರೆ ಬಾ ಎಂದರ್ಥ.

ಅಂದರೆ ಶರೀರದೊಳಗಿರುವ ಕಲ್ಮಷಗಳು, ಪಾಪಗಳು, ಕರ್ಮಗಳನ್ನೆಲ್ಲ ಹೊರಗೆಬನ್ನಿ ಎಂದು ಫೋಸುರ್ಧಿಲ್‌ ಆಗಿ ಕರೆಯುವ ಭಾವವದು.

ಅದಕ್ಕೇ ನಾವು ಹೇಳುವುದು ರಾ ಎನ್ನುವುದು ಲಾಕ್‌ ಓಪನಿಂಗ್‌ ಲೆಟರ್‌ ಅಂತ. ಇನ್ನು ಮ ಎನ್ನುವ ಅಕ್ಷ ರವನ್ನು ಯಾರೊಬ್ಬರು ತುಟಿಬಿಚ್ಚಿಕೊಂಡು ಹೇಳಲಿಕ್ಕಾಗದು.

ಅದು ಸ್ವಗತದ ಶಬ್ಧ.

ಎರಡು ತುಟಿಯನ್ನು ಮುಚ್ಚಿಕೊಂಡು ಹೇಳುವಂಥದ್ದು. ಅಂದರೆ ರಾ ಎನ್ನುವಾಗ ಹೊರಗೆ ಬಂದ ಪಾಪಗಳು ಅಲ್ಲಿಯೇ ಕ್ಷ ಯವಾಗಬೇಕು.

ಮತ್ತೆ ಒಳಗೆ ಹೋಗಬಾರದು ಎನ್ನುವುದೇ ಮ ಎನ್ನುವ ಶಬ್ಧದ ಅಂತರಾರ್ಥ.

ಅದಕ್ಕೆಂದೇ ಮ ಎನ್ನುವ ಅಕ್ಷ ರವು ಲಿಪ್‌ ಕ್ಲೋಸಿಂಗ್ಲೆಟರ್‌ ಆಗಿದೆ.

ಹಾಗಾಗಿ ರಾಮನಾಮವನ್ನು ಜಪಿಸುವುದರಿಂದ ಪಾಪಗಳು ಕ್ಷ ಯಿಸುತ್ತವೆಯೇ ಹೊರತು, ಅಪಮೃತ್ಯು ಪೀಡೆಗಳು ಪರಿಹಾರವಾಗುತ್ತವೆಯೇ ಹೊರತು ದೋಷಗಳು ದೇಹದೊಳಗೆ ಪ್ರವೇಶಿಸುವುದಿಲ್ಲ.

ಇಂತಹ ಮಹತ್ವಪೂರ್ಣವಾದ ರಾಮನಾಮ ಜಪವನ್ನು ನಾವೆಲ್ಲರೂ ಮಾಡಬೇಕು. ನಾಮ ಸಂಕೀರ್ತನೆ, ಜಪ, ತಪಗಳಿಗೆ ಯಾವುದೇ ಕುಲಮತಗಳ ಅಂತರವಿಲ್ಲ.

ಯಾರು ಬೇಕಾದರೂ ಪಾರಾಯಣ ಮಾಡಬಹುದು. ಯಾರು ಸುಲಭವಾಗಿ ದೋಷಗಳಿಂದ ಮುಕ್ತರಾಗಿ ಪುಣ್ಯಚೇತನವನ್ನು, ಭಗವಂತನ ಅನುಗ್ರಹವನ್ನು ಹೊಂದಲು ಬಯಸುತ್ತಾರೋ ಅವರೆಲ್ಲರೂ ರಾಮನಾಮ ಅನುಸಂಧಾನವನ್ನು ತಪ್ಪದೇ ಮಾಡಬೇಕು.

ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು


Spread the love

About Yuva Bharatha

Check Also

ಹಕ್ಕಿ-ಡಿಕ್ಕಿ

Spread the loveಹಕ್ಕಿ-ಡಿಕ್ಕಿ ———— ಚಿಕ್ಕ ಹಕ್ಕಿ ಪಕ್ಕನೆ ನುಂಗಲಾರದು, ಹಾರುವ ಬೃಹತ್ ವಿಮಾನವನ್ನು; ಆದರೂ ಓಡಿಸುತ್ತಾರೆ ದೂರ, ಡಿಕ್ಕೀ …

Leave a Reply

Your email address will not be published. Required fields are marked *

6 + seven =