ಮಾಧ್ಯಮ ಅಕಾಡೆಮಿ-ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತರಿಂದ ಲೇಖನ ಆಹ್ವಾನ
ಯುವ ಭಾರತ ಸುದ್ದಿ ಬೆಳಗಾವಿ :
ಕರ್ನಾಟಕ ಮಾಧ್ಯಮ ಅಕಾಡೆಮಿ 2022 ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆ ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಹಾಗೂ ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳನ್ನು ಬರೆದ ಪತ್ರಕರ್ತರಿಗೆ ಪ್ರತಿವರ್ಷ ತಲಾ ಹತ್ತು ಸಾವಿರ ರೂ.ಗಳ ನಗದು ಪ್ರಶಸ್ತಿ ನೀಡಲು ಸಂಸ್ಥೆಗಳು ಒಂದು ಲಕ್ಷ ರೂ.ಗಳ ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ.
2022 ಜನವರಿ ಯಿಂದ ನವೆಂಬರ್-2022 ರವರೆಗೆ ಪ್ರಕಟವಾಗಿರುವ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಅಭಿಮಾನಿ ಪ್ರಶಸ್ತಿ-2022 ಎಂದು ದಾಖಲಿಸಿ ಹಾಗೂ ಇದೇ ಅವಧಿಯ ಮಾನವೀಯ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳನ್ನು ಮೈಸೂರು ದಿಗಂತ ಪ್ರಶಸ್ತಿ-2022 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.
ಕನ್ನಡ ದೈನಿಕ–ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರ್ತಕರ್ತರು ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ, ಲೇಖನ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಂಧಿಸಿದ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು. ಲೇಖನ-ವರದಿಗಳನ್ನು ಡಿಸೆಂಬರ್-31 ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಭಿಮಾನಿ ಪ್ರಶಸ್ತಿ-2022, ಹಾಗೂ ಮೈಸೂರು ದಿಗಂತ ಪ್ರಶಸ್ತಿ-2022 ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ. ಆರ್. ಅಂಬೇಡ್ಕರ್ ವೀದಿ, ಬೆಂಗಳೂರು ಇವರಿಗೆ ಕಳುಹಿಸಲು ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ ಶೆಣೈ ಕೋರಿದ್ದಾರೆ.