Breaking News

ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಬಾಲಚಂದ್ರ ಜಾರಕಿಹೊಳಿ

Spread the love

ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಬಾಲಚಂದ್ರ ಜಾರಕಿಹೊಳಿ

ಯುವ ಭಾರತ ಸುದ್ದಿ ಮೂಡಲಗಿ :                  ಕೆಲವರು ಹುಟ್ಟುವಾಗ ಮನುಷ್ಯರಾಗಿರುತ್ತಾರೆ. ನಂತರ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳಿಂದ ಸಾವಿನ ನಂತರ ದೇವರಾಗುತ್ತಾರೆ. ಅಂತಹವರ ಸಾಲಿನಲ್ಲಿ ಸ್ವಾತಂತ್ರ್ಯ ಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ಸಂಗೊಳ್ಳಿ ರಾಯಣ್ಣನು ಸೇರುತ್ತಾನೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಸೋಮವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಇಂದಿನ ಯುವಕರು ಸಂಗೊಳ್ಳಿ ರಾಯಣ್ಣನಂತಹ ಮಹಾನ್ ಪುರುಷರ ಆದರ್ಶಗಳನ್ನು ಪಾಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ರಾಷ್ಟ್ರ ಪ್ರೇಮಿಗಳು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬ್ರಿಟೀಷರ್ ವಿರುದ್ಧ ಹೋರಾಡಿದ ಮಹಾನ್ ತ್ಯಾಗಿಗಳು. ತಮ್ಮ ಜೀವನದುದ್ದಕ್ಕೂ ಕ್ರಾಂತಿಕಾರಕ ಹೋರಾಟಗಳಿಂದ ಮನೆ ಮಾತಾಗಿರುವ ಸಂಗೊಳ್ಳಿ ರಾಯಣ್ಣನಂತವರು ಇಂದು ಪ್ರತಿ ಮನೆ ಮನೆಗಳಲ್ಲಿ ಹುಟ್ಟಬೇಕಿದೆ ಎಂದು ಹೇಳಿದ ಅವರು, ನಂಬಿಕೆ-ವಿಶ್ವಾಸಿಕರಾಗಿರುವ ಹಾಲುಮತ ಸಮಾಜ ಬಾಂಧವರ ಬೇಡಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಿಂದುಳಿದ ಸಮಾಜವಾಗಿರುವ ಹಾಲುಮತ ಕುರುಬ ಸಮಾಜ ಬಾಂಧವರು ತಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗಲು ಎಸ್.ಟಿ ಮೀಸಲಾತಿ ನೀಡುವಂತೆ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಇವರ ಜೊತೆಗೆ ಉಪ್ಪಾರ ಸಮಾಜದವರು ಸಹ ಹೋರಾಟಕ್ಕಿಳಿದಿದ್ದಾರೆ. ನಾನೂ ಕೂಡ ಈ ಸಮಾಜಗಳಿಗೆ ಬೆಂಬಲ ನೀಡುವ ಮೂಲಕ ಶಕ್ತಿಯಾಗಿ ನಿಲ್ಲುತ್ತೇನೆ. ಹಾಲುಮತ ಸಮಾಜದವರು ಹಾಗೂ ಉಪ್ಪಾರ ಸಮಾಜದವರು ಎಸ್.ಟಿಗೆ ಬಂದರೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದರಿಂದ ವಾಲ್ಮೀಕಿ ಸಮಾಜದ ಜೊತೆಗೆ ಹಾಲುಮತ ಮತ್ತು ಭಗೀರಥ ಸಮಾಜಗಳು ಎಸ್.ಟಿ ಗೆ ಬಂದರೆ ನಮ್ಮಗಳ ಶಕ್ತಿ ಇಮ್ಮಡಿಯಾಗುತ್ತದೆ. ಈ ನಿಟ್ಟಿನಲ್ಲಿ ಹಾಲುಮತ ಕುರುಬ ಹಾಗೂ ಭಗೀರಥ ಸಮಾಜದವರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡುತ್ತೇನೆ. ಫೆಬ್ರವರಿ 17 ರಂದು ನಡೆಯುವ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಸಮುದಾಯಕ್ಕೆ ಅನುಕೂಲವಾಗಲು ಉತ್ತಮ ಮುಂಗಡ ಪತ್ರವನ್ನು ಮಂಡಿಸುವರು ಎಂದು ಅವರು ಹೇಳಿದರು.
ಈ ಭಾಗದ ಶಾಸಕನಾಗಿ ಆಯ್ಕೆಯಾಗಲು ಈ ಸಮಾಜಗಳ ಸಹಕಾರ ಎಂದಿಗೂ ಮರೆಯುವುದಿಲ್ಲ. ಎಲ್ಲ ಸಮಾಜಗಳು ಕೂಡ ನನಗೆ ಆಶೀರ್ವಾದ ಮಾಡಿವೆ. ಅದರಂತೆ ನಾನೂ ಕೂಡ ಕಳೆದ 19 ವರ್ಷಗಳಿಂದ ಈ ಭಾಗದ ಶಾಸಕನಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ದಿ ಮಾಡಿದ್ದೇನೆ. ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ಕೊಟ್ಟಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಬಡವರಿಗೆ ಅನ್ಯಾಯ ಆಗದಂತೆ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣ ದೇವರು, ಕವಲಗುಡ್ಡದ ಅಮರೇಶ್ವರ ಮಹಾರಾಜರು, ಪ್ರಭು ದೇವರು, ಸಿದ್ದಪ್ಪ ಮಹಾರಾಜರು, ಬಿಳ್ಯಾನಸಿದ್ಧೇಶ್ವರ ಸ್ವಾಮಿಗಳು ವಹಿಸಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರದೇಶ ಕುರುಬರ ಸಂಘದ ನಿರ್ದೇಶಕ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಅರಭಾವಿ ಮತಕ್ಷೇತ್ರದಲ್ಲಿ ಸರ್ವ ಜನಾಂಗದ ಮೂರ್ತಿಗಳ ಪ್ರತಿಷ್ಠಾಪನೆಗೊಳ್ಳಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದೆ. ಎಲ್ಲ ಸಮಾಜಗಳನ್ನು ಬಾಲಚಂದ್ರ ಜಾರಕಿಹೊಳಿ ಅವರು ಸಮಾನವಾಗಿ ಕಾಣುವ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ಸುನೀಲ ಪಾಶ್ಚಾಪೂರ, ಶಂಕರ ಇಂಚಲ, ಯಲ್ಲಪ್ಪ ಅಜ್ಜಪ್ಪಗೋಳ, ಉದ್ದಪ್ಪ ಕಳ್ಳಪ್ಪಗೋಳ, ಕಲ್ಲಪ್ಪ ಬಂಗೇರ, ಸಿದ್ರಾಮ ಹಳ್ಳೂರ, ಲಕ್ಷ್ಮಣ ಸವಸುದ್ದಿ, ಸಿದ್ದಪ್ಪ ಕಳ್ಳಪ್ಪಗೋಳ, ಸಿದ್ಧಾರೂಢ ಇಂಚಲ, ಗುರುಸಿದ್ದಪ್ಪ ಹಳ್ಳೂರ, ಸಿದಗೌಡ ಪಾಟೀಲ, ತಮ್ಮಣ್ಣ ಬಡವಣ್ಣಿ, ಸಿದಗೌಡ ಬಡವಣ್ಣಿ, ಲಕ್ಕಪ್ಪ ಇಂಚಲ, ಜ್ಞಾನೇಶ್ವರ ಬಂಗೇರ, ಕಲಗೌಡ ಪಾಟೀಲ, ವಿಠ್ಠಲ ಪಾಟೀಲ, ಶಿದ್ಲಿಂಗಪ್ಪ ಕಂಬಳಿ, ಮುತ್ತೆಪ್ಪ ಕುಳ್ಳೂರ, ಭೀಮಪ್ಪ ಮೋಕಾಶಿ, ಪುಂಡಲೀಕ ಸುಂಕದ, ಕುಬೇಂದ್ರ ತೆಗ್ಗಿ, ಮಲಕಾರಿ ವಡೇರ, ವಿನಾಯಕ ಕಟ್ಟಿಕಾರ, ಮಾರುತಿ ಮರಡಿ, ಗಣೇಶ ಚಿಪ್ಪಲಕಟ್ಟಿ, ಸಿದ್ದು ಕಂಕಣವಾಡಿ, ಈರಣ್ಣ ಮೋಡಿ, ಪರಶುರಾಮ ಸನದಿ, ಶಿಕಂದರ ನದಾಫ, ಅವ್ವಣ್ಣ ಡಬ್ಬನ್ನವರ, ಬಸವರಾಜ ಕಾಡಾಪೂರ, ರಾಮನಾಯ್ಕ ನಾಯ್ಕ, ಶಬ್ಬೀರ ತಾಂಬಿಟಗಾರ, ಅಜೀತ ಪಾಟೀಲ, ಪಾಂಡು ದೊಡಮನಿ, ಹುಣಶ್ಯಾಳ ಪಿಜಿ ಗ್ರಾಪಂ ಸದಸ್ಯರು, ಹಾಲುಮತ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಶಿಕ್ಷಕರಾದ ಬಿ.ಎಲ್. ಘಂಟಿ ಮತ್ತು ಎಲ್.ಎಸ್ ಪಾಟೀಲ ನಿರೂಪಿಸಿದರು.


Spread the love

About Yuva Bharatha

Check Also

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ …

Leave a Reply

Your email address will not be published. Required fields are marked *

one × 2 =