
ಬಾಬ್ರಿ ಕಟ್ಟಡ ಕುರಿತು ತೀರ್ಪು – ಸತ್ಯಮೇವ ಜಯತೇ ಎಂದ ಸಚಿವ.ರಮೇಶ್ ಜಾರಕಿಹೊಳಿ..!!
ಯುವ ಭಾರತ ಸುದ್ದಿ,
ಬಾಬ್ರಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಇಂದು ನೀಡಿದ ತೀರ್ಪು ಐತಿಹಾಸಿಕವಾಗಿದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಬಣ್ಣಿಸಿದ್ದಾರೆ.
ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಮಾತನಾಡಿದ ಸಚಿವ ಜಾರಕಿಹೊಳಿ, ಸತ್ಯ ಎಂದಿಗೂ ಸತ್ಯವೇ, ಭಾರತೀಯ ಜನತಾ ಪಾರ್ಟಿ ಸಹಾ ಇದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿತ್ತು. ಈಗ ನ್ಯಾಯದೇವತೆಯೂ ಸಹಾ ನಮ್ಮ ನಂಬಿಕೆಯನ್ನು ಪುರಸ್ಕರಿಸಿದಂತಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ನಮ್ಮ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾದ ಶ್ರೀ ಎಲ್ ಕೆ ಅಡ್ವಾಣಿ, ಶ್ರೀ ಮುರಳಿ ಮನೋಹರ ಜೋಶಿ, ಕಲ್ಯಾಣ್‍ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮುಂತಾದವರನ್ನು ಈ ಪ್ರಕರಣದ ಷಡ್ಯಂತ್ರದಲ್ಲಿ ಸಿಲುಕಿಸುವ ದೊಡ್ಡ ರಾಜಕೀಯ ಹುನ್ನಾರವೇ ನಡೆದಿತ್ತು. ಆದರೆ ಈ ನ್ಯಾಯನಿರ್ಣಯದಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ. ಈ ಎಲ್ಲಾ ಹಿರಿಯ ಮುಖಂಡರಿಗೆ ವಿನಾಕಾರಣ ಮಾನಸಿಕ ಕಿರುಕುಳ ನೀಡುವ ಉದ್ದೇಶ ಹೊಂದಿದ್ದ ಕೆಲವು ರಾಜಕೀಯ ಶಕ್ತಿಗಳಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ತಕ್ಕ ಶಾಸ್ತಿ ಮಾಡಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಪ್ರಾಮಾಣಿಕ ಸೇವೆ ಮತ್ತು ಆದರ್ಶ ನಡೆನುಡಿಗಳ ಉತ್ತಮ ಆಡಳಿತಕ್ಕೆ ನಮ್ಮಲ್ಲಿ *“ರಾಮರಾಜ್ಯ”* ಎಂದು ಕರೆಯುವುದು ರೂಢಿ. ಅದೇ ರೀತಿ ಇತ್ತೀಚೆಗೆ ರಾಮಮಂದಿರದ ನಿರ್ಮಾಣಕ್ಕೆ ಅನುಮತಿ ನೀಡಿದ ಮತ್ತು ಈಗ ಬಾಬ್ರಿ ಕಟ್ಟಡ ಧ್ವಂಸಕ್ಕೆ ಸಂಬಂಧಿಸಿ ನೀಡಲಾದ ತೀರ್ಪುಗಳು “ರಾಮರಾಜ್ಯ”ದ ಪರಿಕಲ್ಪನೆಗೆ ಪೂರಕವಾಗಿಯೇ ಇದೆ. ಪವಿತ್ರವಾದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರವನ್ನು ನಿರ್ಮಿಸಬೇಕೆಂಬ ನಿಟ್ಟಿನಲ್ಲಿ ಅನೇಕ ಮುಖಂಡರು, ಸಾಧುಸಂತರು, ಕರಸೇವಕರು, ಶ್ರೀ ರಾಮನ ಭಕ್ತರು ಮತ್ತು ಬಿಜೆಪಿಯ ಸಮಸ್ತ ಕಾರ್ಯಕರ್ತರೂ ಹಲವು ವರ್ಷಗಳಿಂದ ಹೋರಾಟ, ತ್ಯಾಗ ಬಲಿದಾನಗಳನ್ನು ಕೈಗೊಂಡಿದ್ದರು. ಈ ಎಲ್ಲಾ ಹೋರಾಟಗಳಿಗೆ ಈ ತೀರ್ಪಿನಿಂದಾಗಿ ಮತ್ತೊಮ್ಮೆ ಮೌಲ್ಯ ಹೆಚ್ಚಿದಂತಾಗಿದೆ. ಅತ್ಯಂತ ಸಹನೆಯಿಂದ, ಅಧ್ಯಯನಗಳಿಂದ ಈ ವಿದ್ವತ್‍ಪೂರ್ಣ ತೀರ್ಪು ಹೊರಹೊಮ್ಮಿದೆ ಎಂದು ಹೇಳಿದ ರಮೇಶ್ ಜಾರಕಿಹೊಳಿ ಅವರು, ತೀರ್ಪು ನೀಡಿದ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ತಮ್ಮ ವಂದನೆಗಳನ್ನು ತಿಳಿಸಿದ್ದಾರೆ.
YuvaBharataha Latest Kannada News