ಸುಳೇಭಾವಿ ಗ್ರಾಪಂಗೆ ಒಕ್ಕರಿಸಲು ಭ್ರಷ್ಟ ಪಿಡಿಒ ಹಿರೇಮಠ ತಯಾರಿ..?
ಪಿಡಿಒ ಹಿರೇಮಠ
ಯುವ ಭಾರತ ಸುದ್ದಿ, ಬೆಳಗಾವಿ: ಈ ಹಿಂದೆ ಕೆಲವು ತಮ್ಮ ಸೇಔಅವಧಿಯ ಗ್ರಾಮ ಪಂಚಾಯತ್‌ಗಳಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆಸಿರುವ ಪಿಡಿಒ ಶ್ರೀದೇವಿ ಹಿರೇಮಠ ಸುಳೇಭಾವಿಯಲ್ಲಿಯೂ ಅನೇಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಾಣದಲ್ಲಿ ಒಬ್ಬರ ಹೆಸರಲ್ಲಿ ಶೌಚಾಲಯ, ಇನ್ನೊಬ್ಬರ ಹೆಸರಲ್ಲಿ ಹಣ ಜಮಾ ಮಾಡಿಸಿ ಈ ಸರ್ಕಾರದ ಹಣವನ್ನು ಪಿಡಿಒ ಗುಳುಂ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಮತ್ತೊಂದು ದೊಡ್ಡ ಭ್ರಷ್ಟಾಚಾರ ನಡೆಸಲು ಹಿರಿಯ ಅಧಿಕಾರಿಗಳು ಕುಮ್ಮಕ್ಕು ಕೊಡುತ್ತಿದ್ದಾರೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಅತಿ ದೊಡ್ಡ ಗ್ರಾಮ ಪಂಚಾಯತ್ ಎಂದು ಹೆಸರುವಾಸಿಯಾದ ಸುಳೇಭಾವಿಗೆ ಪಿಡಿಒ ಆಗಿ ಮರಳಿ ಬರಲು ಹಿರೇಮಠ ಹವಣಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕಚೇರಿಯಲ್ಲಿ ವಿಷಯ ಹರಿದಾಡುತ್ತಿದೆ.
ಅನೇಕ ಹಗರಣಗಳಲ್ಲಿ ಭಾಗಿಯಾಗಿ ಭ್ರಷ್ಟ ಅಧಿಕಾರಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸುಳೇಭಾವಿಯ ಪಿಡಿಒ ಆಗಿ ಕಳೆದ ತಿಂಗಳು ಅಮಾನತುಗೊಂಡಿರುವ ಹಿರೇಮಠ 10 ವರ್ಷಗಳ ಸೇವಾವಧಿಯಲ್ಲಿ ಸುಮಾರು ಎರಡು-ಮೂರು ಅಮಾನತು ಆಗಿದ್ದರು ಎಂದು ತಿಳಿದು ಬಂದಿದೆ.
ಮೊದಲು ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮ ಪಂಚಾಯಿತ್‌ನ ಪಿಡಿಒ ಆಗಿದ್ದಾಗ ಹಿರೇಮಠ ಹಗರಣವೊಂದರಲ್ಲಿ ಭಾಗಿ ಅಮಾನತುಗೊಂಡರೆ, ಕಳೆದ ಒಂದು ತಿಂಗಳ ಹಿಂದೆ ಮೋದಗಾ ಗ್ರಾಮ ಪಂಚಾಯಿತಿಯಲ್ಲಿಯೂ ಅನಧಿಕೃತ ಲೇಔಟ್‌ಗೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದರು. ಇದರಿಂದ ಮತ್ತೆ ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡ ಹಿರೇಮಠ ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಮತ್ತು ಸೂಳೇಭಾವಿಗೆ ಜಾರ್ಜ್ ತೆಗೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಪಿಡಿಒ ಅವರಿಂದ ಅನ್ಯಾಯಕ್ಕೆ ಒಳಗಾದ ನೊಂದ ಕುಟುಂಬಸ್ಥರು ‘ಯುವ ಭಾರತ’ ಸುದ್ದಿ ಮಾಧ್ಯಮದ ಬಳಗದ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಹೇಗಾದರೂ ಮಾಡಿ ಈ ಅಧಿಕಾರಿಯಿಂದ ನ್ಯಾಯ ಕೊಡಿಸಬೇಕು ಎಂದು ಅಲವತ್ತುಕೊಳ್ಳುತ್ತಿದ್ದಾರೆ.