ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಅನಿವಾರ್ಯ
ಯುವ ಭಾರತ ಸುದ್ದಿ ಬೆಂಗಳೂರು :
ಬಿಜೆಪಿ ಹಿರಿಯ ನಾಯಕರಾದ ಕೆ. ಎಸ್.ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರು ಸಚಿವ ಸಂಪುಟ ಸೇರ್ಪಡೆಯಾಗುವ ಕುರಿತು ಕೆಲ ದಿನಗಳಿಂದ ಚರ್ಚೆ ನಡೆದಿದೆ. ಇದಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆ ಗೋಚರಿಸಿದೆ.
ಮಕರ ಸಂಕ್ರಾಂತಿ ಹಬ್ಬದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತ ಗೊಂದಲಕ್ಕೆ ಕೊನೆಗೂ ತೆರೆ ಎಳೆಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಕಗ್ಗಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಸಂಪುಟ ವಿಸ್ತರಣೆಗೆ ಕೈ ಹಾಕುವ ಹಂತದಲ್ಲಿದೆ ಎಂದು ಗೊತ್ತಾಗಿದೆ.
ಸಚಿವ ಸಂಪುಟ ವಿಸ್ತರಣೆಯಾಗುತ್ತದೋ ಆಗುವುದಿಲ್ಲವೋ ಎಂಬ ಚರ್ಚೆ ತುಸು ಜೋರಾಗಿ ನಡೆದಿದೆ. ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆ ನಡೆಯಲಿದ್ದು ಆಬಳಿಕ ಸಂಪುಟ ವಿಸ್ತರಣೆಯ ಸ್ಪಷ್ಟತೆ ಹೊರಬೀಳುವ ನಿರೀಕ್ಷೆ ಇದೆ. ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು ನಡೆಸುವ ಸಾಧ್ಯತೆ ಇದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಸಂಪುಟ ವಿಸ್ತರಣೆ ಕುರಿತು ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿವೇಶನದಿಂದ ದೂರ ಉಳಿದಿದ್ದರು. ಕೊನೆಗೆ ಮುಖ್ಯಮಂತ್ರಿ ಶೀಘ್ರ ಸಂಪುಟ ವಿಸ್ತರಣೆಯ ಭರವಸೆ ನೀಡಿದ್ದರು. ಮಕರ ಸಂಕ್ರಾಂತಿ ಮುಗಿಯುತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.