ಕಾಂಗ್ರೆಸ್ಸಿಗೆ ಅಂಬೇಡ್ಕರ್ ಮೇಲೆ ಪ್ರೀತಿ ಇಲ್ಲ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಯುವ ಭಾರತ ಸುದ್ದಿ ಬೆಂಗಳೂರು :
ಕಾಂಗ್ರೆಸ್ ಗೆ ಅಂಬೇಡ್ಕರ್ ಅವರ ಮೇಲೆಯಾಗಲಿ , ಅವರು ಬರೆದಿರುವ ಸಂವಿಧಾನದ ಮೇಲೆಯಾಗಲಿ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ ವಕ್ತಾರರು ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೀಸಲಾತಿ ಬಗ್ಗೆ ಟ್ವೀಟ್ ಮಾಡಿರುವ ಕುರಿತು ಇಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಮೀಸಲಾತಿ ನೀಡಿರುವುದು ಕಾನೂನು ಬಾಹಿರ, ಸಂವಿಧಾನ ವಿರೋಧಿ ಎಂದು ಕೆಳಮಟ್ಟದ ಶಬ್ದಗಳನ್ನು ಬಳಸಿದ್ದಾರೆ. ಜನಸಂಖ್ಯೆ ಆಧಾರಿತವಾಗಿ ಮೀಸಲಾತಿ ನೀಡಬೇಕು ಎಂದು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಸ್.ಸಿ/ ಎಸ್.ಟಿ ಸಮುದಾಯಗಳ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿ, ಸಂವಿಧಾನದ ಪರಿಚ್ಛೇದ 9 ಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ ಎಂದರು.
*ಮತ ಬ್ಯಾಂಕ್*
ಅವರ ಕಾಲದಲ್ಲಿ ಏನೂ ಮಾಡದೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದದವರನ್ನು ಬರೀ ಮತ ಬ್ಯಾಂಕ್ ಗಾಗಿ ಬಳಕೆ ಮಾಡಲಾಗಿದೆ ಎಂದ ಅವರು, ನಾಗಮೋಹನ್ ದಾಸ್ ವರದಿ ಬಂದು 4 ವರ್ಷ ಆಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು. ಯಡಿಯೂರಪ್ಪ ನವರ ಅವಧಿಯಲ್ಲಿ ವರದಿ ಬಂದ ಆರು ತಿಂಗಳಿಗೆ ವಿಸ್ತರಣೆ ಮಾಡಿದರು.
ನನ್ನ ಅವಧಿಯಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಒಪ್ಪಿಗೆ ಪಡೆಯಲಾಯಿತು. ನಂತರ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಪರ ನಿರ್ಣಯ ಕೈಗೊಳ್ಳಲಾಯಿತು. ಸರ್ಕಾರ ಆದೇಶ ಹೊರಡಿಸಿ ಶೆಡ್ಯೂಲ್ 9 ಕ್ಕೆ ಸೇರಿಸಲಾಗಿದೆ ಎಂದರು.
*ಸರ್ವರಿಗೂ ನ್ಯಾಯ*
ನಾವು ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡಿರುವುದನ್ನು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ದಲಿತ, ಹಿಂದುಳಿದ ವರ್ಗದ, ಲಿಂಗಾಯತ, ಒಕ್ಕಲಿಗರ ವಿರೋಧಿಯಾಗಿದೆ. ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
*ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ*
ಅಧಿಕಾರಕ್ಕೆ ಬಂದ ಮೇಲೆ ಹಿಂಪಡೆಯುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅವರು ಅಧಿಕಾರಕ್ಕೆ ಬರುವ ಪ್ರಶ್ನೆಯೆ ಇಲ್ಲ . ಇದನ್ನ ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಅವರಿಗೆ ಶಕ್ತಿಯೂ ಇಲ್ಲ ಅವಕಾಶವೂ ಇಲ್ಲ. ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದ ಮುಖ್ಯಮಂತ್ರಿಗಳು, ನಮ್ಮ ಕೆಲಸ ನೋಡಿ ನೋಡಿ ತಳಮಳಗೊಂಡು ಈ ರೀತಿ ಮಾಡುತ್ತಿದ್ದಾರೆ ಎಂದರು.
*ಬಿಜೆಪಿ ಪಟ್ಟಿ*
ಪಕ್ಷದ ಮೊದಲ ಪಟ್ಟಿಯ ಬಗ್ಗೆ ಕ್ಷೇತ್ರದಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜಿಲ್ಲಾವಾರು ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದ್ದು ನಾಳೆ ಮತ್ತು ನಾಡಿದ್ದು ರಾಜ್ಯಮಟ್ಟದ ಕೋರ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಬಹುತೇಕವಾಗಿ ಏಪ್ರಿಲ್ 8 ರಂದು ಸಂಸದೀಯ ಮಂಡಳಿಯಲ್ಲಿ ಪಟ್ಟಿ ಅಂತಿಮಗೊಳ್ಳಲಿದೆ ಎಂದರು.