ಕರೆಂಟ್ ಶಾಕ್: ಬಿಲ್ ಕಟ್ಟದಿರಲು ನೇಕಾರರ ನಿರ್ಧಾರ
ಬೆಳಗಾವಿ: ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಘೋಷಿಸಿರುವ ಸರ್ಕಾರ, ಇನ್ನೊಂದೆಡೆ ಮಗ್ಗಗಳ ವಿದ್ಯುತ್ ದರ ಹೆಚ್ಚಿಸುವ ಮೂಲಕ ನೇಕಾರರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಹೀಗಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇನ್ನು ಮುಂದೆ ವಿದ್ಯುತ್ ಬಿಲ್ ಕಟ್ಟದಿರಲು ನೇಕಾರರು ನಿರ್ಧರಿಸಿದ್ದಾರೆ.
ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ನೇಕಾರರು ವಿದ್ಯುತ್ ಬಿಲ್ ಕಟ್ಟದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ.
ನೇಕಾರ ಮುಖಂಡ ನಾರಾಯಣ ಲೋಕರೆ ಮಾತನಾಡಿ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಇತ್ತ ನೇಕಾರರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಸರ್ಕಾರ ದಿಢಿತ್ ವಿದ್ಯುತ್ ದರ ಹೆಚ್ಚಿಸುವ ಮೂಲಕ ಕರೆಂಟ್ ಶಾಕ್ ನೀಡಿದೆ. ತ್ರಿಫೇಸ್ ವಿದ್ಯುತ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಒಂದು ಕೈಯಿಂದ ಕೊಟ್ಟು ಇಒನ್ನೊಂದು ಕೈಯಿಂದ ದುಪ್ಪಟ್ಟು ಕಸಿದುಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಜಿಎಸ್‌ಟಿ, ವ್ಯಾಟ್ ಹೆಚ್ಚಳದಿಂದ ನೇಕಾರರು ತೊಂದರೆ ಅನುಭವಿಸುತ್ತಿದ್ದಾರೆ. ಇಂಥದರಲ್ಲಿ ಈಗ ವಿದ್ಯುತ್ ದರ ಹೆಚ್ಚಿಸಿ ನೇಕಾರರನ್ನು ಬೀದಿಗೆ ತಳ್ಳುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಹೀಗಾಗಿ ತಾಲೂಕಿನ ಸುಳೇಭಾವಿ, ಮಾರೀಹಾಳ, ಮೋದಗಾ, ಪಂತ ಬಾಳೇಕುಂದ್ರಿ, ಸಾಂಬ್ರಾ ಸೇರಿದಂತೆ ಸುತ್ತಲಿನ ಹಳ್ಳಿಗಳ ನೇಕಾರರು ಯಾವುದೇ ಕಾರಣಕ್ಕೂ ಈ ತಿಂಗಳಿನಿAದ ವಿದ್ಯುತ್ ಬಿಲ್ ಕಟ್ಟದಿರಲು ನಿರ್ಧರಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ನೇಕಾರ ಮುಖಂಡ ಬಾಬು ವಾಗೇರಿ ಮಾತನಾಡಿ, ವಿದ್ಯುತ್ ಮಗ್ಗ ಹಾಗೂ ಗಿರಣಿ ನಡೆಸಲು ತ್ರಿಫೇಸ್ ವಿದ್ಯುತ್ ಅಗತ್ಯವಿದೆ. ಈ ದರ ದಿಢೀರ್ ಏರಿಕೆ ಆಗಿದೆ. ಇದರಿಂದ ನೇಕಾರರು ಕಣ್ಣಿರಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದೊದಗಿದೆ. ಈಗಾಗಲೇ ಕೊರೊನಾ ಹಾವಳಿಯಿಂದ ತತ್ತರಿಸಿ ಅನೇಕ ನೇಕಾರರು ಜೀವನ ನಡೆಸಲು ಇನ್ನೂ ಹೆಣಗಾಡುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿ ಬದುಕು ನಡೆಸುವುದು ಕಷ್ಟಕರವಾಗಿದೆ. ಇಂಥದರಲ್ಲಿ ಈಗ ವಿದ್ಯುತ್ ದರ ಹೆಚ್ಚಿಸುವ ಮೂಲಕ ಸರ್ಕಾರ ನಮ್ಮ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ಕೂಡಲೇ ದರ ಇಳಿಸುವ ಮೂಲಕ ನೇಕಾರರ ಕಣ್ಣೀರು ಒರೆಸುವ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ನೇಕಾರ ಮುಖಂಡ ಕಲ್ಲಪ್ಪ ಕಾಂಬಳೆ ಮಾತನಾಡಿ, ನೇಕಾರರ ಮೇಲೆ ವಿದ್ಯುತ್ ಶಾಕ್ ನೀಡಿರುವ ಸರ್ಕಾರದ ವಿರುದ್ಧ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ ಇದರಲ್ಲಿ ಯಾವುದೇ ರಾಜಕೀಯ ಬೆರೆಸದೇ ಜನರ ನೇಕಾರರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕಿದೆ. ಸರ್ಕಾರ ಈ ಕೂಡಲೇ ದರ ಏರಿಕೆ ಮಾಡಿರುವ ಆದೇಶ ಹಿಂಪಡೆಯುವವರೆಗೂ ಹೋರಾಟ ನಿರಂತರವಾಗಿ ಮಾಡಲಾಗುವುದು ಎಂದು ತಿಳಿಸಿದರು.
ನೇಕಾರ ನಾಯಕ ನಾಗಪ್ಪ ಹುಡೇದ ಮಾತನಾಡಿ, ನೇಕಾರರು ದಿನ ದುಡಿದ ಮೇಲೆಯೇ ಹೊಟ್ಟೆ ತುಂಬುತ್ತದೆ. ಇಂಥದರಲ್ಲಿ ಸಿದ್ದರಾಮಯ್ಯ ಸರ್ಕಾರ ನೇಕಾರರಿಗೆ ಭಾರೀ ಹೊಡೆತ ನೀಡಿದೆ. ಈ ಆದೇಶ ಹಿಂಪಡೆಯುವವರೆಗೂ ನಾವು ಬಿಲ್ ಕಟ್ಟುವುದಿಲ್ಲ. ಸೋಮವಾರ ಜೂ. 12ರಂದು ಮಾರೀಹಾಳ ಪೊಲೀಸ್ ಠಾಣೆ, ಕೆಇಬಿ ಸೆಕ್ಶö್ನ ಅಧಿಕಾರಿ, ತಹಶೀಲ್ದಾರ, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಸಾಧ್ಯವಾದರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮುಖಂಡರಾದ ಕಲ್ಲಪ್ಪ ಸತಾಪಳೆ, ಮಹಾದೇವ ರಾಗಿ, ರಾಮಚಂದ್ರ ಮರಗಿ, ಮಹಾಂತೇಶ ಬಿಜಾಪುರೆ, ಬಸವರಾಜ ಯರಝರವಿ, ವಿಶ್ವನಾಥ ಕಣಬರ್ಗಿ, ಕಲ್ಲಪ್ಪ ಕಾಂಬಳೆ, ಗಂಗಾಧರ ಲಖನಗೌಡ, ಶಫಿ ಜಮಾದಾರ, ಶ್ರೀಕಾಂತ ಇಂಗಳೆ, ಕಲ್ಲಪ್ಪ ಕಾಮಕರ, ವೀರಭದ್ರ ನೇಸರಗಿ, ಭೀಮಶಿ ಕಮತಗಿ, ಮೈನು ಹುದಲಿ, ಈರಣ್ಣ ಕೇಸಪನಟ್ಟಿ ಸೇರಿದಂತೆ ಇತರರು ಇದ್ದರು.
——ಬಾಕ್ಸ್—-
*ದರ ದುಪ್ಪಟ್ಟು, ನೇಕಾರರು ಆತಂಕ*
ತ್ರಿಫೇಸ್ ವಿದ್ಯುತ್‌ನ ಪ್ರತಿ ಎಚ್‌ಪಿಗೆ ನಿಗದಿತ ದರ ಈ ಮುಂಚೆ 80 ರೂ. ಇತ್ತು. ಈಗ 140 ರೂ.ಗೆ ಏರಿಕೆ ಆಗಿದೆ. ಎಂದರೆ ದಿಢೀರ್ 60 ರೂ. ಏರಿಕೆ ಮಾಡಿದೆ. ಪರಿಮಾಣ ದರ ಮೊತ್ತ ಪ್ರತಿ ಯೂನಿಟ್‌ಗೆ ಈ ಮುಂಚೆ 0.57 ಪೈಸೆ ಇತ್ತು. ಈಗ 2.55 ರೂ.ಗೆ ಹೆಚ್ಚಿಸಿದೆ. ಎಂದರೆ 1.98 ರೂ. ಹೆಚ್ಚಿಸಿದಂತಾಗಿದೆ. ತೆರಿಗೆಯೂ ಹೆಚ್ಚಾಗಿದ್ದು, ನಾವು ಬಳಸಿದ ಯೂನಿಟ್‌ಗೆ ಈ ತಿಂಗಳು ದುಪ್ಪಟ್ಟು ಬಿಲ್ ಬಂದಿರುವುದರಿAದ ಕಷ್ಟವಾಗಿದೆ ಎಂದು ನೇಕಾರರು ಆರೋಪಿಸಿದ್ದಾರೆ.
——ಬಾಕ್ಸ್—
*ಹೋರಾಟಕ್ಕೆ ಎಲ್ಲರೂ ಕೈಜೋಡಿಸಿ*
ಸರ್ಕಾರ ವಿದ್ಯುತ್ ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುವುದು. ನೇಕಾರರು ಯಾವುದೇ ಕಾರಣಕ್ಕೂ ಬಿಲ್ ಕಟ್ಟುವುದಿಲ್ಲ. ಜೂ. 12ರಂದು ಜಿಲ್ಲಾಧಿಕಾರಿ ಸಏರಿದಂತೆ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಹೋರಾಟಕ್ಕೆ ಎಲ್ಲ ಭಾಗದ ನೇಕಾರರು ಕೈ ಜೋಡಿಸಬೇಕು ಎಂದು ಸುಳೇಭಾವಿಯ ನೇಕಾರರು ಮನವಿ ಮಾಡಿದ್ದಾರೆ.