Breaking News

ಸಿದ್ದಣ್ಣ ಮಸಳಿ ಅವರ ಜೀವನ, ಕವನ ಕುರಿತ ಡಾ.ಮಹೇಶ ಗುರನಗೌಡರ ಅವರ ಕಿರು ಹೊತ್ತಿಗೆ ಲೋಕಾರ್ಪಣೆ

Spread the love

ಸಿದ್ದಣ್ಣ ಮಸಳಿ ಅವರ ಜೀವನ, ಕವನ ಕುರಿತ ಡಾ.ಮಹೇಶ ಗುರನಗೌಡರ ಅವರ ಕಿರು ಹೊತ್ತಿಗೆ ಲೋಕಾರ್ಪಣೆ

ಸಮಕಾಲದ ಕವಿಗಳ ಸಾಲಿನಲ್ಲಿ ನಕ್ಷತ್ರದಂತೆ ಮಿಂಚಿ ಹೋದ ಸಿದ್ದಣ್ಣ ಮಸಳಿ ಅವರು ಬಹಳಷ್ಟು ಕಾಲ ಬರೆಯದಿದ್ದರೂ ಬರೆದ ಕವನಗಳು ಕೀಟ್ಸ್, ಶೆಲ್ಲಿ, ಗ್ರೇ ಅವರಂತಹ ಕವನಗಳನ್ನು ನೆನಪಿಗೆ ತರುವಂತಿವೆ.

ಯುವ ಭಾರತ ಸುದ್ದಿ ಗದಗ :
ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ 74ನೇ ಜಯಂತಿ ಸಮಾರಂಭ ಏರ್ಪಡಿಸಲಾಗಿತ್ತು.

ಬೆಳಗಾವಿ ಲಿಂಗರಾಜ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೇಶ ಗುರನಗೌಡರ ಬರೆದ ಸಿದ್ದಣ್ಣ ಮಸಳಿ ಅವರ ಪುಸ್ತಕ ಸೇರಿದಂತೆ ಹಲವು ಪುಸ್ತಕಗಳು ಲೋಕಾರ್ಪಣೆಗೊಂಡವು.

ಪುಸ್ತಕದ ಕುರಿತು ಜಯಂತಿ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ಧ ಪೂಜ್ಯ ಡಾ. ತೋoಟದ ಸಿದ್ಧರಾಮ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಸಮಕಾಲದ ಕವಿಗಳ ಸಾಲಿನಲ್ಲಿ ನಕ್ಷತ್ರದಂತೆ ಮಿಂಚಿ ಹೋದಂತ ಸಿದ್ದಣ್ಣ ಮಸಳಿ ಅವರು ಬಹಳಷ್ಟು ಕಾಲ ಬರೆಯದಿದ್ದರೂ ಬರೆದ ಕವನಗಳು ಕೀಟ್ಸ್, ಶೆಲ್ಲಿ, ಗ್ರೇ ಅವರಂತಹ ಕವನಗಳನ್ನು ನೆನಪಿಗೆ ತರುವಂತಿವೆ ಎಂದು ಹೇಳಿದರು. ಹಲವಾರು ಕಾರಣಗಳಿಂದ ಮುಂದೆ ಕವನಗಳನ್ನು ಬರೆಯುವದನ್ನೇ ಬಿಟ್ಟುದು ಕನ್ನಡ ಸಾಹಿತ್ಯ ಲೋಕಕ್ಕಾದ ನಷ್ಟ ಎಂದು ಖೇದ ವ್ಯಕ್ತಪಡಿಸಿದರು. ಆದರೆ ಶ್ರೀಮಠ ಇಂದಿನ ನವ ಪೀಳಿಗೆಗೆ ಹಳೆಯ ಕವಿಗಳು ಹಾಗೂ ಸಾಹಿತಿಗಳನ್ನು ಪರಿಚಯಿಸುವ ಕೆಲಸದಲ್ಲಿ ತೊಡಗಿರುವದರಿಂದ
ಈ ಪುಸ್ತಕ ಶ್ರೀ ಮಠದಿಂದ ಪ್ರಕಟವಾಗಿ ಲೋಕಾರ್ಪಣೆ ಗೊಂಡುದು ತುಂಬಾ ಸಂತೋಷದ ವಿಷಯವೆಂದರು.

ಈ ಜಯಂತಿ ಉತ್ಸವದಲ್ಲಿ
ಮುಂಡರಗಿಯ ಪೂಜ್ಯ ಶ್ರೀ ನಿಜಗುಣಪ್ರಭು ತೋoಟದಾರ್ಯ ಮಹಾಸ್ವಾಮಿಗಳು, ಚಿಂಚಣಿಯ ಪೂಜ್ಯ ಶ್ರೀ ಅಲ್ಲಮ ಪ್ರಭು ಮಹಾಸ್ವಾಮಿಗಳು, ಶಿರಕೋಳದ ಪೂಜ್ಯ ಶ್ರೀ ಗುರುಬಸವ ಮಹಾಸ್ವಾಮಿಗಳು ಭೈರನಟ್ಟಿಯ ಪೂಜ್ಯ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಹಂದಿಗುಂದದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಯಶವಂತನಗರದ ಶ್ರೀ ಗಂಗಾಧರ್ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಜಯಂತಿ ಉತ್ಸವದಲ್ಲಿ ಬೆಂಗಳೂರಿನ ಶ್ರೀಮತಿ ಎಂ. ಎಸ್. ಆಶಾದೇವಿ ಅವರು ತಮ್ಮ ಉಪನ್ಯಾಸ ನೀಡಿದರು.

ಬಹುಮುಖಿ ವ್ಯಕ್ತಿತ್ವದ
ಕವಿ ಸಿದ್ದಣ್ಣ ಮಸಳಿ :
ಕವಿ ಸಿದ್ದಣ್ಣ ಮಸಳಿ. ( 1927 – 2017)
ಸಿದ್ದಣ್ಣ ಮಸಳಿ ಅವರು ತಮ್ಮ ‘ಪಂಜರದ ಪಕ್ಷಿ’ ಕವಿತೆಯಿಂದ ಪ್ರಸಿದ್ಧಿಗೆ ಬಂದುದು ನಾವೆಲ್ಲ ಪ್ರಾಥಮಿಕ ಶಾಲೆಗಳಲ್ಲಿ ಓದಿದ್ದು ಇoದಿಗೂ ನೆನಪಿದೆ. ದಿ. ಸಿದ್ದಣ್ಣ ಮಸಳಿ ಅವರ ಕುರಿತು ಅವರ ಜೀವನ ಹಾಗೂ ಅವರ ಕವನ ಸಂಕಲನಗಳಾದ ‘ಮನೆ ತುಂಬಿದ ಬೆಳಕು’, ‘ದೀಪಾವತಾರ’ ಹಾಗೂ ‘ಪಂಜರ ಪಕ್ಷಿ’ ಕುರಿತು ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದ ಡಾ.ಮಹೇಶ ಗುರನಗೌಡರ್ ಅವರು ಬರೆದ ಕಿರು ಹೊತ್ತಿಗೆಯನ್ನು ಗದಗಿನ ಪ್ರತಿಷ್ಠಿತ ತೋoಟದಾರ್ಯ ಶ್ರೀ ಮಠದಿಂದ ಪ್ರಕಟಗೊಂಡು ಮಂಗಳವಾರ ದಿ.21.02.2023 ರಂದು ಲಿಂಗೈಕ್ಯ ಡಾ. ತೋoಟದ ಜಗದ್ಗುರು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ 74 ನೆಯ ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾವೈಕ್ಯತಾ ದಿನಾಚರಣೆಯಲ್ಲಿ ಶ್ರೀಮಠದ ಅಪರೂಪದ ಕಾರ್ಯಕ್ರಮದಲ್ಲಿ ಜಗದ್ಗುರು ಡಾ.ತೋoಟದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳ ಸಮ್ಮುಖದಲ್ಲಿ ಹುಬ್ಬಳ್ಳಿಯ ಮಾಜಿ ಲೋಕ ಸಭಾ ಸದಸ್ಯ ಐ. ಜಿ. ಸನದಿ ಅವರು ಲೋಕಾರ್ಪಣೆ ಮಾಡಿದರು.

ಧಾರವಾಡ ಹಾಗೂ ಬೆಳಗಾವಿಯನ್ನು ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡು ಕನ್ನಡ ಕಾವ್ಯವನ್ನು ಅಮರಗೊಳಿಸಿದ ದಾರ್ಶನಿಕ ಕವಿ ಸಿದ್ದಣ್ಣ ಮಸಳಿ. ಅವರು ಇಂದಿನ ಬಹು ಜನರಿಗೆ ಗೊತ್ತಿರದ ಎಲೆಯ ಮರೆಯ ಹೂವಿನಂತೆ ಸಾಹಿತ್ಯ ಸೇವೆ ಮಾಡಿದ ಅಪರೂಪದ ಸಾಹಿತಿ.
ನಿಡಾರಂಭ ವ್ಯಕ್ತಿತ್ವದ ಸಿದ್ದಣ್ಣ ಮಸಳಿ ಅವರು ಸರಳತೆಯ ವ್ಯಾಖ್ಯಾನವಾಗಿದ್ದರು. ಅವರದು ಗಂಭೀರ ನಿಲುವು. ಆದರ್ಶ ಹಾಗೂ ಶಿಸ್ತಿನ ಬದುಕು. ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದ ಅವರು ಸಾಹಿತ್ಯದಲ್ಲಿ ಗಟ್ಟಿಯಾದುದನ್ನೇ ಬರೆದರು. ತಮ್ಮ ನೇರ ದಿಟ್ಟ ನಿಲುವುಗಳಿಂದ ಬದ್ಧರಾಗಿಯೇ ಬಾಳಿದರು. ಜೀವನೋತ್ಸಾಹವೇ
ಸಿದ್ದಣ್ಣ ಮಸಳಿ ಅವರ ಸಾಹಿತ್ಯದ ನಿಲುವಾಗಿತ್ತೆoಬುದು ಕಾವ್ಯಗಳಲ್ಲಿ ಎದ್ದು ಕಾಣುತ್ತದೆ. ಒಂದು ವಿಧದಲ್ಲಿ ಕಾವ್ಯವನ್ನು ತಪಸ್ಸಿನಂತೆ ಸ್ವೀಕರಿಸಿದ್ದರು. ಹಾಗಾಗಿ ಅವರು ಚಿರಂತನ ಕಾವ್ಯಗಳನ್ನೇ ಕನ್ನಡಕ್ಕೆ ನೀಡುವಂತಾಯಿತು. ಜನ ಮಾನಸದಿಂದ ಅಜ್ಞಾತರಾಗಿರುವ ಕವಿ ಸಿದ್ದಣ್ಣ ಮಸಳಿ ಅವರನ್ನು ಇಂದಿನ ಯುವ ಬರೆಹಗಾರರು, ಓದುಗರು ಅರಿಯಬೇಕಾಗಿದೆ. ಈ ಸದುದ್ದೇಶದಿಂದ ಅವರ ಸಂಕ್ಸಿಪ್ತ ಜೀವನ ಹಾಗೂ ಸಾಹಿತ್ಯದ ಮೇಲೆ ಬೆಳಕು ಬೀರುವ ಕೆಲಸವನ್ನು ಡಾ. ಮಹೇಶ ಗುರನಗೌಡರ್ ಅವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಸಿದ್ದಣ್ಣ ಮಸಳಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿಯವರು. ಹಿರೇಮಸಳಿಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯಪುರದಲ್ಲಿ ಮಾಧ್ಯಮಿಕ ಶಿಕ್ಷಣ, ಬಿ.ಎ.ಪದವಿ, ಬೆಳಗಾವಿಯಲ್ಲಿ ಬಿ.ಎಡ್. ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿಗಳನ್ನು ಗಳಿಸಿದರು.

ಸಿದ್ದಣ್ಣ ಮಸಳಿ 1952-1965 ಅವಧಿಯಲ್ಲಿ ಕೆಎಲ್‌ಇ ಸಂಸ್ಥೆಯ ಆರ್.ಎಲ್.ಎಸ್. ಹೈಸ್ಕೂಲ್‌ನಲ್ಲಿ ಸಹಶಿಕ್ಷಕರಾಗಿ, 1965-71 ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನ ಗಳತಗಿ ಯ ಶ್ರೀ ಪಿ. ಆರ್.ಚಿಕ್ಕೋಡಿ ಸೆಕೆಂಡರಿ ಶಾಲೆಯ
ಮುಖ್ಯೋಪಾಧ್ಯಾಯರಾಗಿ, 1971-80 ಅವಧಿಯಲ್ಲಿ ಸವದತ್ತಿಯ ಕೆಎಲ್‌ಇ ಎಸ್.ಕೆ. ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ, 1980-82 ಅವಧಿಯಲ್ಲಿ ಬೆಳಗಾವಿಯ ಕೆಎಲ್‌ಇ ಜಿ.ಎ.ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

ಸಿದ್ದಣ್ಣ ಮಸಳಿ ಅವರು 1982-2000 ಅವಧಿಯಲ್ಲಿ ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಯಲ್ಲಿ
ಸಹಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

ಸಿದ್ದಣ ಮಸಳಿ ಅವರು 1954ರಲ್ಲಿ ‘ಮನೆತುಂಬಿದ ಬೆಳಕು’, 1961ರಲ್ಲಿ ‘ದೀಪಾವತಾರ’, 2003ರಲ್ಲಿ ‘ಪಂಜರದ ಪಕ್ಷಿ’ ಕಾವ್ಯ ಸಂಕಲನ ಪ್ರಕಟಿಸಿದರು. ಸಂಚಾರಿ ಅಪ್ರಕಟಿತ ಕೃತಿ. ಇದಲ್ಲದೆ ರೇಡಿಯೋ ನಾಟಕಗಳು, ವಿವಿಧ ಪತ್ರಿಕೆಗಳಲ್ಲಿ ಕಥೆಗಳು, ವಿಮರ್ಶಾ ಲೇಖನಗಳು, ‘ಬಸವರಾಜ ಕಟ್ಟಿಮನಿ- ಬದುಕು ಬರೆಹ’ ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದರು.

ಸಿದ್ದಣ್ಣ ಮಸಳಿ ಅವರಿಗೆ 1958 ರಲ್ಲಿ ಮನೆತುಂಬಿದ ಬೆಳಕು ಕಾವ್ಯ ಕೃತಿಗೆ ಮೈಸೂರು ಸರ್ಕಾರದಿಂದ 1000 ರೂಪಾಯಿಗಳ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1962 ರಲ್ಲಿ, ದೀಪಾವತಾರ ಕಾವ್ಯಕೃತಿಗೆ ಆಕಾಶವಾಣಿ ಕೇಂದ್ರದಿಂದ ಮನ್ನಣೆ, ದೆಹಲಿಯಲ್ಲಿ ನಡೆದ ಸರ್ವ ಭಾಷಾ
ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಆಹ್ವಾನ, ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯಿಂದ ಗೌರವ ಮುಂತಾದ ಅನೇಕ ಗೌರವಗಳು ಸಂದಿದ್ದವು.

ಸಿದ್ದಣ್ಣ ಮಸಳಿ ಅವರ ಒಡನಾಡಿಗಳು ಹಾಗೂ ಸ್ನೇಹಿತರಾಗಿದ್ದ ಪ್ರಾ.ಬಿ. ಎಸ್. ಗವಿಮಠ, ಈಶ್ವರ ಕಾಪಸೆ, ಡಾ. ಬಸವರಾಜ ಜಗಜಂಪಿ, ಎಲ್. ಎಸ್. ಶಾಸ್ತ್ರಿ, ಡಾ. ಮಹಾದೇವ ಗಿಂಡೆ ಅವರು ಮಸಳಿ ಅವರೊಂದಿಗಿನ ಒಡನಾಟ ಹಾಗೂ ಆತ್ಮೀಯ ನೆನಪುಗಳನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.


Spread the love

About Yuva Bharatha

Leave a Reply

Your email address will not be published. Required fields are marked *

twenty − ten =