ಬರಪೀಡಿತ ನಾಡಿಗೆ ಕಳಸಾ- ಬಂಡೂರಿ ಜಲಾಮೃತ- ಕೇಂದ್ರ ಸರಕಾರದ ದಿಟ್ಟ ನಿರ್ಣಯ : ಡಾ.ಸೋನಾಲಿ ಸರ್ನೋಬತ್
ಯುವ ಭಾರತ ಸುದ್ದಿ , ಖಾನಾಪುರ :
ಹಲವು ದಶಕಗಳಿಂದ ಕಗ್ಗಂಟಾಗೇ ಉಳಿದಿದ್ದ ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ- ಬಂಡೂರಿ ಯೋಜನೆಗೆ ಅನುಮೋದನೆ ನೀಡುವ ಮೂಲಕ ಕೇಂದ್ರದ ಬಿಜೆಪಿ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕೇಂದ್ರ ಜಲ ಆಯೋಗ ಕಳೆದ ಡಿಸೆಂಬರ್ 29 ರಂದು ಕರ್ನಾಟಕ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಯನ್ನು ಅನುಮೋದಿಸಿದೆ. ಪ್ರಸ್ತಾವಿತ ಬಂಡೂರಿ ಅಣೆಕಟ್ಟಿನಲ್ಲಿ ಮಹದಾಯಿ ನದಿಯ 2.18 ಟಿಎಂಸಿ ಮತ್ತು ಉದ್ದೇಶಿತ ಕಳಸಾ ಅಣೆಕಟ್ಟಿನಲ್ಲಿ 1.72 ಟಿಎಂಸಿ ನೀರನ್ನು ತಿರುಗಿಸಲು ಕರ್ನಾಟಕಕ್ಕೆ ಹಸಿರು ನಿಶಾನೆ ತೋರಿಸಿದೆ. ಕೇಂದ್ರ ಸರಕಾರದ ಈ ನಿರ್ಧಾರ ಈ ಭಾಗದ ಜನಸಾಮಾನ್ಯರಲ್ಲಿ ನೆಮ್ಮದಿಯ ಭಾವ ಮೂಡಿಸಿದೆ. ವಾಸ್ತವದಲ್ಲಿ ಕೇಂದ್ರ ಸರಕಾರದ ಈ ನಿರ್ಣಯ ಅಚ್ಚರಿಯನ್ನೂ ಮೂಡಿಸಿದೆ ಎಂದು ತಿಳಿಸಿದ್ದಾರೆ.
ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಈ ಯೋಜನೆ ಹಲವು ದಶಕಗಳ ಕಾಲ ಕೇವಲ ದಾಖಲೆಗಳಲ್ಲೇ ಇತ್ತು. 2002ರಲ್ಲಿ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದರೂ ಗೋವಾ ಸರಕಾರ ಜೀವ ಸಂಕುಲಗಳ ಅಳಿವು- ಉಳಿವಿನ ಕಾರಣ ಮುಂದೆ ಮಾಡಿ ಯೋಜನೆಗೆ ಆಕ್ಷೇಪಣೆಗಳನ್ನು ಎತ್ತಿದಾಗ ಇಡೀ ಯೋಜನೆ ತೊಂದರೆಗೆ ಸಿಲುಕಿತ್ತು. ಇದರ ನಂತರ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಂದಿನ ಸರಕಾರ ಯೋಜನೆಗೆ ತನ್ನ ಅನುಮೋದನೆ ಮತ್ತು ಧನಸಹಾಯವನ್ನು ತಡೆಹಿಡಿಯಿತು. ಇದು ಕರ್ನಾಟಕ- ಗೋವಾ ಮಧ್ಯೆ ಕೇವಲ ಅಭಿವೃದ್ಧಿಯ ವಿವಾದವಾಗದೆ ರಾಜಕೀಯ ವಿಷಯವಾಗಿಯೂ ಮಾರ್ಪಟ್ಟಿತ್ತು. ದೇಶದ ಎರಡು ದೊಡ್ಡ ಬಲಾಢ್ಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್ ಗಳ ಪಾಲಿಗೆ ಇದು ಇರಿಸುಮುರುಸಿನ ವಿಷಯವಾಗಿ ಮಾರ್ಪಟ್ಟಿದ್ದಂತೂ ಹೌದು
ಎಂದು ಹೇಳಿದ್ದಾರೆ.
ಆದರೆ ಬಿಜೆಪಿ ಈ ವಿಷಯದಲ್ಲಿ ಏಕರೂಪದ ನಿರ್ಣಯಕ್ಕೆ ಬರುವಲ್ಲಿ ಹೆಚ್ಚು ಕಾಲ ಹಿಡಿಯಲಿಲ್ಲ. 2017ರ ಡಿ.21ರಂದು ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ ಮನೋಹರ ಪರಿಕ್ಕರ್ “ಕುಡಿಯುವ” ಕಾರಣಕ್ಕೆ ನೀರಿನ ಬಳಕೆಗೆ ತಮ್ಮ ಆಕ್ಷೇಪವಿಲ್ಲ ಎಂದು ಹೇಳಿದ್ದರು. ಯಾವ ಪರಿಕ್ಕರ್ ಮೊದಲಿಗೆ ಆಕ್ಷೇಪವೆತ್ತಿದ್ದರೋ ಅವರೇ ಮಾನವೀಯ ನೆಲೆಯಲ್ಲಿ ಔದಾರ್ಯ ತೋರಿದ್ದರು.
ಆದರೆ ಕಾಂಗ್ರೆಸ್ ಮಾತ್ರ ಮಹದಾಯಿ ವಿಚಾರದಲ್ಲಿ ದ್ವಿಪಾತ್ರ ಅಭಿನಯ ಮಾಡುತ್ತಲೇ ಬಂದಿದೆ. ಗೋವಾ ಬಿಜೆಪಿ ತನ್ನ ನಿರ್ಧಾರಗಳನ್ನು ಮೃದುವಾಗಿಸಿಕೊಂಡರೂ ಅಲ್ಲಿನ ಕಾಂಗ್ರೆಸ್ ಮಾತ್ರ ನೀರು ಕೊಡಬಾರದೆಂಬ ನಿರ್ಧಾರ ಯಾವತ್ತೂ ಬದಲಿಸಲಿಲ್ಲ. ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರು ಗೋವಾ ಭೇಟಿ ವೇಳೆ “ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ನೀರು ಕೊಡಲಾಗದು” ಎಂದು ಹೇಳಿದ್ದು ಕರ್ನಾಟಕದ ಜನತೆ ಪಾಲಿಗೆ ಅಳಿಸದ ನೆನಪಾಗಿ ಉಳಿದಿದೆ.
ಮಹದಾಯಿ ವಿಷಯದ ಜಟಿಲತೆ ಸಾಮಾನ್ಯವಲ್ಲ. “ನೀ ಕೊಡೆ, ನಾ ಬಿಡೆ” ಎಂಬ ಜಿದ್ದಿನ ಹೋರಾಟ ಕರ್ನಾಟಕದಲ್ಲಿ ತಾರಕದಲ್ಲಿತ್ತು. ಉಭಯ ರಾಜ್ಯಗಳಲ್ಲಿ ಬಿಜೆಪಿಯ ಕೈಯ್ಯಲ್ಲೇ ಆಡಳಿತದ ಚುಕ್ಕಾಣಿ ಇರುವುದು ಕೇಂದ್ರ ಸರಕಾರದ ಪಾಲಿಗೆ ಇನ್ನೊಂದು ಇಕ್ಕಟ್ಟಾಗಿತ್ತು. ಈ ಮಧ್ಯೆ ಎರಡನ್ನೂ ಸರಿದೂಗಿಸಿ ನಿರ್ಣಯ ನೀಡುವ ಹೊಣೆ ಹೊತ್ತ ಕೇಂದ್ರ ಸರಕಾರ ದ್ವಂದ್ವದಲ್ಲಿ ಸಿಲುಕಿದ್ದು ನಿಜ. ಆದಾಗ್ಯೂ ವಿವಾದ ಬಗೆಹರಿಯುವ ಆಶಯವೇ ಅತಂತ್ರವಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ಗೋವಾದಲ್ಲೂ ಸ್ವಪಕ್ಷೀಯ ಸರಕಾರವಿರುವುದನ್ನೂ ಲೆಕ್ಕಿಸದೆ ‘ಯೋಜನೆಗೆ ಅಸ್ತು’ ನಿರ್ಧಾರ ಕೈಗೊಂಡಿರುವುದು ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶದ ಜನತೆಯ ಪಾಲಿಗೆ ‘ಜಲಾಮೃತ’ದ ಸಂತೋಷ ತಂದಿದೆ.
ಸುದೀರ್ಘ ಅವಧಿಯ ಸಮಸ್ಯೆಯನ್ನು ಚಾಣಾಕ್ಷ ನಡೆ, ದಿಟ್ಟತನದ ನಿರ್ಧಾರದಿಂದ ಕೇಂದ್ರ ಸರಕಾರ ಇತ್ಯರ್ಥಪಡಿಸಿದ ಮೇಲೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮಾತ್ರ ಚುನಾವಣೆ ಹೊಸ್ತಿಲಲ್ಲಿ ಈ ವಿಚಾರ ಹಿಡಿದುಕೊಂಡು ವಿವಾದವಿನ್ನೂ ಬಗೆಹರಿದಿಲ್ಲ ಎಂಬಂತೆ ಬಿಂಬಿಸಲು ಹೊರಟಂತಿದೆ. ವಿವಾದಕ್ಕೆ ತೆರೆ ಎಳೆದ ಮೇಲೂ ‘ಮಹದಾಯಿ ಜನಾಂದೋಲನ’ ಹಮ್ಮಿಕೊಂಡಿರುವುದು ವಿಪರ್ಯಾಸವೇ ಸರಿ. ಯೋಜನೆಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದ ನಂತರ ಯೋಜನೆ ಜಾರಿಗಾಗಿ ಹೋರಾಟದ ಅಗತ್ಯವಿದೆಯೇ ಎಂಬುದೀಗ ವ್ಯಾಪಕ ವಿಶ್ಲೇಷಣೆಗೆ ಒಳಪಡುವಂತಾಗಿದೆ.
ಏನೇ ಆದರೂ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳ ದಿಟ್ಟ ನಿರ್ಧಾರ ರಾಜ್ಯದ ಜನರ ಪಾಲಿಗೆ ಬಹುದೊಡ್ಡ ಉಡುಗೊರೆಯಾಗಿ ಪರಿಣಿಮಿಸಿದೆ. ಇದಕ್ಕಾಗಿ ಎರಡೂ ಸರಕಾರಗಳಿಗೆ ಜನರ ಪರವಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.