ಬೆಳಗಾವಿ ಅಭಿವೃದ್ಧಿಗೆ ಎಫ್ಒಎಬಿ ಕಾರ್ಯ ಪ್ರಶಂಸನೀಯ: ಲೋಗೋ ಲೋಕಾರ್ಪಣೆಗೊಳಿಸಿದ ರವಿಶಂಕರ ಗುರೂಜಿ
ಯುವ ಭಾರತ ಸುದ್ದಿ ಬೆಳಗಾವಿ : ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳೆಲ್ಲ ಬೆಳಗಾವಿಯ ಅಭಿವೃದ್ಧಿಗಾಗಿ ಒಗ್ಗೂಡಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಎಂದು ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ ಗುರೂಜಿ ಪ್ರಶಂಸಿಸಿದ್ದಾರೆ.
ಮಂಗಳವಾರ ಇಲ್ಲಿಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಸಭಾಭವನದಲ್ಲಿ ಫೆಡರೇಶನ್ ಆಫ್ ಅಸೋಸಿಯೇಶನ್ಸ್ ಆಫ್ ಬೆಳಗಾವಿ (ಎಫ್ಒಎಬಿ) ಲೋಗೋ ಲೋಕಾರ್ಪಣೆಗೊಳಿಸಿ ಅವರು ಆಶಿರ್ವಚನ ನೀಡುತ್ತಿದ್ದರು. ಬೆಳಗಾವಿ ಎಂದರೆ ಒಂದು ಮೂಲೆಯಲ್ಲಿರುವ ಪ್ರದೇಶ, ಬೇಡದ ಕಾರಣಕ್ಕೆ ಸುದ್ದಿಯಲ್ಲಿರುವ ಪ್ರದೇಶ ಎನ್ನುವ ಭಾವನೆ ಹೊರಗಡೆ ಇದೆ. ಆದರೆ ನಿಜ ಸ್ಥಿತಿ ಆ ರೀತಿಯ ಇಲ್ಲ. ಇಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ. ಇಲ್ಲಿನ ಉದ್ಯಮಿಗಳು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರೆಲ್ಲ ಸೇರಿ ಇಂತಹ ಒಂದು ಸಂಘಟನೆ ಕಟ್ಟಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಮಾಜದ ಉನ್ನತಿಗೆ ಇಂತಹ ಪ್ರಯತ್ನ ಶ್ಲಾಘನೀಯ ಎಂದು ಅವರು ಹೇಳಿದರು.
ಬೆಳಗಾವಿಯ ಇತಿಹಾಸ, ಬೆಳಗಾವಿಯ ಅಂತರ್ ಶಕ್ತಿಗಳನ್ನೆಲ್ಲ ತಿಳಿದು ನಿಜವಾಗಿ ಸಂತೋಷವಾಗಿದೆ. ಇಷ್ಟೊಂದು ಉದ್ಯಮಿಗಳು ಇಲ್ಲಿಯ ನೆಲದಲ್ಲಿ ತಯಾರಾಗಿದ್ದಾರೆ ಎನ್ನುವುದೇ ಖುಷಿ ನೀಡುವ ಸಂಗತಿ. ಎಫ್ಒಎಬಿ ಬೆಳಗಾವಿಯನ್ನು ಔನ್ನತ್ಯಕ್ಕೇರಿಸಲು ಮಾಡುತ್ತಿರುವ ಕೆಲಸ ಮೆಚ್ಚುವಂತದ್ದು ಎಂದು ರವಿಶಂಕರ ಗುರೂಜಿ ಹೇಳಿದರು.
ರಾಜಕಾರಣಿಗಳು ತಮ್ಮ ಅವಧಿ ಪೂರ್ತಿ ಆರೋಪ ಪ್ರತ್ಯಾರೋಪ, ಜಗಳ ಮಾಡುವುದನ್ನು ನಿಲ್ಲಿಸಬೇಕು. ಇದರಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ. ಕೊನೆಯ 6 ತಿಂಗಳು ರಾಜಕೀಯ ಮಾಡಲಿ. ಆದರೆ ಉಳಿದ ಅವಧಿಯನ್ನು ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಅವರು ಕರೆ ನೀಡಿದರು.
ಬೆಳಗಾವಿ ಸೇರಿದಂತೆ ಎಲ್ಲೆಡೆ ಜನರಲ್ಲಿ ಖಿನ್ನತೆ ಹೆಚ್ಚಾಗುತ್ತಿದೆ. ಮಾದಕ ವಸ್ತುಗಳ ಸೇವನೆ ಅತಿಯಾಗುತ್ತಿದೆ. ಕೋವಿಡ್ ನಂತರದ ದಿನಗಳಲ್ಲಿ ಪ್ರತಿ 40 ಸೆಕೆಂಡ್ ಗೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ವಿದ್ಯಾರ್ಥಿಗಳಲ್ಲಿ ಊಹಿಸಲು ಅಸಾಧ್ಯವಾದ ಮಟ್ಟಿಗೆ ಖಿನ್ನತೆ ಕಾಡುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಮಕ್ಕಳನ್ನು ಒಂದೆಡೆ ಸೇರಿಸುವ ಕೆಲಸ ಮಾಡುವುದಾದರೆ 6 ದಿನಗಳ ಶಿಬಿರ ಸಂಘಟಿಸುವ ಜವಾಬ್ದಾರಿಯನ್ನು ಆರ್ಟ್ ಆಫ್ ಲಿವಿಂಗ್ ತೆಗೆದುಕೊಳ್ಳುತ್ತದೆ ಎಂದು ರವಿಶಂಕರ ಗುರೂಜಿ ತಿಳಿಸಿದರು.
ಮೆಡಿಟೇಶನ್ ಸಮಾಜದ ಇಂದಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ದುರದೃಷ್ಟವೆಂದರೆ ಇದಕ್ಕೆ ಜಾತಿ ಬಣ್ಣ ನೀಡಲಾಗುತ್ತಿದೆ. ಇದು ನಿಜವಾಗಿ ಜೀವನದ ಒಂದು ಭಾಗವಾಗಬೇಕಿದೆ. ಒತ್ತಡ, ಉದ್ವೇಗ ನಿವಾರಣೆಯಾದರೆ ಮನುಷ್ಯ ನೆಮ್ಮದಿ ಕಾಣುತ್ತಾನೆ. ಮೆಡಿಟೇಶನ್ ಮತ್ತು ಆಯುರ್ವೇದಗಳ ಕುರಿತು ಇರುವ ಪೂರ್ವಾಗ್ರಹ ಪೀಡಿತ ಭಾವನೆ ಹೊಗಲಾಡಿಸಬೇಕಿದೆ.
ಚೀನಾ ದೇಶವು ಅಮೆರಿಕದ ನೆರವಿನಿಂದ ಕೃತಕವಾಗಿ ವೈರಸ್ ಸಿದ್ಧಪಡಿಸಿ ಬಿಟ್ಟಿತು. ಅದು ಜಗತ್ತನ್ನೇ ಹಾಳುಮಾಡುವ ಕೃತ್ಯ. ಜನಸಂಖ್ಯೆ ನಿಯಂತ್ರಣಕ್ಕೆ ಇಂಥ ಕೃತ್ಯ ಮಾಡಬಾರದು. ಆದರೆ ಭಾರತೀಯರಾದ ನಾವು ಮಾತ್ರ ಆಂಟಿವೈರಸ್ ಲಸಿಕೆ ಕಂಡುಹಿಡಿದು ಜಗತ್ತಿಗೆ ನಮ್ಮ ಸಾಮರ್ಥ್ಯ ತೊರಿದೆವು. ವ್ಯಾಕ್ಸಿನೇಶನ್ ನಿಂದ ಕೇವಲ ಶೇ.60ರಷ್ಟು ಪರಿಹಾರವಿರುವಾಗ ನಮ್ಮಲ್ಲಿ 18 ಗಿಡಮೂಲಿಕೆಗಳಿಂದ ತಯಾರಿಸಲಾಗಿರುವ ಔಷಧ ನೂರಕ್ಕೆ ನೂರರಷ್ಟು ಕೋವಿಡ್ ಗೆ ಪರಿಹಾರ ನೀಡುತ್ತದೆ ಎನ್ನುವುದು ಸಾಬೀತಾಗಿದೆ ಎಂದು ವಿವರಿಸಿದರು.
ಇದಕ್ಕೂ ಮೊದಲು ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಬೆಳಗಾವಿ ಅಭಿವೃದ್ಧಿಗೆ ಹಿನ್ನಡೆಯಾಗಿರುವ ಸಮಸ್ಯೆಗಳನ್ನು ಗುರುತಿಸುವ ಮತ್ತು ಎಫ್ಒಎಬಿ ಕೋರ್ ಕಮಿಟಿ ಆಗಾಗ ಸಭೆ ಸೇರಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಬೆಳಗಾವಿ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕಾದ ವಿಷಯಗಳ ಪಟ್ಟಿ ಮಾಡಿ ಚರ್ಚಿಸುವ ಕೆಲಸವಾಗಬೇಕು ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ.ವಿದ್ಯಾಶಂಕರ, ಬೆಳಗಾವಿ ಮೊದಲಿಗಿಂತ ಈಗ ಸಾಕಷ್ಟು ಬದಲಾಗಿದೆ. ಜನರಲ್ಲಿ ತಿಳಿವಳಿಕೆ ಮೂಡಿಸುವ ಮೂಲಕ ಇನ್ನಷ್ಟು ಬದಲಾವಣೆ ಸಾಧ್ಯವಿದೆ. ಮುಂದಿನ ದಿನಗಳಲ್ಲಿ ನಗರಕ್ಕೆ ಉತ್ತಮ ಭವಿಷ್ಯವಿದೆ. ಇಲ್ಲಿನ ಉದ್ಯಮಿಗಳ ಜೊತೆ ಚರ್ಚಿಸಿ, ಒಂದು ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು ಎಂದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ನಿತಿನ್ ಗಂಗನೆ, ಬೆಳಗಾವಿ ಅತ್ಯಂತ ಸುಂದರ ನಗರವಾಗಿದ್ದು, ಎಲ್ಲರೂ ಕೈಜೋಡಿಸಿ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದರು.
ಕಮಾಂಡಂಟ್ ಎಮ್ಎಲ್ಐಆರ್ ಸಿ ಬ್ರಿಗೇಡಿಯರ್ ಜಾಯ್ ದೀಪ ಮುಖರ್ಜಿ, ಮಿಲ್ಟ್ರಿ ಕಮಾಂಡರ್ ಜೆಎಲ್ ವಿಂಗ್ ಮೇಜರ್ ವಿ ಕೆ ಗುರಂಗ್, ಎರ್ ಫೋರ್ಸ್ ಡೈರಕ್ಟರ್ ರಾಜೇಶ ಕುಮಾರ ಮೌರ್ಯ ಮೊದಲಾದವರು ಮಾತನಾಡಿದರು.
ಎಫ್ಒಎಬಿ ಕೋ ಆರ್ಡಿನೇಟರ್ ಚೈತನ್ಯ ಕುಲಕರ್ಣಿ ಸ್ವಾಗತಿಸಿದರು. ಡಾ.ರಾಜೇಂದ್ರ ಬೆಳಗಾಂವ್ಕರ್ ಬೆಳಗಾವಿಯ ಸಮಗ್ರ ಪರಿಚಯ ನೀಡಿದರು. ಚೆಂಬರ್ ಆಫ್ ಕಾಮರ್ಸ್ ಚೇರಮನ್ ಹೇಮೇಂದ್ರ ಪೋರವಾಲ್ ರವಿಶಂಕರ ಗುರೂಜಿ ಅವರನ್ನು ಸನ್ಮಾನಿಸಿದರು. ಎಫ್ಒಎಬಿ ಸದಸ್ಯರಾಗಿರುವ 50ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಅಧ್ಯಕ್ಷ, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.