ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ||ನಿಟ್ಟುಸಿರು ಬಿಡುವ ಮುನ್ನವೇ ನದಿಗಳು ತುಂಬಿ ಹರಿಯುತ್ತಿದ್ದು,||ಸಂತ್ರಸ್ತರಲ್ಲಿ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ.!!
ಸತೀಶ ಮನ್ನಿಕೇರಿ
ಯುವ ಭಾರತ ಸುದ್ದಿ
ಗೋಕಾಕ: ಕಳೆದ ವರ್ಷದ ಪ್ರವಾಹದಿಂದ ತತ್ತರಿಸಿದ್ದ ಘಟಪ್ರಭಾ ನದಿ ತೀರದ ಹಳ್ಳಿಗಳ ಜನರು ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮನೆ ಕಳೆದುಕೊಂಡವರ ಬದುಕು ಮೂರಾಬಟ್ಟೆ ಆಗಿದ್ದು, ಸರಕಾರದ ಸಹಾಯಧನದಿಂದ ಮನೆಕಟ್ಟಿಕೊಂಡು ಕೆಲವರು ಹೊಸ ಬದುಕು ಆರಂಭಿಸಿದ್ದಾರೆ. ನಿಟ್ಟುಸಿರು ಬಿಡುವ ಮುನ್ನವೇ ನದಿಗಳು ತುಂಬಿ ಹರಿಯುತ್ತಿದ್ದು, ಸಂತ್ರಸ್ತರಲ್ಲಿ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ.
ಬೆಳಗಾವಿ ಹಾಗೂ ಮಹಾರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಿಡಕಲ್ ಜಲಾಶಯ ಹಾಗೂ ಶಿರೂರು ಜಲಾಶಯಗಳಿಂದ ನೀರು ಹರಿಬಿಟ್ಟಿದ್ದು, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿಹರಿಯುತ್ತಿವೆ. ಶುಕ್ರವಾರ ಮತ್ತೆ ಮಹಾರಾಷ್ಟ್ರದ ನಾನಾ ಭಾಗದಲ್ಲಿ ಮತ್ತೆ ವರುಣ ಅಬ್ಬರಿಸುತ್ತಿದ್ದು, ಘಟಪ್ರಭಾ ನದಿ ತಟದ ಜನರಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಎಂಟು ಸೇತುವೆ ಜಲಾವೃತ: ಮಾರ್ಕಂಡೇಯ ಹಾಗೂ ಘಟಪ್ರಭಾ ನದಿಗಳ ಹರಿವು ಹೆಚ್ಚಾಗಿರುವುದರಿಂದ ಗೋಕಾಕ ತಾಲೂಕಿನ ಅಂಕಲಗಿ, ಉದಗಟ್ಟಿ, ಗೋಕಾಕ ನಗರದಿಂದ ಸಂಪರ್ಕ ಕಲ್ಪಿಸುವ ಶಿಂಗಳಾಪೂರ ಬ್ರೀಡ್ಜ್ ಕಂ ಬ್ಯಾರೇಜ್ ಸೇತುವೆ. ಮೂಡಲಗಿ ತಾಲೂಕಿನ ಸುಣಧೋಳಿ, ಕಮಲದಿನ್ನಿ, ಹುಣಶ್ಯಾಳ ಪಿವೈ, ಢವಳೇಸ್ವರ, ಅವರಾದಿ ಸೇತುವೆ ಸೇರಿ ಎಂಟು ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ. ಮಳೆರಾಯನ ಆರ್ಭಟ ಹೀಗೆ ಮುಂದುವರಿದಲ್ಲಿ ಮತ್ತೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪ್ರಮುಖ ಸೇತುವೆಗಳು ಜಲಾವೃತಗೊಳ್ಳುವ ಆತಂಕದಲ್ಲಿದೆ.
ಪ್ರವಾಹದ ಆತಂಕದಲ್ಲಿರುವ ಗ್ರಾಮಸ್ಥರು: ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಹರಿದಿರುವ ಘಟಪ್ರಭೆಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಘಟಪ್ರಭೆಯ ತೀರದ ಗ್ರಾಮಗಳಾದ ಶಿಂಗಳಾಪೂರ, ಲೋಳಸೂರ, ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ಕಲಾರಕೊಪ್ಪ, ಹಡಗಿನಾಳ ಹಾಗೂ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ, ತಿಗಡಿ, ಮುಸಗುಪ್ಪಿ, ಪಟಗುಂದಿ, ಕಮಲದಿನಿ, ಸುಣಧೋಳಿ, ಭೈರನಟ್ಟಿ, ಮುನ್ಯಾಳ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಸೇರಿದಂತೆ ಇನ್ನು ಹಲವಾರು ಗ್ರಾಮಗಳ ಗ್ರಾಮಸ್ಥರು ಪ್ರವಾಹದ ಆತಂಕ ಎದುರಿಸುತ್ತಿದ್ದಾರೆ.
ಪ್ರವಾಹಕ್ಕೆ ಸಜ್ಜಾದ ತಾಲೂಕಾಡಳಿತ: ಪ್ರವಾಹ ಸಂಭವಿಸುವ ಹಿನ್ನಲೆಯಲ್ಲಿ ತಹಶೀಲದಾರರು ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಮಾಡಿದ್ದು, ಗಂಜಿ ಕೇಂದ್ರಗಳಿಗಾಗಿ ಕಟ್ಟಡಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದಾರೆ. ಪ್ರವಾಹ ಎದುರಾಗುವ ನದಿ ತೀರದ ಪ್ರತಿ ಗ್ರಾಮಗಳಲ್ಲೂ ಅಧಿಕಾರಿಗಳನ್ನು ನೇಮಕಮಾಡಲಾಗಿದೆ. ನದಿ ದಡದಲ್ಲಿರುವ ಜನರು ೨೪ ಗಂಟೆ ಜಾಗೃತಿಯಿಂದಿರಲು ತಹಶೀಲದಾರರು ಸೂಚನೆ ನೀಡಿದ್ದಾರೆ.
ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತಗಳು: ಗೋಕಾಕ ತಾಲೂಕಿನ ಗೋಕಾಕ ಜಲಪಾತ ಹಾಗೂ ಗೊಡಚಿನಮಲ್ಕಿ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಈ ಜಲಧಾರೆಗಳ ಸೌಂದರ್ಯವನ್ನು ನೋಡಿದರೆ ಮೈ ಜುಮ್ ಅನ್ನಿಸುವಂತಿದೆ. ಘಟಪ್ರಭಾ ನದಿಗೆ ಹರಿದು ಬರುತ್ತಿರುವ ಭಾರೀ ಪ್ರಮಾಣದ ನೀರು ಹಾಲಿನ ನೊರೆಯಂತೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ನದಿ, ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ವಾತಾವರಣ ಸೃಷ್ಟಿಯಾಗಿದೆ.