ಹುಪರಿಯಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ ಪತ್ತೆ
ಬೆಳಗಾವಿ. ಜು.: 6: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹುಪರಿ ಪಟ್ಟಣದಲ್ಲಿಂದು 12 ಶತಮಾನದಲ್ಲಿ ನಿರ್ಮಿತವಾದ ಎನ್ನಲಾದ ಭಗವಾನ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಎರಡು ಪ್ರತಿಮೆಗಳು ದೊರಕಿವೆ.
ಬೆಳ್ಳಿ ನಗರ ಎಂದು ಗುರುತಿಸಿಕೊಂಡಿರುವ ಹುಪರಿ ಪಟ್ಟಣದಲ್ಲಿನ ಶ್ರೀ ಚಂದ್ರಪ್ರಭ ಜೈನ ಮಂದಿರದ ಜೀರ್ಣೋದ್ಧಾರದ ಕೆಲಸ ನಡೆಯುತ್ತಿದೆ. ಮಂದಿರದ ಗರ್ಭ ಗುಡಿಯ ಎದುರಿಗಿನ ಭಾಗದಲ್ಲಿ ಭೂಮಿ ಅಗೆಯುವ ಕೆಲಸ ನಡೆದಿತ್ತು. ಸುಮಾರು ಐದು ಅಡಿ ಭೂಮಿ ಅಗಿದ ಸಂದರ್ಭದಲ್ಲಿ ಒಂದು ಪ್ರತಿಮೆ ಆಕೃತಿ ಕಂಡು ಬಂದಿದೆ.ಇದರಿಂದ ಅಚ್ಚರಿಗೊಂಡ ಶ್ರಾವಕರು ನಿಧಾನ ಗತಿಯಲ್ಲಿ ಭೂಮಿಯನ್ನು ಅಗಿದು ನೋಡಿದಾಗ ಅಲ್ಲಿ ಸಿಕ್ಕಿದ್ದು ಭಗವಾನ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ. ಈ ಪ್ರತಿಮೆಯನ್ನು ಹೊರ ತೆಗೆದು ಮತ್ತೆ ಅದರ ಪಕ್ಕದಲ್ಲಿ ಇನ್ನಷ್ಟು ಭೂಮಿಯನ್ನು ಅಗೆದಾಗ ಅಲ್ಲಿಯೂ ಸಹ ಮತ್ತೊಂದು ಭಗವಾನ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆ ದೊರಕಿದೆ.
ಎರಡು ತೀರ್ಥಂಕರರ ಪ್ರತಿಮೆಗಳು ದೊರಕಿದ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ಪಟ್ಟಣದಲ್ಲಿನ ಶ್ರಾವಕ- ಶ್ರಾವಕಿಯರು ಮಂದಿರ ಕಡೆಗೆ ಧಾವಿಸಿ ಭಗವಂತರ ದರ್ಶನ ಪಡೆದುಕೊಂಡರು.
ಮಂದಿರದ ಪಂಡಿತರ ವರ್ಗ ಭಗವಂತರ ಪ್ರತಿಮೆಗಳಿಗೆ ಜಲಾಭೀಷೇಕ ಮಾಡಿ ಪ್ರತಿಮೆಗಳನ್ನು ಸ್ವಚ್ವಗೊಳಿಸಿದರು.
ಸದರಿ ಸ್ಥಳವನ್ನು ಪರಿಶೀಲಿಸಿದ ಕೆಲ ತಜ್ಞರ ಪ್ರಕಾರ ಈ ಎರಡು ಪ್ರತಿಮೆಗಳು 12 ಶತಮಾನದ ಪ್ರತಿಮೆಗಳಾಗಿರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಈಗಲೆ ಈ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಎರಡು ಪ್ರತಿಮೆಗಳ ಕೆಳಭಾಗದಲ್ಲಿ ಹಳೆಗನ್ನಡ ಅಕ್ಷರಗಳನ್ನು ಕೆತ್ತಲಾಗಿದ್ದು, ಇದರ ಅಧ್ಯಯನ ಬಳಿಕ ಸ್ಪಷ್ಟವಾದ ಮಾಹಿತಿ ಲಭ್ಯವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಎರಡು ಪ್ರತಿಮೆಗಳು ಸುಮಾರು 3 ಅಡಿ ಎತ್ತರವಾಗಿವೆ. ಒಂದು ಪ್ರತಿಮೆಯ ಕೆಲ ಭಾಗಗಳು ಖಂಡಿತವಾಗಿದ್ದರೆ, ಇನ್ನೊಂದು ಪ್ರತಿಮೆಯು ಮಧ್ಯಭಾಗದಲ್ಲಿಯೇ ಖಂಡಿತವಾಗಿದೆ.