ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ
ಯುವ ಭಾರತ ಸುದ್ದಿ ಗೋಕಾಕ :
ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದ್ದು, ಆ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಕಾರ್ಯವನ್ನು ಜಗತ್ತಿನಾದ್ಯಂತ ಜೆ.ಸಿ.ಐ ಸಂಸ್ಥೆ ಮಾಡುತ್ತಿದೆ ಎಂದು ಜೆ.ಸಿ.ಐ ವಲಯ ಅಧ್ಯಕ್ಷ ಎಂ.ಎಚ್.ಕಾಳಿಂಗರಾಜ ಹೇಳಿದರು.
ಬುಧವಾರದಂದು ನಗರದಲ್ಲಿ ಜೆ.ಸಿ.ಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಭೋಧಿಸಿ ಮಾತನಾಡಿದರು.
ಹುಟ್ಟು ಸಾವಿನ ಮಧ್ಯೆ ಸಮಾಜಕ್ಕೆ ಅಳಿಲು ಸೇವೆ ಮಾಡಬೇಕು. ಮಾನವೀಯ ಮೌಲ್ಯಗಳನ್ನು ವೃದ್ದಿಸಿಕೊಂಡು ಸಮಾಜಮುಖಿಯಾಗಿ ಬದುಕುವ ಕಲೆಯನ್ನು ಜೆ.ಸಿ.ಐ ಸಂಸ್ಥೆ ಕಲಿಸಿಕೊಡುತ್ತದೆ. ಭಾರತೀಯ ಸಂಸ್ಕೃತಿಯನ್ನು ಜಗತ್ತು ಗೌರವಿಸುತ್ತಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ನಮ್ಮ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ದೇಶವನ್ನು ವಿಶ್ವ ಗುರುವನ್ನಾಗಿಸಲು ಶ್ರಮಿಸುವಂತೆ ಕರೆ ನೀಡಿದರು.
ನೂತನ ಅಧ್ಯಕ್ಷರಾಗಿ ಶೇಖರ್ ಉಳ್ಳೇಗಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪ್ರಮೋದ ಎತ್ತಿನಮನಿ, ಮಹಿಳಾ ಅಧ್ಯಕ್ಷರಾಗಿ ಭಾಗೀರಥಿ ನಂದಗಾಂವಿ, ಕಾರ್ಯದರ್ಶಿಯಾಗಿ ಮಿನಾಕ್ಷಿ ಸವದಿ, ಜೂನಿಯರ್ ಜೆ.ಸಿ ಅಧ್ಯಕ್ಷರಾಗಿ ಸರ್ವೇಶ ತುಪ್ಪದ, ಕಾರ್ಯದರ್ಶಿಯಾಗಿ ಪೃಥ್ವಿ ಲಾತೂರ ಸೇರಿದಂತೆ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ವೇದಿಕೆಯ ಮೇಲೆ ಜೆಸಿಐ ವಲಯ ಉಪಾಧ್ಯಕ್ಷ ಇರ್ಶಾಧ ಭಾಷಾ, ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ, ನಿಕಟಪೂರ್ವ ಅಧ್ಯಕ್ಷ ರಜನಿಕಾಂತ್ ಮಾಳೋದೆ, ಜಿ.ಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಿಕ, ಎ.ಆರ್.ಟಿ.ಓ ಸದಾಶಿವ ಮರಲಿಂಗನವರ, ಕೆಎಲ್ಇ ಆಡಳಿತಾಧಿಕಾರಿ ಅನುಪಮಾ ಕೌಶಿಕ, ಕಿಶೋರ ಭಟ್, ಸುಸ್ಮೀತಾ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.