ನಿಲಜಿ ಗ್ರಾಮಸ್ಥರ ಬಹುಕಾಲದ ಕನಸು ನನಸು
1.50 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ
ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ನಿಲಜಿ ಗ್ರಾಮದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ ನೀಡಿದರು. ಇದರಿಂದಾಗಿ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ನಿಲಜಿ ಗ್ರಾಮದ ಕೆರೆಯ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಒಟ್ಟು 1.50 ಕೋಟಿ ರೂಗಳನ್ನು ಲಕ್ಷ್ಮಿ ಹೆಬ್ಬಾಳಕರ್ ಮಂಜೂರು ಮಾಡಿಸಿದ್ದಾರೆ. ಈ ಹಣದಲ್ಲಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಗಳಾದ ವಾಕಿಂಗ್ ಟ್ರ್ಯಾಕ್, ಗಣೇಶ ವಿಸರ್ಜನೆಯ ಸಲುವಾಗಿ ಪ್ರತ್ಯೇಕ ಟ್ಯಾಂಕ್ ನಿರ್ಮಾಣ, ವಾಶಿಂಗ್ ಸೌಲಭ್ಯ ಮುಂತಾದ ಅಭಿವೃದ್ಧಿಯ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಗುಣಮಟ್ಟ ಕಾಪಾಡುವ ಜೊತೆಗೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಗ್ರಾಮಸ್ಥರ ಆಶಯದಂತೆ ಹಂತಹಂತವಾಗಿ ಎಲ್ಲ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇಡೀ ಕ್ಷೇತ್ರ ಮಾದರಿಯಾದಾಗಲೇ ನನ್ನ ಕನಸು ನನಸಾಗುತ್ತದೆ. ಅಲ್ಲಿಯವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ಹೆಬ್ಬಾಳಕರ್ ತಿಳಿಸಿದರು.
ಕಾಮಗಾರಿಗಳ ಚಾಲನೆಯ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ನಾಗೇಶ್ ದೇಸಾಯಿ, ಚಾಯಪ್ಪ ಕಾಕಾ, ದೀಪಕ್, ಮಾಧುರಿ, ನಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.